ಬೆಂಗಳೂರು:
ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ನಿರ್ಬಂಧಿಸಿರುವ ವಿಚಾರದಲ್ಲಿ ಉಂಟಾಗಿರುವ ವಿವಾದ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ರಾಷ್ಟ್ರಮಟ್ಟದಲ್ಲೂ ಈ ಬಗ್ಗೆ ಚರ್ಚೆಯಾಗುತ್ತಿರುವ ನಡುವೆಯೇ ಎಲ್ಲರ ಚಿತ್ತ ಇದೀಗ ಹೈಕೋರ್ಟ್ನತ್ತ ನೆಟ್ಟಿದೆ.
ಹಿಜಾಬ್ ಕುರಿತು ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಮಂಗಳವಾರ ಹೈಕೋರ್ಟ್ನಲ್ಲಿ ನಡೆಯಲಿದೆ.
ಹಿಜಾಬ್ ಧರಿಸುವುದನ್ನು ನಿರ್ಬಂಧಿಸಿದ ಉಡುಪಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಕ್ರಮ ಪ್ರಶ್ನಿಸಿ ವಿದ್ಯಾರ್ಥಿನಿಯರು, ಪಾಲಕರು ಸಲ್ಲಿಸಿರುವ ಎರಡು ಪ್ರತ್ಯೇಕ ಅರ್ಜಿಗಳನ್ನು ಹೈಕೋರ್ಟ್ ವಿಚಾರಣೆ ನಡೆಸಲಿದೆ.
ಈ ಮಧ್ಯೆ, ಹಿಜಾಬ್ ಧರಿಸಿದವರಿಗೆ ಪ್ರವೇಶ ನಿರ್ಬಂಧಿಸಿರುವ ಕುಂದಾಪುರ ತಾಲೂಕಿನ ಭಂಡಾರ್ಕರ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಕ್ರಮ ಪ್ರಶ್ನಿಸಿ ಮತ್ತಿಬ್ಬರು ಬಿಬಿಎ ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿದ್ದು, ಈ ಅರ್ಜಿಯನ್ನೂ ಮಂಗಳವಾರ ಕೋರ್ಟ್ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.
ಉಡುಪಿ ಕಾಲೇಜಿನಲ್ಲಿ ಹಿಜಾಬ್ ನಿರ್ಬಂಧ ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಗಳು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠದ ಮುಂದೆ ಫೆ. 3ರಂದು ವಿಚಾರಣೆಗೆ ನಿಗದಿಯಾಗಿತ್ತು.
ಆದರೆ, ಪ್ರಕರಣದ ಬಗ್ಗೆ ಸರ್ಕಾರದಿಂದ ಮಾಹಿತಿ ಪಡೆದು ವಾದ ಮಂಡಿಸಲು ಕಾಲಾವಕಾಶ ನೀಡುವಂತೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ ಮನವಿ ಮಾಡಿದ್ದರಿಂದ, ವಿಚಾರಣೆಯನ್ನು ಫೆ.8ಕ್ಕೆ ಮುಂದೂಡಲಾಗಿತ್ತು.
ಸಮವಸ್ತ್ರ ಸಂಹಿತೆ ಪಾಲನೆಗೆ ಸುತ್ತೋಲೆ
ಹಿಜಾಬ್ ಗಲಾಟೆಯನ್ನು ನಿಯಂತ್ರಿಸಲು ಮುಂದಾದ ಸರ್ಕಾರ ಫೆ. 5ರಂದು ಸುತ್ತೋಲೆ ಹೊರಡಿಸಿ, ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಸಮವಸ್ತ್ರ ಧರಿಸುವುದು ಕಡ್ಡಾಯ. ಖಾಸಗಿ ಶಾಲೆಗಳಲ್ಲಿ ಆಯಾ ಆಡಳಿತ ಮಂಡಳಿಗಳು ನಿರ್ಧರಿಸಿರುವ ಸಮವಸ್ತ್ರ ಧರಿಸಬೇಕು.
ಪದವಿ ಪೂರ್ವ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿನ ಕಾಲೇಜುಗಳಲ್ಲಿ ಆಯಾ ಕಾಲೇಜಿನ ಅಭಿವೃದ್ಧಿ ಸಮಿತಿ ಅಥವಾ ಆಡಳಿತ ಮಂಡಳಿಯ ಮೇಲ್ವಿಚಾರಣಾ ಸಮಿತಿ ನಿರ್ಧರಿಸಿರುವ ವಸ್ತ್ರ ಧರಿಸಬೇಕು. ಆಡಳಿತ ಮಂಡಳಿಗಳು ಸಮವಸ್ತ್ರ ನಿಗದಿಪಡಿಸದಿದ್ದರೆ ಸಮಾನತೆ, ಐಕ್ಯತೆ ಕಾಪಾಡಿಕೊಂಡು ಸಾರ್ವಜನಿಕ ಸುವ್ಯವಸ್ಥೆ ಭಂಗ ಉಂಟಾಗದಂಥ ಉಡುಪುಗಳನ್ನು ಧರಿಸಬೇಕು ಎಂದು ಸೂಚಿಸಿತ್ತು.
ಸುತ್ತೋಲೆಯಲ್ಲಿ ಸಮವಸ್ತ್ರ ಸಂಹಿತೆ ಕುರಿತು ಸುಪ್ರೀಂಕೋರ್ಟ್ ಹಾಗೂ ದೇಶದ ವಿವಿಧ ಹೈಕೋರ್ಟ್ಗಳು ನೀಡಿದ್ದ ತೀರ್ಪಗಳನ್ನೂ ಸರ್ಕಾರ ಉಲ್ಲೇಖಿಸಿದೆ. ಇಂದು ನಡೆಯುವ ವಿಚಾರಣೆಯಲ್ಲಿ ಸರ್ಕಾರ ಫೆ.5ರಂದು ಹೊರಡಿಸಿರುವ ಸುತ್ತೋಲೆ ಹಾಗೂ ಈ ವಿಚಾರದಲ್ಲಿ ಇತರ ನ್ಯಾಯಾಲಯಗಳು ಹೊರಡಿಸಿರುವ ತೀರ್ಪಗಳನ್ನು ನ್ಯಾಯಾಲಯದ ಗಮನಕ್ಕೆ ತರುವ ಸಾಧ್ಯತೆ ಇದೆ.
ಆಕ್ಷೇಪವೇನು?:
ಹಿಜಾಬ್ ಧಾರಣೆ ನಿರ್ಬಂಧಿಸುವುದು ಸಂವಿಧಾನದ ಪರಿಚ್ಛೇದ 14 ಮತ್ತು 25ರ ಅನ್ವಯ ಸಂವಿಧಾನದತ್ತ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ.
ಧಾರ್ವಿುಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಲು ಸರ್ಕಾರಕ್ಕೆ ಅಧಿಕಾರವಿಲ್ಲ. ಕಾಲೇಜುಗಳು ಹಿಜಾಬ್ ನಿರ್ಬಂಧಿಸಿರುವುದು ಸಾಂವಿಧಾನಿಕ ಅವಕಾಶಗಳ ನಿರಾಕರಣೆಯಾಗಿದೆ ಎಂದು ಆಕ್ಷೇಪಿಸಿರುವ ವಿದ್ಯಾರ್ಥಿನಿಯರು, ಹಿಜಾಬ್ ಧರಿಸುವ ವಿದ್ಯಾರ್ಥಿನಿಯರನ್ನು ಕಾಲೇಜಿಗೆ ಬರುವುದನ್ನು ನಿರ್ಬಂಧಿಸಿ ಪ್ರಾಂಶುಪಾಲರು ಹೊರಡಿಸಿರುವ ಆದೇಶ ಅಸಾಂವಿಧಾನಿಕ ಎಂದು ಘೊಷಿಸಿ ಅದನ್ನು ರದ್ದುಪಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಆದೇಶ ಪಾಲನೆ ಕಡ್ಡಾಯ ಎಂದ ಸಿಎಂ ಬೊಮ್ಮಾಯಿ:
ಶಾಲೆ-ಕಾಲೇಜುಗಳಲ್ಲಿ ಸಮವಸ್ತ್ರ ಸಂಹಿತೆ ಪಾಲನೆ ಸಂಬಂಧ ಸರ್ಕಾರ ಈಗಾಗಲೆ ಹೊರಡಿಸಿದ ಸುತ್ತೋಲೆ ಪಾಲಿಸುವುದು ಕಡ್ಡಾಯ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಈ ಬಗ್ಗೆ ಅಲ್ಲಿಯೂ ಚರ್ಚೆಯಾಗಿ ತೀರ್ವನವಾಗಲಿದೆ. ಶಾಂತಿ, ಸುವ್ಯವಸ್ಥೆ ಕದಡುವ ಪ್ರಯತ್ನ ಮಾಡ ಬಾರದು. ಹೈಕೋರ್ಟ್ ತೀರ್ಪು ಬರುವ ತನಕ ಕರ್ನಾಟಕ ಶಿಕ್ಷಣ ಕಾಯ್ದೆಯ ನಿಯಮಗಳ ಅನುಸಾರ ಹೊರಡಿಸಿದ ಸುತ್ತೋಲೆಯಂತೆ ಸಮವಸ್ತ್ರ ಸಂಹಿತೆ ಪರಿಪಾಲಿಸಬೇಕು ಎಂದು ಪುನರುಚ್ಚರಿಸಿದ್ದಾರೆ.
ಹಲವು ಜಿಲ್ಲೆಗಳಿಗೆ ವ್ಯಾಪಿಸಿದ ವಿವಾದ:
ಹಿಜಾಬ್ ಪರ-ವಿರೋಧ ಜಟಾಪಟಿ ರಾಜ್ಯದ ಹಲವು ಜಿಲ್ಲೆಗಳಿಗೆ ವ್ಯಾಪಿಸಿದೆ. ಸರ್ಕಾರದ ನಿರ್ದೇಶನದ ಹೊರತಾಗಿಯೂ ಹಲವು ವಿದ್ಯಾರ್ಥಿನಿಯರು ಸೋಮವಾರ ಹಿಜಾಬ್ ಧರಿಸಿ ಕಾಲೇಜಿಗೆ ಬಂದರೆ, ಇದಕ್ಕೆ ಪ್ರತಿಯಾಗಿ ಕೇಸರಿ ಶಾಲು ಧರಿಸಿ ಹಲವರು ಕಾಲೇಜು ಪ್ರವೇಶಿಸಿದರು.
ಚಿಕ್ಕಮಗಳೂರಿನ ಐಡಿಎಸ್ಜಿ ಕಾಲೇಜಿನಲ್ಲಿ ನೀಲಿ ಶಾಲು ಧರಿಸಿದ ಕೆಲ ವಿದ್ಯಾರ್ಥಿಗಳು ಘೋಷಣೆ ಕೂಗಿದ ಕಾರಣ ಕೆಲಕಾಲ ಗೊಂದಲದ ವಾತಾವರಣ ನಿರ್ವಣವಾಗಿತ್ತು. ಕೆಲವು ಕಡೆ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ