ಬೆಂಗಳೂರು:
ಹಿಜಾಬ್ ಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ತೀರ್ಪು ನಮಗೆ ಅಸಮಾಧಾನ ತಂದಿದೆ. ಆದುದರಿಂದ, ಗುರುವಾರ(ಇಂದು) ಒಂದು ದಿನದ ಶಾಂತಿಯುತ ಕರ್ನಾಟಕ ಬಂದ್‌ಗೆ ಕರೆ ನೀಡಲಾಗುತ್ತಿದೆ ಎಂದು ಇಮಾರತ್ ಎ ಶರೀಅ ಮುಖ್ಯಸ್ಥ ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ಖಾನ್ ರಶಾದಿ ತಿಳಿಸಿದ್ದಾರೆ.
ಕಾರ್ಮಿಕರು, ಸರ್ಕಾರಿ ಉದ್ಯೋಗಿಗಳು ಸೇರಿದಂತೆ ಸಮುದಾಯದ ಎಲ್ಲರೂ ಬಂದ್ ಪಾಲ್ಗೊಳ್ಳುವಂತೆ ಕೋರಿದ್ದಾರೆ. ಸಮುದಾಯದ ಶಾಲಾ-ಕಾಲೇಜುಗಳನ್ನು ಬಂದ್ ಮಾಡುವಂತೆ ಮನವಿ ಮಾಡಿದೆ. ಆದರೆ, ಇದು ಶಾಂತಿಯುತ ಪ್ರತಿಭಟನೆಯಾಗಿದ್ದು, ಬಲವಂತದ ಬಂದ್ ಮಾಡಬಾರದು ಮತ್ತು ಜಾಥಾ, ಮೆರವಣಿಗೆ ಕೂಡ ನಡೆಸಬಾರದು ಎಂದು ಕೋರಲಾಗಿದೆ.
ʻಶಾಲಾ- ಕಾಲೇಜಿನಲ್ಲಿ ಹಿಜಾಬ್ ಧರಿಸುವಂತಿಲ್ಲ, ಸರ್ಕಾರದ ವಸ್ತ್ರ ಸಂಹಿತೆಯನ್ನು ಪ್ರಶ್ನೆ ಮಾಡುವಂತಿಲ್ಲʼ ಎಂದು ಮಂಗಳವಾರ ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಸಗೀರ್ ಅಹ್ಮದ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಸಭೆ ನಡೆಸಿದ ವಿವಿಧ ಮುಸ್ಲಿಂ ಸಂಘಟನೆಗಳು ಇಂದು ಕರ್ನಾಟಕ ಬಂದ್‌ಗೆ ತೀರ್ಮಾನಿಸಿವೆ.
ಈ ಬಂದ್ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ವಿಸಲು ಪ್ರಯತ್ನಿಸಬಾರದು, ಪ್ರಮುಖವಾಗಿ ಯುವಕರು ಯಾವುದೇ ರೀತಿಯ ರ‌್ಯಾಲಿಗಳನ್ನು ನಡೆಸುವುದಾಗಲಿ, ಘೋಷಣೆಗಳನ್ನು ಕೂಗುವುದಾಗಿ ಮಾಡಬಾರದು ಎಂದು ಅವರು ತಿಳಿಸಿದರು.
ಬಂದ್ ಅತ್ಯಂತ ಶಾಂತಿಯುತವಾಗಿ ನಡೆಯಬೇಕು. ಅದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಅಮೀರ್ ಎ ಶರೀಅತ್ ಕರೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ