ಹುಳಿಯಾರು :
ತೆಂಗಿನ ಗರಿಗೆ ವಿದ್ಯುತ್ ತಂತಿ ತಗುಲಿ ಪದೇ ಪದೇ ಶಾರ್ಟ್ ಆಗುತ್ತಿದ್ದರೂ ಬೆಸ್ಕಾಂ ನಿರ್ಲಕ್ಷಿಸಿದ್ದು ತಕ್ಷಣ ಮೇಲಧಿಕಾರಿಗಳು ಸ್ಪಂದಿಸುವಂತೆ ಹುಳಿಯಾರು ಹೋಬಳಿಯ ಯಳನಾಡು ಗ್ರಾಪಂ ವ್ಯಾಪ್ತಿಯ ಬಿಳಿಕಲ್ಲು ಗೊಲ್ಲರಹಟ್ಟಿ ಬಳಿಯ ರೈತ ನಂಜುಂಡಯ್ಯ ಮನವಿ ಮಾಡಿದ್ದಾರೆ.
ತಮ್ಮಡಿಹಳ್ಳಿ ಬಿಳಿಕಲ್ಲುಗೊಲ್ಲರಹಟ್ಟಿಯ ರೈತರೊರ್ವರ ಐಪಿಸೆಟ್‍ಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಲುವಾಗಿ ನಂಜುಂಡಯ್ಯ ಅವರ ಜಮೀನಿನಲ್ಲಿ ಕಂಬಗಳನ್ನು ನೆಟ್ಟು ವಿದ್ಯುತ್ ತಂತಿಗಳನ್ನು ಎಳೆಯಲಾಗಿದೆ. ಕಂಬಗಳನ್ನು ನೆಡುವ ಸಂದರ್ಭದಲ್ಲಿ ತೆಂಗಿನ ಸಸಿಗಳಿಗೆ ತೊಂದರೆಯಾಗುತ್ತದೆಂದು ವಿರೋಧ ಮಾಡಿದಾಗ ತೆಂಗಿನಗರಿಗಳಿಗೆ ತಗುಲದಂತೆ ತಂತಿಗಳನ್ನು ಅಳವಡಿಸುವುದಾಗಿ ಹೇಳಿ ಕಾಮಗಾರಿ ಪೂರೈಸಿದರು.
ಆದರೆ ವಿದ್ಯುತ್ ಲೈನ್ ಎಳೆಯುವಾಗ ಮಾತು ತಪ್ಪಿನ ಬೆಸ್ಕಾಂನವರು 3 ಫಲಭರಿತ ತೆಂಗಿನ ಮರಗಳ ಗರಿಗಳಿಗೆ ಪದೇಪದೇ ತಗುಲಿ ಶಾರ್ಟ್ ಆಗುವಂತೆ ವಿದ್ಯುತ್ ತಂತಿಗಳನ್ನು ಎಳೆದಿದ್ದಾರೆ. ಪರಿಣಾಮ ಆಗಾಗ ವಿದ್ಯುತ್ ಶಾರ್ಟ್ ಆಗಿ ತೆಂಗಿನಗರಿಗಳು ಹೊತ್ತಿ ಉರಿದಿದೆ. ಅಲ್ಲದೆ ಶಾರ್ಟ್‍ನಿಂದ ಹೊರಹೊಮ್ಮುಖ ಕಿಡಿಗಳು ಕೆಳಗೆ ಬೀಳುತ್ತಿದ್ದು ಆತಂಕಕ್ಕೆ ಕಾರಣವಾಗಿದೆ.
ಈ ವಿದ್ಯುತ್ ಶಾರ್ಟ್‍ನಿಂದ ತೆಂಗಿನ ಗಿಡಗಳ ಬೆಳವಣಿಗೆ ಕುಂಠಿತವಾಗಿದೆಯಲ್ಲದೆ ಆಗಾಗ ವಿದ್ಯುತ್ ಶಾರ್ಟ್ ಆಗುತ್ತಿರುವುದರಿಂದ ಈ ಭಾಗದಲ್ಲಿ ಓಡಾಡಲು ಜನ ಹೆದರುವಂತ್ತಾಗಿದೆ. ಅಲ್ಲದೆ ಅಂಗೈಯಲ್ಲಿ ಜೀವ ಹಿಡಿದುಕೊಂಡು ಈ ಭಾಗದಲ್ಲಿ ಕೃಷಿ ಕೆಲಸಗಳನ್ನು ಮಾಡಬೇಕಿದೆ. ಹಾಗಾಗಿ ಸಮಸ್ಯೆ ಬಗೆಹರಿಸುವಂತೆ ಬೆಸ್ಕಾಂಗೆ ದೂರು ನೀಡಿದ್ದರೂ ಸ್ಪಂದಿಸದೆ ನಿರ್ಲಕ್ಷಿಸಿದ್ದಾರೆ.
ಅಚ್ಚರಿ ಎನ್ನುವಂತೆ ವಿದ್ಯುತ್ ಸಂಪರ್ಕ ಪಡೆದಿರುವ ರೈತನ ಜಮೀನಿನಲ್ಲಿ ಕಂಬಗಳಿಗೆ 3 ಪಿನ್ ಹಾಕಿ ಒಂದೇ ಭಾಗಕ್ಕೆ 3 ತಂತಿಗಳು ಹಾದು ಹೋಗುವಂತೆ ಮಾಡಿ ಶಾರ್ಟ್ ಆಗುವುದನ್ನು ತಪ್ಪಿಸಿದ್ದಾರೆ. ಆದರೆ ನಮ್ಮ ಜಮೀನಿನಲ್ಲಿ ಮಾತ್ರ ಶಾರ್ಟ್ ಆಗುವಂತೆ ಲೈನ್ ಎಳೆದಿದ್ದಾರೆ. ಹಾಗಾಗಿ ಮೇಲಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಶಾರ್ಟ್ ಆಗುವುದನ್ನು ತಪ್ಪಿಸಿ ನೆರವಾಗುವಂತೆ ನಂಜುಂಡಯ್ಯ ಮನವಿ ಮಾಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ