ಮೈಸೂರು ಅರಮನೆ ಬಗ್ಗೆ ನಿಮಗೆಷ್ಟು ಗೊತ್ತು….?

ಮೈಸೂರು

      ಮೈಸೂರು ಅರಮನೆಯನ್ನು ದೂರದಿಂದ, ಹತ್ತಿರದಿಂದ, ಒಳಗಿನಿಂದ ಹೀಗೆ ನಾವೆಲ್ಲರೂ ನೋಡಿರುತ್ತೇವೆ. ದಸರಾ ಸಂದರ್ಭದಲ್ಲಂತೂ ವಿದ್ಯುತ್‌ ದೀಪಗಳಿಂದ ಬೆಳಗುವ ಅರಮನೆಯನ್ನು ನೋಡಲು ಎರಡು ಕಣ್ಣುಗಳೇ ಸಾಲದಾಗುತ್ತವೆ. ಪ್ರವಾಸಿಗರನ್ನು ಸದಾ ಸೂಜಿಗಲ್ಲಿನಂತೆ ಸೆಳೆಯುವ ಅರಮನೆಯ ಸೌಂದರ್ಯವನ್ನು ವರ್ಣಿಸಲು ಕಷ್ಟವಾಗುತ್ತದೆ.

    ಜೊತೆಗೆ ಅರಮನೆ ನೋಡಿದವರಿಗೆ ರಾಜವೈಭವ ಹೇಗಿತ್ತು ಎಂಬುದು ಗೊತ್ತಾಗುತ್ತದೆ. ನಮಗೆ ಹೊರಗಿನಿಂದ ಅರಮನೆ ಹೇಗೆ ಕಾಣಿಸುತ್ತದೆ ಎಂಬುದು ಗೊತ್ತಿದೆ. ಆದರೆ ಅರಮನೆಯಿಂದ ಹೊರಗೆ ಅರ್ಥಾತ್ ಮೈಸೂರು ನಗರದ ಸೌಂದರ್ಯ ಮನಮೋಹಕವಾಗಿರುತ್ತದೆ ಎಂಬುದು ಹೆಚ್ಚಿನವರಿಗೆ ತಿಳಿದಂತಿಲ್ಲ. ರಾಜಮಹಾರಾಜರ ಕಾಲದಲ್ಲಿ ರಾಜಪರಿವಾರ ಅರಮನೆಯ ಮೇಲೆ ಕುಳಿತು ನಗರದ ಸೌಂದರ್ಯವನ್ನು ಸವಿಯುತ್ತಾ ಸಮಯ ಕಳೆಯುತ್ತಿದ್ದರು. ಅರಮನೆಯಿಂದ ನಿಂತು ಹೊರಗಿನ ಸೌಂದರ್ಯವನ್ನು ಸವಿಯುವುದೇ ಮರೆಯಲಾಗದ ಅನುಭವ. 

     ಅರಮನೆಯಿಂದ ನಿಂತು ಮೈಸೂರು ನಗರದ ಸುಂದರ ನೋಟ. ಅದರಾಚೆಗಿನ ಚಾಮುಂಡಿಬೆಟ್ಟವನ್ನು ವೀಕ್ಷಿಸಿದರೆ ಕಂಡು ಬರುವ ನೋಟ ಒಂದು ಕ್ಷಣ ಮೈರೋಮಾಂಚನಗೊಳಿಸುತ್ತದೆ. ಅರಮನೆಯ ಮೇಲೆ ತೆರಳಿ ನಗರವನ್ನು ವೀಕ್ಷಿಸುವುದಿರಲಿ ಅರಮನೆಯ ಒಳಗಿನ ವೈಭವ ನೋಡುತ್ತಾ ನಮ್ಮನ್ನು ನಾವೇ ಮರೆತು ಬಿಡುತ್ತೇವೆ. ಜತೆಗೆ ಹೊರಗಿನಿಂದ ಅರಮನೆ ಹೇಗೆ ಕಾಣುತ್ತದೆ ಎಂಬುದರ ಬಗ್ಗೆ ಬೇಕಾದಷ್ಟು ಚಿತ್ರಗಳು ನಮಗೆ ಸಿಗುತ್ತವೆಯಾದರೂ ಅರಮನೆಯಿಂದ ನಿಂತು ನೋಡಿದರೆ ಸುತ್ತಮುತ್ತಲಿನ ದೃಶ್ಯಗಳು ಹೇಗೆ ಕಾಣುತ್ತವೆ ಎಂಬುದರ ಬಗ್ಗೆ ಚಿತ್ರಗಳು ಅಪರೂಪವೇ.

    ಹಳೆಯ ಅರಮನೆ ನಾಶದ ಕಥೆ ಇನ್ನು ಅರಮನೆ ಬಗ್ಗೆ ಸಂಕ್ಷಿಪ್ತವಾಗಿ ಹೇಳುವುದಾದರೆ, ಇದೇ ಸ್ಥಳದಲ್ಲಿ 1800 ಮತ್ತು 1804ರಲ್ಲಿ ಕಟ್ಟಿಗೆ ಹಾಗೂ ಇಟ್ಟಿಗೆಗಳಿಂದ ನಿರ್ಮಾಣ ಮಾಡಿದ್ದ ಅರಮನೆಯಿತ್ತು. ಅದು 1897 ಫೆಬ್ರವರಿ 28ರಂದು ಚಾಮರಾಜೇಂದ್ರ ಒಡೆಯರ್ ಮತ್ತು ವಾಣಿವಿಲಾಸ ಅವರ ಹಿರಿಯ ಪುತ್ರಿ ಜಯಲಕ್ಷ್ಮಮ್ಮಣ್ಣಿಯವರ ವಿವಾಹ ಸರ್ದಾರ್ ಕಾಂತರಾಜೇ ಅರಸ್ ಅವರೊಂದಿಗೆ ಜರುಗಿದಾಗ ಜಯಲಕ್ಷ್ಮಮ್ಮಣ್ಣಿಯವರ ಕೂದಲಿಗೆ ಸಾಂಬ್ರಾಣಿ ಹೊಗೆ ಕೊಡುವ ಸಂದರ್ಭ ಕೆಂಡವೊಂದು ಕೆಳಗೆ ಬಿದ್ದು ಹತ್ತಿದ ಬೆಂಕಿಯಿಂದ ನಾಶವಾಗಿತ್ತು.

     ಆ ನಂತರ ಬೆಂಕಿ ಆಕಸ್ಮಿಕ ಸಂಭವಿಸಿದರೂ ಏನೂ ಆಗದ ರೀತಿಯಲ್ಲಿ ಹೊಸ ಮಾದರಿಯಲ್ಲಿ ಅರಮನೆಯನ್ನು ನಿರ್ಮಿಸಲು ತೀರ್ಮಾನಿಸಲಾಯಿತು. ಇದರ ಜವಾಬ್ದಾರಿಯನ್ನು ಮದ್ರಾಸ್ ಸರ್ಕಾರದ ಸಲಹೆಗಾರ ಇಂಜಿನಿಯರಾದ ಹೆನ್ರಿರ‍್ವಿನ್‌ರವರಿಗೆ ವಹಿಸಲಾಯಿತು. ಆದರೆ ಹಿಂದೆಯಿದ್ದ ಕಟ್ಟಿಗೆಯ ಅರಮನೆಯಂತೆ ಅದೇ ವಿನ್ಯಾಸದಲ್ಲಿ ಹೊಸ ಅರಮನೆಯನ್ನು ನಿರ್ಮಿಸಬೇಕಾಗಿತ್ತು.

    ಆದರೆ ಅದರ ನೀಲಿ ನಕ್ಷೆ ಇರಲಿಲ್ಲ ಆ ಬ್ರಿಟಿಷ್ ಸೈನಿಕನೊಬ್ಬ ತನ್ನ ಕ್ಯಾಮರಾದಲ್ಲಿ ಸೆರೆಹಿಡಿದಿದ್ದ ಫೋಟೋ ಅಧಿಕಾರಿಗಳ ಬಳಿಯಿತ್ತು. ಅದನ್ನು ಪಡೆದುಕೊಂಡ ಹೆನ್ರಿ ರ‍್ವಿನ್ ಅದರಂತೆ ಅರಮನೆಯನ್ನು ನಿರ್ಮಿಸಲು ಮುಂದಾದರು. ಕಲಾವಿದನಿಂದ ಯೂರೋಪಿನಲ್ಲಿ ಅಧ್ಯಯನ ಅರಮನೆಯ ಇಂಜಿನಿಯರ್ ಆಗಿ ಬಿ.ಪಿ.ರಾಘವಲುನಾಯಿಡು ಕೆಲಸ ಮಾಡಿದರೆ, ಅರಮನೆಯಲ್ಲಿ ಚಿತ್ರರಚಿಸಲು ನಾಗರಾಜು ಎಂಬ ಕಲಾವಿದನನ್ನು ಚಿತ್ರರಚನೆಯ ಅಧ್ಯಯನಕ್ಕಾಗಿ ಯುರೋಪಿನ ರಾಜ್ಯಗಳಿಗೆ ಕಳುಹಿಸಲಾಯಿತು.

    ಜೊತೆಗೆ ಹಳೆಬೀಡು, ಬೇಲೂರು ಹಾಗೂ ಸೋಮನಾಥಪುರ ದೇವಾಲಯದ ನಿರ್ಮಾಣದಲ್ಲಿ ಮಾಡಲಾದ ಕುಸುರಿ ಕೆತ್ತನೆಯನ್ನು ಅರಮನೆಯ ನಿರ್ಮಾಣದ ಸಂದರ್ಭ ಅನುಸರಿಸಲಾಯಿತು. ಹೀಗೆ 1897 ರಿಂದ ಆರಂಭಗೊಂಡ ಅರಮನೆಯ ನಿರ್ಮಾಣ ಕಾರ್ಯ 1911-12ರಲ್ಲಿ ಸುಮಾರು 41,47,913 ರೂಪಾಯಿ ವೆಚ್ಚದಲ್ಲಿ ಪೂರ್ಣಗೊಂಡಿತು.

   ಕೋಟೆ ಸೇರಿದಂತೆ ಸುಮಾರು 72 ಎಕರೆಗಿಂತಲೂ ಹೆಚ್ಚಿನ ವಿಸ್ತಾರದಲ್ಲಿ ನೆಲೆನಿಂತಿರುವ ಅರಮನೆ 74.50 ಮೀ ಉದ್ದ ಹಾಗೂ 47.50 ಮೀಟರ್ ಅಗಲವಾಗಿದೆ. ಅರಮನೆಯ ಮುಖ್ಯ ಕಟ್ಟಡವನ್ನು ಕಂದು ಬಣ್ಣದ ದಪ್ಪ ಸ್ಪಟಿಕದ ಗಟ್ಟಿ ಶಿಲೆಗಳಿಂದ ನಿರ್ಮಿಸಲಾಗಿದೆ. ಅರಮನೆಯ ಮಧ್ಯಭಾಗದ ಐದು ಅಂತಸ್ತಿನ ಬಂಗಾರದ ಗಿಲೀಟಿನ ಗಗನಚಂಬಿ ಗೋಪುರವು ಭೂಮಿಯಿಂದ ಸುಮಾರು 145 ಅಡಿ ಎತ್ತರದಲ್ಲಿದೆ.

   ಅರಮನೆ ಒಳಗೆ ಏನೇನಿದೆ? ಅರಮನೆಯು ಬೆಳಕಿಗೆ ಬಿಟ್ಟಿರುವ ಅಂಗಳದ (ತೊಟ್ಟಿ) ಸುತ್ತಲೂ ಕಟ್ಟಲ್ಪಟ್ಟಿದೆ. ಈ ತೊಟ್ಟಿಯ ಪೂರ್ವಭಾಗಕ್ಕೆ 21 ಅಡಿ ಅಗಲ ಹಾಗೂ 66 ಅಡಿ ಎತ್ತರವಿರುವ ಆಕರ್ಷಕ ಆನೆಯ ದ್ವಾರವಿದೆ. ದೊಡ್ಡ ಅಂಗಳದಲ್ಲಿ ಹೊರಗಡೆ ಸಜ್ಜೆಗೆ ಹೋಗುವ 15 ಅಡಿ ಅಗಲವುಳ್ಳ ದಾರಿಗಳು ದೊಡ್ಡ ಚೌಕದ ಹಾಗೆ ಕಾಣುತ್ತವೆ.

   ಇನ್ನು ಎರಡನೆ ಅಂತಸ್ತಿನಲ್ಲಿ ಪೂರ್ವ ಭಾಗಕ್ಕೆ 155 ಅಡಿ ಅಗಲವಿರುವ ವಿಶಾಲ ರಾಜ ಸಭಾಮಂದಿರವಿದೆ. ಇದರ ಮೇಲೆ ಖಾಸಗಿ ನಿವಾಸಿ ಸ್ಥಳಗಳಿವೆ. ಕೆಳಗಿನ ಉಪ್ಪರಿಗೆಗೆ ಬಂದರೆ ಅಂಗಳದ ಉತ್ತರ ಭಾಗದಲ್ಲಿ ಆಯುಧಶಾಲೆ, ಪುಸ್ತಕ ಭಂಡಾರ, ಅವುಗಳ ಮೇಲೆ ಸಂಗೀತದ ಕೊಠಡಿ, ಸ್ತ್ರೀಯರ ಸ್ವಾಗತ ಕೊಠಡಿ ಮತ್ತು ಮೂರನೆಯ ಅಂತಸ್ತಿನಲ್ಲಿ ವಿಶ್ರಾಂತಿ ಕೊಠಡಿಗಳಿವೆ.

    ಒಳ ಅಂಗಳದ ಪಶ್ಚಿಮಕ್ಕೆ ಹಳೆಯ ಅರಮನೆಯಿದೆ. ದಕ್ಷಿಣ ಭಾಗದ ಹತ್ತಿರದಲ್ಲೇ ಮುದ್ದಾದ ನವಿಲಿನ ಕಲ್ಯಾಣ ಭದ್ರಮಂಟಪವಿದೆ. ಹಲವು ಬಗೆಯ ಕಲೆಗಳ ಆಗರ ಇಲ್ಲಿಂದ ಮುಂದೆ ಹೋದರೆ ಎರಡನೆಯ ಉಪ್ಪರಿಗೆಯಲ್ಲಿ ಅಂಬಾವಿಲಾಸ ಸಭಾ ಮಂಟಪವಿದೆ. ಅರಮನೆಯ ದಕ್ಷಿಣ ಭಾಗದಲ್ಲಿ ರಾಣೀವಿಲಾಸ ಹಾಗೂ ಪೂಜಾ ಕೊಠಡಿಗಳಿವೆ.

    ಇವು ಅಂಬಾವಿಲಾಸ ಸಭಾಭವನದವರೆಗೂ ವಿಸ್ತರಿಸಿವೆ. ಮಧ್ಯಭಾಗದ ಮೂರು ನಾಲ್ಕು ಮತ್ತು ಐದನೇ ಅಂತಸ್ತುಗಳು ಮುಖ್ಯಗೋಪುರ ಶಿಖರಕ್ಕೆ ಆಧಾರಸ್ತಂಭಗಳಂತೆ ನಿಂತಿವೆ. ಅರಮನೆಯ ಹೊರನೋಟ ಹಿಂದೂ ಗ್ರೀಕ್ ಕಲೆಯ ರೂಪರೇಖೆಗಳಂತೆ ಕಂಡರೆ, ಬಾಗಿಲುಗಳ ಕಮಾನುಗಳ ಕಂಬ ಮತ್ತು ಬೋದುಗಳ ಅಲಂಕಾರಗಳು ಸ್ಪಷ್ಟ ಹೊಯ್ಸಳ ರೀತಿಯ ಕಲಾಕೃತಿಗಳಾಗಿವೆ. ಅರಮನೆಯ ಮಧ್ಯದ ಗೋಪುರವು ಪ್ರಭಾವಯುತವಾಗಿದ್ದು ಉಳಿದವುಗಳೆಲ್ಲವೂ ಅದಕ್ಕೆ ಹೊಂದಿಕೊಂಡ ಆಕೃತಿಗಳಾಗಿವೆ.

    ಅರಮನೆಯ ಮುಖ್ಯ ಮುಖಭಾಗದಲ್ಲಿ ಬೆಳಕು ಮತ್ತು ನೆರಳನ್ನು ಪಡೆಯುವ ಉದ್ದೇಶದಿಂದ ಗೋಪುರಗಳ, ಮಸೀದಿಯ ರೀತಿಯ ಶಿಖರಗಳ ಕೈಸಾಲೆ, ಉಪ್ಪರಿಗೆಯ ಮೊಗಸಾಲೆಗಳ. ವಸಾರೆ, ಪಡಸಾಲೆ, ಜಗಲಿಗಳ ಪೌಳಿ ಮಂಟಪಗಳ ಹಾಗೂ ಗೋಪುರ ಶಿಖರಗಳನ್ನು ಬಿಡಿಸಿ ನಿರ್ಮಿಸಲಾಗಿದೆ.

   ಹಿಂದೂ ಶಿಲ್ಪ, ಗ್ರೀಕ್ ಕಲೆ ಮಿಳಿತ ಮುಂಭಾಗದಲ್ಲಿ ಬೃಹತ್ ಕಂಬಗಳ ಜೊತೆಗೆ ಸ್ಪಟಿಕದ ಗಟ್ಟಿ ಶಿಲೆಗಳನ್ನು ಕೊರೆದು ನಿರ್ಮಿಸಿರುವ, ಪಡಸಾಲೆ, ಉಪ್ಪರಿಗೆಯ ಮೊಗಸಾಲೆಗಳು ತಮ್ಮದೇ ಆದ ಶ್ರೀಮಂತಿಕೆಯ ವೈಭವವನ್ನು ಸೂಚಿಸುತ್ತವೆ. ಅರಮನೆಯ ಅಡಿಪಾಯದಿಂದ ಮುಖ್ಯ ಗೋಪುರದ ತುದಿಯವರೆಗೂ ಉತ್ತಮ ಮಟ್ಟದ ಹಿಂದೂ ಶಿಲ್ಪ ವಿದ್ಯೆಯ ನುರಿತ ಕೆಲಸಗಾರರಿಂದ ಶಿಲ್ಪಕಲೆ ರಚಿಸಲ್ಪಟ್ಟಿದೆ. ಅಲ್ಲದೆ ಉಚ್ಛ ರೀತಿಯ ಹಿಂದೂ ಶಿಲ್ಪ ಕಲೆ ಮತ್ತು ಗ್ರೀಕ್ ಕಲೆಯು ಮಿಳಿತಗೊಂಡು ಶೋಭಾಯಮಾನವಾಗಿ ಕಂಗೊಳಿಸುತ್ತದೆ.

   ಅರಮನೆಯಲ್ಲಿ ಮಾಡಿದ ಕಲ್ಲಿನ, ದಂತ ಮತ್ತು ಮರದ ಕೆತ್ತನೆ ಕೆಲಸ ಅಲ್ಲದೆ ಕಲ್ಲಿನ ಕುಂದಣ ಕೆಲಸ, ಲೇಪದ ಕೆಲಸಗಳು ಕಲೆಗಾರನ ಕೈಚಳಕನ್ನು ಪ್ರದರ್ಶಿಸಿದೆ. ಕಟ್ಟಡದ ವಿವಿಧೆಡೆ ಸ್ಪಟಿಕದ ಕಲ್ಲು, ಕಂದುಬಣ್ಣದ ಶಿಲೆ, ಕಾಗೆ ಬಂಗಾರದಂತೆ ಮಿನುಗುವ ಬೆಣಚು ಶಿಲೆಗಳನ್ನು ಬಳಸಲಾಗಿದೆ. ಚಿತ್ರ ವಿಚಿತ್ರವಾದ ಬಣ್ಣದ ನಯಮಾಡಿದ ಕಲ್ಲಿನ ಕಂಬಗಳು ಯೋಗ್ಯ ಸ್ಥಳಗಳಲ್ಲಿ ನಿರ್ಮಿಸಲ್ಪಟ್ಟಿದೆ.

    ಎರಡು ಬಾರಿ ನಿರ್ಮಿಸಿದ ಅರಮನೆ ಅರಮನೆಯಲ್ಲಿರುವ ಅಂಬಾವಿಲಾಸ ದರ್ಬಾರ್ ಹಾಲ್ ರಾಜವೈಭವವನ್ನು ಸಾರುತ್ತದೆ. ಇಲ್ಲಿ 750 ಕೆ.ಜಿ. ತೂಕದ ಭವ್ಯ ಚಿತ್ತಾರದ ಚಿನ್ನದ ಅಂಬಾರಿ ಇದೆ. ಅಲ್ಲದೆ 135 ಕೆ.ಜಿ. ಬಂಗಾರವುಳ್ಳ ರತ್ನಖಚಿತ ಸಿಂಹಾಸನವೂ ಇದೆ. ಇನ್ನು ಅರಮನೆಯಲ್ಲಿನ ಆಯುಧ ಶಾಲೆ, ಸಂಗೀತ ಕೊಠಡಿ ಸೇರಿದಂತೆ ಹತ್ತು ಹಲವು ನೋಡತಕ್ಕ ಅತ್ಯಪೂರ್ವ ವಸ್ತುಗಳಿದ್ದು, ಇದೊಂದು ಅದ್ಭುತ ಸಂಗ್ರಹಾಲಯವಾಗಿದೆ.

    ಅರಮನೆಯ ಸುತ್ತಲೂ ಇರುವ ಕೋಟೆಯ ಉತ್ತರ, ದಕ್ಷಿಣ ಮತ್ತು ಪೂರ್ವ ಭಾಗದಲ್ಲಿರುವ ದಿಡ್ಡಿ ಬಾಗಿಲುಗಳು ಗೋಪುರ ಶಿಖರಗಳಿಂದ ಕೆತ್ತನೆಯ ಕಮಾನು ರಚನೆಗಳಿಂದ ಶೋಭಿಸುತ್ತಿದ್ದು ಅರಮನೆಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಆದರೆ ಈಗ ಕಾಣುತ್ತಿರುವ ಅರಮನೆಯಂತೆ ಆಗಿನ ಅರಮನೆ ಇರಲಿಲ್ಲವಂತೆ.

    ಈ ಅರಮನೆಯನ್ನು ಎರಡು ಬಾರಿ ನಿರ್ಮಿಸಲಾಗಿದೆಯಂತೆ. 1939ರಲ್ಲಿ ಅರಮನೆಯ ಮುಂದೆ ಇದ್ದಂತಹ ಫೋರ್ಟಿಕೋವನ್ನು ತೆರವುಗೊಳಿಸಿ ಅಲ್ಲಿಂದ ನೇರವಾಗಿ ದರ್ಬಾರ್ ಹಾಲ್ ಕಾಣುವಂತೆ ಮಾಡಲಾಯಿತು. ಒಟ್ಟಾರೆಯಾಗಿ ಹೇಳಬೇಕೆಂದರೆ ಮೈಸೂರು ಅರಮನೆಯು ವಿಶ್ವದ ಅತಿಹೆಚ್ಚು ವೀಕ್ಷಿಸುವ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು, ಕೇವಲ ದಸರ ಮಾತ್ರವಲ್ಲದೆ, ಎಲ್ಲ ದಿನಗಳಲ್ಲಿಯೂ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap