ಚಿತ್ರದುರ್ಗ:
ಚಳ್ಳಕೆರೆ ನಗರಸಭೆ ವ್ಯಾಪ್ತಿಯಲ್ಲಿ ವಾಸವಾಗಿರುವ ವಸತಿ ಮತ್ತು ನಿವೇಶನ ರಹಿತರು ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ) ಸರ್ವರಿಗೂ ಸೂರು (ಎಹೆಚ್‍ಪಿ) ಯೋಜನೆಯಡಿ ರಿ.ಸ.ನಂ 56,57,58 ಮತ್ತು 722ರಲ್ಲಿ ಜಿ+2 ಮಾದರಿಯ (ಬಹುಮಹಡಿ) 1008 ಮನೆಗಳನ್ನು ನಿರ್ಮಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುಮೋದನೆಯಾಗಿದೆ.
ನಗರ ಆಶ್ರಯ ಸಮಿತಿ ಸಭೆಯಲ್ಲಿ ಆಯ್ಕೆಯಾದ ಫಲಾನುಭವಿಗಳು ಮತ್ತು ಆಸಕ್ತ ಹೊಸ ಅರ್ಜಿದಾರರು ದಾಖಲೆಗಳನ್ನು ನೀಡಲು ಮತ್ತು ಫಲಾನುಭವಿ ವಂತಿಕೆ ರೂ.63,0000/- ಶೇ10% ಘಟಕದ ವೆಚ್ಚ ಪಾವತಿಸಬೇಕಿದ್ದು, ಇದರಲ್ಲಿ ಮೊದಲ ಹಂತವಾಗಿ ರೂ.10,000/- ಗಳನ್ನು ಪೌರಾಯುಕ್ತರು, ನಗರಸಭೆ, ಚಳ್ಳಕೆರೆರವರ ಹೆಸರಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಲ್ಲಿ ತೆರೆಯಲಾಗಿರುವ PMAY-ESCROW ಖಾತೆಗೆ ಹಣ ಪಾವತಿಸಲು ಈ ಮೂಲಕ ಸೂಚಿಸಲಾಗಿದೆ. ಫೆಬ್ರವರಿ 15ರೊಳಗೆ ಫಲಾನುಭವಿಗಳು ಹಣ ಪಾವತಿಸಬೇಕೆಂದು ತಿಳಿಸಲಾಗಿದೆ.
ಸಲ್ಲಿಸಬೇಕಾದ ದಾಖಲಾತಿಗಳ ವಿವರ ಇಂತಿದೆ. ಈಗಾಗಲೇ ಅರ್ಜಿ ಸಲ್ಲಿಸಿದ ಸ್ವೀಕೃತಿ ಪತ್ರ, 4 ಪಾಸ್‍ಪೋರ್ಟ್ ಸೈಜ್ ಭಾವಚಿತ್ರ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಬಿಪಿಎಲ್ ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್ ಪುಸ್ತಕ, ಬಾಡಿಗೆ ಮನೆ ವಾಸದ ಕರಾರು ಪತ್ರ,
20 ರೂ. ಚಾಪಾ ಕಾಗದ ಮಚ್ಚಳಿಕೆ ಪತ್ರ, ಮುಂಗಡ ಹಣ ಪಾವತಿಸಿದ ಬ್ಯಾಂಕ್ ರಸೀದಿ ಮತ್ತು ಎಲ್ಲ ದಾಖಲೆಗಳನ್ನು ನೀಡಿದ ಫಲಾನುಭವಿಗಳ ಅರ್ಜಿಯನ್ನು ಬ್ಯಾಂಕ್ ಸಾಲ ಸೌಲಭ್ಯ ಪಡೆಯಲು ಸಲ್ಲಿಸಲಾಗುವುದು. ಈ ಅರ್ಜಿದಾರರಿಗೆ ಬ್ಯಾಂಕ್ ವತಿಯಿಂದ ಸಾಲಸೌಲಭ್ಯ ಸಿಗದಿದ್ದಲ್ಲಿ ಫಲಾನುಭವಿ ಪೂರ್ಣ ಪ್ರಮಾಣದ ಫಲಾನುಭವಿ ವಂತಿಕೆ ಭರಿತಬೇಕು.
ನಿಗದಿ ಪಡಿಸಿದ ದಿನಾಂಕದೊಳಗೆ ವಂತಿಕೆ ಹಣ ಪಾವತಿಸದೆ ಮತ್ತು ದಾಖಲಾತಿಗಳನ್ನು ನೀಡದ ಅರ್ಜಿಗಳನ್ನು ಅನರ್ಹರೆಂದು ಪರಿಗಣಿಸಿ ಬೇರೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು, ಅರ್ಜಿದಾರರು ತಪ್ಪು ಮಾಹಿತಿ ನೀಡಿದ್ದಲ್ಲಿ ಯಾವುದೇ ಸಂದರ್ಭದಲ್ಲಿ ಅನರ್ಹರೆಂದು ಘೋಷಿಸಿ ಪಟ್ಟಿಯಿಂದ ಕೈ ಬಿಡಲಾಗುತ್ತದೆ ಎಂದು ಚಳ್ಳಕೆರೆ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ