ಸುಂದರ್‌ ಮೋಡಿಗೆ ಮಕಾಡೆ ಮಲಗಿದ ಕೀವಸ್‌

ಪುಣೆ

    ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ತಮ್ಮ ಸ್ಪಿನ್‌ ಮ್ಯಾಜಿಕ್ ಮೂಲಕ ಕಿವೀಸ್ ತಂಡವನ್ನು ಬೃಹತ್ ಮೊತ್ತ ಕಲೆಹಾಕದಂತೆ ತಡೆದಿದ್ದಾರೆ. ಬರೋಬ್ಬರಿ 3 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್​ಗೆ ಪುನರಾಗಮನ ಮಾಡಿದ ಸುಂದರ್ ಕಿವೀಸ್ ತಂಡದ ಏಳು ಬ್ಯಾಟ್ಸ್‌ಮನ್‌ಗಳಿಗೆ ಪೆವಿಲಿಯನ್ ಹಾದಿ ತೋರಿಸಿದರು.

    ಇದರಲ್ಲಿ ಸುಂದರ್, ಐವರು ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಕ್ಲೀನ್ ಬೌಲ್ಡ್ ಮಾಡಿದರೆ, ಒಂದು ಎಲ್ಬಿಡಬ್ಲ್ಯೂ ಮತ್ತು ಒಂದು ಕ್ಯಾಚ್ ಔಟ್ ಮಾಡಿದರು. ಮೊದಲ ಇನ್ನಿಂಗ್ಸ್​ನಲ್ಲಿ 23.1 ಓವರ್‌ ಬೌಲ್ ಮಾಡಿದ ಸುಂದರ್ 59 ರನ್ ನೀಡಿ 7 ವಿಕೆಟ್ ಪಡೆದರು. ಈ ಮೂಲಕ ಸುಂದರ್ ಟೆಸ್ಟ್ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅತ್ಯುತ್ತಮ ಸ್ಪೆಲ್ ಮಾಡಿದ ಭಾರತದ ಜಂಟಿ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

   ಈ ಪಂದ್ಯದಲ್ಲಿ ರಚಿನ್ ರವೀಂದ್ರ ರೂಪದಲ್ಲಿ ಮೊದಲ ವಿಕೆಟ್ ಪಡೆಯುವ ಮೂಲಕ ವಿಕೆಟ್​ಗಳ ಭೇಟೆ ಆರಂಭಿಸಿದ ಸುಂದರ್, ಇದರ ನಂತರ ಟಾಮ್ ಬ್ಲಂಡೆಲ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಟಿಮ್ ಸೌಥಿ, ಅಜಾಜ್ ಪಟೇಲ್ ಮತ್ತು ಮಿಚೆಲ್ ಸ್ಯಾಂಟ್ನರ್ ಅವರನ್ನು ಪೆವಿಲಿಯನ್​ಗಟ್ಟುವಲ್ಲಿ ಯಶಸ್ವಿಯಾದರು. ವಾಷಿಂಗ್ಟನ್ ಸುಂದರ್ ಟೆಸ್ಟ್ ಪಂದ್ಯವೊಂದರ ಇನ್ನಿಂಗ್ಸ್‌ನಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದಿರುವುದು ಇದೇ ಮೊದಲು.

    ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಪರ 4 ಪಂದ್ಯಗಳಲ್ಲಿ 6 ವಿಕೆಟ್ ಪಡೆದಿದ್ದ ವಾಷಿಂಗ್ಟನ್ ಸುಂದರ್ ಈ ಬಾರಿ ಒಂದೇ ಇನ್ನಿಂಗ್ಸ್​ನಲ್ಲಿ 7 ವಿಕೆಟ್ ಪಡೆದಿದ್ದಾರೆ. ನಾಯಕ ರೋಹಿತ್ ಶರ್ಮಾ ಎರಡನೇ ಟೆಸ್ಟ್ ಪಂದ್ಯಕ್ಕೆ ಪ್ಲೇಯಿಂಗ್ 11 ಘೋಷಿಸಿದಾಗ, ಎಲ್ಲರೂ ಆಶ್ಚರ್ಯಚಕಿತರಾಗಿದ್ದರು. ಕಾರಣ ತಂಡದಲ್ಲಿ ಕುಲ್ದೀಪ್ ಯಾದವ್ ಬದಲಿಗೆ ವಾಷಿಂಗ್ಟನ್ ಸುಂದರ್ ಅವರನ್ನು ಆಯ್ಕೆ ಮಾಡಲಾಗಿತ್ತು. ಹೀಗಿರುವಾಗ ಸುನಿಲ್ ಗವಾಸ್ಕರ್ ಕೂಡ ಈ ನಿರ್ಧಾರವನ್ನು ತಪ್ಪು ಎಂದಿದ್ದರು. ಈ ಪಂದ್ಯದಲ್ಲಿ ಕುಲ್ದೀಪ್‌ಗೆ ಅವಕಾಶ ಸಿಗಬೇಕಿತ್ತು ಎಂದು ಗವಾಸ್ಕರ್ ವೀಕ್ಷಕ ವಿವರಣೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಆದರೆ ವಾಷಿಂಗ್ಟನ್ ಸುಂದರ್ ತಮ್ಮ ಪ್ರದರ್ಶನದ ಮೂಲಕ ಟೀಕಾಕಾರರ ಬಾಯಿ ಮುಚಿಸುವಲ್ಲಿ ಯಶಸ್ವಿಯಾಗಿದ್ದಾರೆ.