‘ಮಾಧ್ಯಮ, ಮಠಾಧೀಶರು ಒಪ್ಪಂದಶಾಹಿಗಳಾಗಬಾರದು’ :ಹಿರೇಮಠ ಶ್ರೀ

ತುಮಕೂರು:

     ಮಾಧ್ಯಮ ಹಾಗೂ ಮಠಾಧಿಪತಿಗಳು ಯಾವತ್ತೂ ಒಪ್ಪಂದಶಾಹಿಗಳಾಗಬಾರದು. ಈ ಎರಡೂ ಪವಿತ್ರ ಕ್ಷೇತ್ರಗಳು, ಅವುಗಳ ಪಾವಿತ್ರತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಮಾಧ್ಯಮ ಅsftfr  ವಾಗಬಾರದು, ತಪ್ಪು ಒರೆಸುವ ವಸ್ತವಾಗಬೇಕು ಎಂದು ಹಿರೇಮಠ ಅಧ್ಯಕ್ಷರಾದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ನಗರದ ಕನ್ನಡ ಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳನ್ನು ಕುರಿತ ‘ಜ್ಞಾನ ದಾಸೋಹಿ’ ಕವನ ಸಂಕಲನ ಬಿಡುಗಡೆ ಹಾಗೂ ಪರಿಷತ್ತಿನ ರಾಜ್ಯೋತ್ಸವ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

     ಈ ದೇಶದ ಭವಿಷ್ಯ ಇಂದಿನ ಮಕ್ಕಳ ಕೈಯ್ಯಲ್ಲಿದೆ. ಮಕ್ಕಳಿಗೆ ಭವಿಷ್ಯದಲ್ಲಿ ದೊಡ್ಡ ಜವಾಬ್ದಾರಿಯಿದೆ, ಅದನ್ನು ಸಮರ್ಥವಾಗಿ ನಿಭಾಯಿಸಿಲು ಅವರನ್ನು ಈಗಿನಿಂದಲೇ ಸನ್ನದ್ಧಗೊಳಿಸಬೇಕು. ಹಿಂದಿನ 50-70 ವರ್ಷಗಳಲ್ಲಿ ಸಮಾಜದಲ್ಲಿ ಒಳ್ಳೆಯ ವಾತಾವರಣವಿತ್ತು ಅಂದು ಒಳ್ಳೆಯವರಾಗಿ ಬಾಳುವುದು ಸುಲಭವಾಗಿತ್ತು. ಇಂದು ಅಂತಹ ಒಳ್ಳೆಯ ವಾತಾವರಣ ಇಲ್ಲ, ಅದರ ನಡುವೆ ಒಳ್ಳೆಯವರಾಗಿ ಬಾಳುವುದು ಇಂದಿನ ಮಕ್ಕಳಿಗೆ ಸವಾಲೇ ಆಗಿದೆ ಎಂದರು.

    ಇಂದು ಸೌಲಭ್ಯಗಳು ಹೇರಳವಾಗಿವೆ. ಬೇಕಾದನ್ನು ಪಡೆಯಬಹುದಾಗಿದೆ. ಸೌಲಭ್ಯವಿದೆ, ಆದರೆ ಸಂಸ್ಕೃತಿ ಮರೆಯಾಗಿದೆ. ಈ ಪರಿಸ್ಥಿಯಲ್ಲಿ ಮಕ್ಕಳಿಗೆ ಒಳ್ಳೆಯದನ್ನು ತಿಳಿಸುವ, ಕಲಿಸುವ ಹೊಣೆಗಾರಿಕೆ ಹಿರಿಯರ ಮೇಲಿದೆ ಎಂದು ಹೇಳಿದರು.

    ಪಾವಗಡದ ರಾಮಕೃಷ್ಣ ಸೇವಾಶ್ರಮದ ಡಾ.ಜಪಾನಂದಜೀ ಸ್ವಾಮೀಜಿ ಅವರು ಹಿರೇಮಠ ಶ್ರೀಗಳನ್ನು ಕುರಿತ ಜ್ಞಾನ ದಾಸೋಹಿ ಕವನ ಸಂಕಲನ ಬಿಡುಗಡೆ ಮಾಡಿ, ಹಿರೇಮಠ ಸ್ವಾಮೀಜಿಗಳು ತಮ್ಮ ಮಾತು, ಕೃತಿ, ಕಾಯಕದ ಮೂಲಕ ಸಾಮಾಜಿಕ ಸುಧಾರಣಾ ಕಾರ್ಯ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

    ಎಷ್ಟೋ ವರ್ಷಗಳ ಹಿಂದೆ ಋಷಿಮುನಿಗಳು, ಗುರುಗಳು ರಚಿಸಿದ ಉಪನಿಷತ್ತುಗಳು ಇಂದಿಗೂ ಪ್ರಸ್ತುತವಾಗಿವೆ. ಆಗಿನ ವಚನಕಾರರು ಸಾರಿದ ವಚನಗಳು, ಅನುಭಾವದ ನುಡಿಗಳು ಸಾರ್ವಕಾಲಿಕ ಸಂದೇಶಗಳಾಗಿ ಮಹತ್ವ ಉಳಿಸಿಕೊಂಡಿವೆ ಎಂದು ಹೇಳಿದರು.

     ಹಿರೇಮಠ ಸ್ವಾಮೀಜಿಗಳು ಆಧ್ಯಾತ್ಮಿಕ ತವನಿಧಿ, ಇವರು ಆಡುವ ಮಾತು ಮಾತಲ್ಲ, ಮುತ್ತು. ಇವರು ನುಡಿ ಸೂಕ್ತಿ ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎನ್ನುವ ಮಾತು ಮಹತ್ವವಾದದ್ದು. ಮಕ್ಕಳು ಕೇವಲ ತಂದೆ, ತಾಯಿಯ ಆಸ್ತಿಯಾಗದೆ ನಾಡಿನ, ದೇಶದ ಅಸ್ತಿಯಾಗಬೇಕು ಎಂದು ಹೇಳಿದರು.

    ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಾಹಿತ್ಯ ಮತ್ತು ಸಂಶೋಧನೆಗೆ ಡಾ.ಸಿ.ನಾಗಭೂಷಣ್, ಸಾಹಿತ್ಯ ಮತ್ತು ಪ್ರಕಾಶನಕ್ಕೆ ಸೊಂದಲಗೆರೆ ಲಕ್ಷ್ಮಿಪತಿ, ಕಥಾ ವಿಭಾಗದಿಂದ ವಿಜಯಾ ಮೋಹನ್, ಕಾವ್ಯ ವಿಭಾಗದಿಂದ ರಂಗಮ್ಮ ಹೊದೆಕಲ್, ಸಂಘಟನೆಗಾಗಿ ಬಿ.ಟಿ.ಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಇದೇ ವೇಳೆ, ಎಸ್.ಆರ್.ದೇವಪ್ರಕಾಶ್ ದತ್ತಿ ಮಾಧ್ಯಮ ಪ್ರಶಸ್ತಿಯನ್ನು ವಿಜಯವಾಣಿಯ ಹಿರಿಯ ವರದಿಗಾರ ಜಗನ್ನಾಥ್ ಕಾಳೇನಹಳ್ಳಿ ಹಾಗೂ ಕುಣಿಗಲ್ ಸಂಜೆವಾಣಿ ವರದಿಗಾರ ರಾಮಚಂದ್ರಯ್ಯ ಅವರಿಗೆ ವಿತರಿಸಿಲಾಯಿತು.

    ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಸಮಾರಂಭದ ಅದ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಡಾ.ಕವಿತಾಕೃಷ್ಣ, ಮಾಧ್ಯಮ ದತ್ತಿನಿಧಿ ದಾನಿ ಎಸ್.ಆರ್.ದೇವಪ್ರಕಾಶ್ ಅತಿಥಿಯಾಗಿ ಭಾಗವಹಿಸಿದ್ದರು. ಜಿಲ್ಲಾ ಕಸಾಪ ಕಾರ್ಯರ್ಶಿಗಳಾದ ಡಾ.ಡಿ.ಎನ್.ಯೋಗೀಶ್ವರಪ್ಪ, ಕೆ.ಕಂಟಲಗೆರೆ ಸಣ್ಣಹೊನ್ನಯ್ಯ, ಕೋಶಾದ್ಯಕ್ಷ ಎಂ.ಹೆಚ್.ನಾಗರಾಜು,ಜಿಲ್ಲಾ ಸಂಚಾಲಕ ಉಮಾಮಹೇಶ್ ಮೊದಲಾದವರು ಪಾಲ್ಗೊಂಡಿದ್ದರು.ನಂತರ ನಡೆದ ಕವಿಗೋಷ್ಠಿಯಲ್ಲಿ ಜಿಲ್ಲೆಯ ವಿವಿಧ ಕವಿಗಳು ಕವನ ವಾಚನ ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap