ಗುಂಡ್ಲುಪೇಟೆ:
ಪಟ್ಟಣ, ರಾಷ್ಟ್ರೀಯ ಹೆದ್ದಾರಿ ಹಾಗೂ ಬೇಗೂರು ಹೋಬಳಿಗಳಲ್ಲಿ ಟಿಪ್ಪರ್ ಲಾರಿಗಳ ಅಬ್ಬರ, ಜನರ ಪ್ರಾಣಕ್ಕೆ ಎರವಾಗುತ್ತಿದೆ.
ಈ ವ್ಯಾಪ್ತಿಯಲ್ಲಿ ಟಿಪ್ಪರ್‌ಗಳಿಂದಾಗಿ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿದ್ದರೂ, ಪೊಲೀಸರು, ಆರ್‌ಟಿಒ, ಗಣಿ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಬೇಗೂರು ಭಾಗದಲ್ಲಿ ಟಿಪ್ಪರ್‌ಗಳ ಕಾರಣಕ್ಕೆ ಶನಿವಾರ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಒಬ್ಬರು ಬೈಕ್ ಸವಾರರಾಗಿದ್ದರೆ, ಇನ್ನೊಬ್ಬರು ಸ್ವತಃ ಟಿಪ್ಪರ್ ಚಲಾಯಿಸುತ್ತಿದ್ದ ಚಾಲಕ. ಕಲ್ಲು, ಜಲ್ಲಿ, ಎಂ ಸ್ಯಾಂಡ್ ಸಾಗಿಸುವ ಟಿಪ್ಪರ್‌ಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿಯಾದ ವೇಗದಲ್ಲಿ ಸಂಚರಿಸುತ್ತಿರುವುದರಿಂದ ಅಪಘಾತಗಳು ಹೆಚ್ಚಾಗುತ್ತಿವೆ.
ಡಿಸೆಂಬರ್ ತಿಂಗಳ ಆರಂಭದಲ್ಲಿ ಟಿಪ್ಪರ್‌ಗಳಿಂದಾಗಿ ಅಪಘಾತಗಳು ಸಂಭವಿಸಿತ್ತು. ಟಿಪ್ಪರ್‌ಗಳ ಹಾವಳಿಯಿಂದಾಗಿ ಜನರು, ವಾಹನ ಸವಾರರಿಗೆ ಆಗುತ್ತಿರುವ ತೊಂದರೆಗಳನ್ನು ಉಲ್ಲೇಖಿಸಿ ‘ಪ್ರಜಾವಾಣಿ’ ವಿಶೇಷ ವರದಿ (ಡಿ.4ರಂದು) ಪ್ರಕಟಿತ್ತು. ಆ ನಂತರ ಕ್ರಮ ಕೈಗೊಂಡಿದ್ದ ಪೊಲೀಸರು,
ಟಿಪ್ಪರ್‌ಗಳ ಅತಿ ವೇಗದ ಸಂಚಾರಕ್ಕೆ ಕೆಲವು ದಿನಗಳ ಕಾಲ ಕಡಿವಾಣ ಹಾಕಿದ್ದರು. ಕೆಲವು ದಿನಗಳಿಂದ ಟಿಪ್ಪರ್ ಚಾಲಕರು ಅತಿ ವೇಗದ ಚಾಳಿಯನ್ನು ಮುಂದುವರಿಸಿದ್ದು, ಜನರ ಜೀವಕ್ಕೆ ಕಂಟಕವಾಗುತ್ತಿದ್ದಾರೆ.
ಶನಿವಾರ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ-766ರ ಹಳ್ಳದಮಾದಹಳ್ಳಿ ಗೇಟ್ ಬಳಿ ಸಂಭವಿಸಿ ಕಲ್ಲು ತುಂಬಿದ ಟಿಪ್ಪರ್ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದರು.
ಟಿಪ್ಪರ್ ಲಾರಿ ಚಾಲಕನ ಅಜಾಗರೂಕ ಚಾಲನೆಯಿಂದ ಘಟನೆ ಸಂಭವಿಸಿದ್ದು, ಕೂಡಲೇ ಚಾಲಕನನ್ನು ಬಂಧಿಸುವಂತೆ ಒತ್ತಾಯಿಸಿ ರೈತ ಮುಖಂಡರು ಸಾರ್ವಜನಿಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರು.
‘ತಾಲ್ಲೂಕಿನ ಹಿರಿಕಾಟಿ, ತೊಂಡವಾಡಿ ಗ್ರಾಮದ ಸುತ್ತಲೂ ಕ್ರಷರ್‌ಗಳು ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದರೂ, ಯಾರೂ ಬಗ್ಗೆ ಕ್ರಮ ಕೈಗೊಂಡಿಲ್ಲ. ರಾತ್ರಿ ಸಮಯದಲ್ಲಿ ಕ್ರಷಿಂಗ್ ಮಾಡುವುದರಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಇದ್ದರೂ ಮೇಲಾಧಿಕಾರಿಗಳ ಗಮನಕ್ಕೆ ತರುವುದಿಲ್ಲ’ ಎಂದು ಗ್ರಾಮಸ್ಥರು ದೂರಿದರು.
ಒಕ್ಕಣೆ ಮಾಡಿದರೆ ದಂಡ; ಕ್ರಷರ್, ಕ್ವಾರಿಗಳಿಗೇಕಿಲ್ಲ?
‘ರಸ್ತೆಯಲ್ಲಿ ಹುರುಳಿ ಒಕ್ಕಣೆ ಮಾಡುವ ರೈತರಿಗೆ ದಂಡ ಪ್ರಯೋಗಿಸುವ ಪೊಲೀಸರು, ಪ್ರತಿ ದಿನ ಟಿಪ್ಪರ್ ಲಾರಿಗಳು, ಕ್ರಷರ್‌ಗಳು, ಕ್ವಾರಿಗಳು ನಿಯಮ ಉಲ್ಲಂಘನೆ ಮಾಡುತ್ತಿದ್ದರೂ ಏಕೆ ದಂಡ ಹಾಕುವುದಿಲ್ಲ’ ಎಂಬುದು ಸಾರ್ವಜನಿಕ ಪ್ರಶ್ನೆ.
‘ಪ್ರತಿ ದಿನ ನೂರಾರು ಲಾರಿಗಳು ಅಧಿಕ ಭಾರ ಹಾಕಿಕೊಂಡು ಸಂಚರಿಸುತ್ತಿರುವ ಪರಿಣಾಮ ಗ್ರಾಮೀಣ ಭಾಗದಲ್ಲಿ ರಸ್ತೆ ಗಳೆಲ್ಲ ಹಾಳಾಗಿವೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರೂ ಸಹ ಪ್ರಯೋಜನವಾಗುತ್ತಿಲ್ಲ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಮತ್ತು ಸ್ಕ್ವಾಡ್ ಗಳು ಬರುತ್ತಾರೆ ಎಂದಾಗ ಯಾವುದಾದರೂ ಮೂಲದಿಂದ ಮಾಹಿತಿ ಸೋರಿಕೆಯಾಗಿ ನಿಯಮಗಳು ಪಾಲನೆಯಾಗುವಂತೆ ನಡೆದುಕೊಳ್ಳುತ್ತಾರೆ’ ಎಂದು ಬೇಗೂರಿನ ಚಂದ್ರು ಅವರು ದೂರಿದರು.
‘ಒಂದು ಪರವಾನಗಿ ಪಡೆದು ಬೆಳಿಗ್ಗೆಯಿಂದ ಸಂಜೆಯವರೆಗೆ 25ಕ್ಕೂ ಹೆಚ್ಚಿನ ಲೋಡು ಸಾಗಿಸುತ್ತಾರೆ . ನಿಯಮ ಮೀರಿ 20ರಿಂದ 25 ಟನ್ ಅಧಿಕ ಭಾರವನ್ನು ಸಾಗಿಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಕ್ರಮಕೈಗೊಳ್ಳದೆ ಇದ್ದರೆ ರೈತರ ಸಹಕಾರದೊಂದಿಗೆ ಸಂಘಟನೆಗಳು ಬೀದಿಗೆ ಇಳಿದು ಪ್ರತಿಭಟಿಸಬೇಕಾಗುತ್ತದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಉರುಳಿ ಬಿದ್ದ ಟಿಪ್ಪರ್: ಚಾಲಕ ಸಾವು
ಗುಂಡ್ಲುಪೇಟೆ: ಶನಿವಾರ ತಡ ರಾತ್ರಿ ತಾಲ್ಲೂಕಿನ ಬೇಗೂರು ಠಾಣೆಯ ಮುಂದೆಯೇ ಟಿಪ್ಪರ್ ಲಾರಿಯೊಂದು ಅಪಘಾತಕ್ಕೆ ಈಡಾಗಿದ್ದು, ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸೈಯದ್ ರಸೂಲ್ (26) ಮೃತಪಟ್ಟ ದುರ್ದೈವಿ. ಮೃತನ ತಂದೆ ಸೈಯದ್ ಅಕ್ರಂ ಪಾಷಾ(55) ಅವರಿಗೆ ತೀವ್ರ ಏಟಾಗಿದೆ. ಲಾರಿಯು ಮೈಸೂರು ಕಡೆಯಿಂದ ಬೇಗೂರು ಬಳಿ ಕ್ರಷರ್‌ಗೆ ಎಂ.ಸ್ಯಾಂಡ್ ತುಂಬಲು ಬರುತ್ತಿದ್ದ ವೇಳೆ ಪೊಲೀಸ್ ಠಾಣೆ ಬಳಿ ಉರುಳಿ ಬಿದ್ದಿದೆ.
ಘಟನೆ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ರಷರ್‌ಗಳು ನಿಯಮ ಮೀರಿ ಕಾರ್ಯ ನಿರ್ವಹಿಸುತ್ತಿವೆ ಎಂಬ ದೂರುಗಳಿವೆ. ಕ್ರಮ ಕೈಗೊಳ್ಳುವಂತೆ ಗಣಿ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗುವುದು.
ರವಿಶಂಕರ್, ತಹಶೀಲ್ದಾರ್
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ