ಇನ್ಮುಂದೆ ಬಿಪಿಎಲ್ ಕಾರ್ಡ್ ಸಿಗೋದಿಲ್ಲ : ಕಾರಣ ಗೊತ್ತ…?

ಬೆಂಗಳೂರು

    ರಾಜ್ಯದಲ್ಲಿ ಇನ್ನು ಮುಂದೆ ಹೊಸ ಬಿಪಿಎಲ್ ಕಾರ್ಡ್ ಸಿಗೋದಿಲ್ಲ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್​ಎಫ್​ಎಸ್​ಎ) ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಶೇ.76.04, ನಗರ ಪ್ರದೇಶಗಳಲ್ಲಿ ಶೇ.49.36 ಸೇರಿ ಒಟ್ಟು 3,58,87,666 ಫಲಾನುಭವಿಗಳಿಗೆ 1,03,70,669 ಬಿಪಿಎಲ್ ಕಾರ್ಡ್ ನೀಡಬೇಕೆಂಬ ನಿಯಮವಿದೆ.

    ರಾಜ್ಯದಲ್ಲಿ ಸದ್ಯ 3,92,54,052 ಫಲಾನುಭವಿಗಳಿಗೆ 1,16,98,551 ಬಿಪಿಎಲ್ ಕಾರ್ಡ್​ಗಳನ್ನು ನೀಡಲಾಗಿದೆ. ನಿಗದಿಗಿಂತ ಹೆಚ್ಚುವರಿಯಾಗಿ 13,27,882 ಬಿಪಿಎಲ್ ಕಾರ್ಡ್ ನೀಡಲಾಗಿದೆ. ಇದರಿಂದಾಗಿ ವರ್ಷದಿಂದ ವರ್ಷಕ್ಕೆ ಸರ್ಕಾರದ ಮೇಲೆ ಆರ್ಥಿಕ ಹೊರೆ ಬೀಳುತ್ತಿದೆ. ಹೀಗಾಗಿ, ಹೊಸ ಬಿಪಿಎಲ್ ಕಾರ್ಡ್ ನೀಡುವುದನ್ನು ಸ್ಥಗಿತಗೊಳಿಸಲು ಆಹಾರ ಇಲಾಖೆ ಚಿಂತಿಸಿದೆ.

    ರೇಷನ್ ಕಾರ್ಡ್​ನಲ್ಲಿ ಹೆಸರು ಬದಲಾವಣೆ, ಆಧಾರ್ ಕಾರ್ಡ್​ನಲ್ಲಿರುವ ಹೆಸರು ಸೇರ್ಪಡೆ, ಹೊಸ ಸದಸ್ಯರು ಸೇರಿಸುವುದು, ಯಾರಾದರೂ ಮೃತಪಟ್ಟರೆ ಅಂಥವರ ಹೆಸರು ಡಿಲೀಟ್, ಬೇರೆ ಜಿಲ್ಲೆಗೆ ವರ್ಗಾವಣೆ ಹಾಗೂ ವಿಳಾಸ ಪರಿಷ್ಕರಣೆ ಮಾಡಲು ಆಹಾರ ಇಲಾಖೆ ಅವಕಾಶ ಕೊಟ್ಟಿದೆ. ಸೆ.1ರಿಂದ ಸೆ.10ರವರೆಗೆ ಬಾಪೂಜಿ ಸೇವಾ ಕೇಂದ್ರ, ಬೆಂಗಳೂರು ಓನ್ ಹಾಗೂ ಕರ್ನಾಟಕ ಓನ್ ಸೇರಿ ಇತರ ಕಡೆಗಳಲ್ಲಿ ರೇಷನ್ ಕಾರ್ಡ್ ಮಾರ್ಪಾಡು, ತಿದ್ದುಪಡಿ ಮಾಡಿಸಿಕೊಳ್ಳಬಹುದು.

    ಹೊಸ ಕಾರ್ಡ್ ವಿತರಣೆಗೆ ಸರ್ಕಾರ ಯಾವಾಗ ಅನುಮತಿ ಕೊಡುತ್ತದೆ ಎಂಬ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇಲ್ಲ. ಒಂದು ವೇಳೆ ಅನುಮತಿ ಕೊಟ್ಟರೂ ‘ಅನರ್ಹರ ಪತ್ತೆ ಮೊದಲು; ಪಡಿತರ ಚೀಟಿ ವಿತರಣೆ ಆನಂತರ’ ಎಂಬ ಸೂತ್ರವನ್ನು ಇಲಾಖೆ ಅಳವಡಿಸಿಕೊಂಡು ಅರ್ಜಿಗಳನ್ನು ವಿಲೇವಾರಿ ಮಾಡಬೇಕಾಗುತ್ತದೆ. ಈ ಹಿಂದೆ ಖೊಟ್ಟಿ ದಾಖಲೆ ಕೊಟ್ಟು ಆರ್ಥಿಕ ಸಬಲರು, ಅನರ್ಹರು ಪಡೆದಿರುವ ಬಿಪಿಎಲ್ ಕಾರ್ಡ್​ಗಳನ್ನು ರದ್ದುಪಡಿಸಿದ ಆಧಾರದಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡುವ ನಿರೀಕ್ಷೆಯಿದೆ.

     ಬಾಕಿ ಅರ್ಜಿಗಳನ್ನು ನಿಗದಿಪಡಿಸಿದ ಮಾನದಂಡ ಆಧಾರದಲ್ಲಿ ಪರಿಶೀಲಿಸಬೇಕು. ಯಾವುದೇ ಅರ್ಜಿ ಅನರ್ಹವಾಗಿದ್ದಲ್ಲಿ ಅದನ್ನು ಎಪಿಎಲ್​ಗೆ ಶಿಫಾರಸು ಮಾಡಬೇಕು. ಪ್ರತಿ ಅರ್ಜಿ ಪರಿಶೀಲಿಸುವ ವೇಳೆ ಅರ್ಜಿದಾರರು ಜಂಟಿ ಕುಟುಂಬವೇ, ಜಂಟಿ ಕುಟುಂಬದಿಂದ ಪ್ರತ್ಯೇಕವಾಗಲು ಅರ್ಜಿ ಸಲ್ಲಿಸುವವರೇ, ಎಪಿಎಲ್ ಚೀಟಿ ಹೊಂದಿರುವವರೇ ಅಥವಾ ಯಾವುದಾದರೂ ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆಯಾಗಿದೆಯೇ ಎಂದು ಪರಿಶೀಲಿಸಬೇಕು.

     ಅರ್ಜಿಗಳ ಅರ್ಹತೆ ಮತ್ತು ಅನರ್ಹತೆ ಬಗ್ಗೆ ಪರಿಶೀಲಿಸಬೇಕೇ ಹೊರತು ಹೊಸ ಕಾರ್ಡ್​ನ್ನು ಮಂಜೂರು ಮಾಡಬಾರದು ಎಂದು ಹಿಂದಿನ ಸರ್ಕಾರ ಆದೇಶಿಸಿತ್ತು. ಅದರಂತೆ, ಬಾಕಿ ಉಳಿದಿರುವ ಅರ್ಜಿಗಳನ್ನು ಮೇಲಿನ ನಿಯಮಗಳಂತೆ ಇಲಾಖೆ ಪರಿಶೀಲಿಸಿ ಮಂಜೂರಾತಿಗೆ ಸಿದ್ಧತೆ ಮಾಡಿಕೊಂಡಿದೆ.

     ರಾಜ್ಯದಲ್ಲಿ ಬಾಕಿ ಉಳಿದಿರುವ 2,95,986 ಅರ್ಜಿಗಳ ವಿಲೇವಾರಿಗೆ ಅನುಮತಿ ನೀಡುವಂತೆ ಆಹಾರ ಇಲಾಖೆ ಸರ್ಕಾರಕ್ಕೆ ಪತ್ರ ಬರೆದು ಎರಡು ತಿಂಗಳಾಗಿದೆ. ಇದುವರೆಗೂ ಸರ್ಕಾರ ಅನುಮತಿ ನೀಡಿಲ್ಲ. ಹಿಂದೆ ಹೊಸ ರೇಷನ್ ಕಾರ್ಡ್, ಸೇರ್ಪಡೆ, ತಿದ್ದುಪಡಿ ಕೋರಿ ಇದುವರೆಗೆ ಇಲಾಖೆಗೆ ಸಲ್ಲಿಕೆಯಾದ ಒಟ್ಟು 39,04,798 ಅರ್ಜಿಗಳ ಪೈಕಿ 26,48,171 ಅರ್ಜಿಗಳು ಅನುಮೋದನೆಗೊಂಡರೆ, 9,60,641 ಅರ್ಜಿಗಳು ತಿರಸ್ಕಾರಗೊಂಡಿದ್ದವು. ಮೇ ತಿಂಗಳಲ್ಲಿ ಚುನಾವಣಾ ನೀತಿಸಂಹಿತೆ ಕಾರಣ ಪಡಿತರ ಚೀಟಿ ವಿತರಣೆ, ಹೆಸರು ಸೇರ್ಪಡೆ, ತಿದ್ದುಪಡಿ ಸ್ಥಗಿತಗೊಳಿಸಲಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link