ಹುಳಿಯಾರು :
ಲಾಕ್‍ಡೌನ್ ಪರಿಣಾಮ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಪ್ರಕರಣ ಕ್ಷಿಣಿಸುತ್ತಿದ್ದು ಹದಿನೈದು ದಿನಗಳಲ್ಲಿ ಶೇ.5 ಕ್ಕಿಂತ ಕಡಿಮೆಗೆ ಬರಲಿದೆ. ಆಗ ಯಾವುದಕ್ಕೂ ನಿರ್ಬಂಧವಿಲ್ಲದೆ ಸಹಜ ಸ್ಥಿತಿಗೆ ರಾಜ್ಯ ಬರಲಿದೆ. ಆದರೆ ಕೊರೊನೊ ವೈರಸ್ ಮಾತ್ರ ಇರಲಿದ್ದು ಜನರು ಈಗಿನಂತೆ ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಹುಳಿಯಾರು ಮಾತಾ ಚಾರಿಟಬಲ್‍ಟ್ರಸ್ಟ್‍ನ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದ ಅವರು ಹುಳಿಯಾರಿನ 8, 10, 12, 13 ವಾರ್ಡ್‍ಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಕೋವಿಡ್ ಲಕ್ಷಣ ಹೊಂದಿ ಹೋಂ ಐಸೋಲೇಷನ್ ನೆಪದಲ್ಲಿ ಮನೆಯಲ್ಲಿಯೇ ಉಳಿಯುತ್ತಿರುವವರು, ಸರಿಯಾಗಿ ಮಾರ್ಗಸೂಚಿ ಪಾಲಿಸದೆ ಆಚೆಕಡೆ ಸುತ್ತಾಡುತ್ತಿರುವುದರ ಮೂಲಕ ಕೋವಿಡ್ ಹೆಚ್ಚಳಕ್ಕೆ ಕಾರಣರಾಗುತ್ತಿದ್ದಾರೆ. ಹಾಗಾಗಿ ಮೇ.19 ನೇ ತಾರೀಖಿನಿಂದ ಪಾಸಿಟಿವ್ ಬಂದಿರುವವರನ್ನು ಕೂಡಲೇ ಕೋವಿಡ್ ಕೇರ್ ಸೆಂಟರ್‍ಗೆ ಸ್ಥಳಾಂತರಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಪಟ್ಟಣ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಹುಳಿಯಾರಿನ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಕೋವಿಡ್ ಕೇರ್ ಸೆಂಟರ್‍ಗೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳುವಂತೆಯೂ ಹಾಗೂ ಅಗತ್ಯವಿರುವ ಡಾಕ್ಟರ್ ಹಾಗೂ ಸ್ಟಾಫ್ ನರ್ಸಗಳನ್ನು ಕೂಡಲೇ ಅಲ್ಲಿಗೆ ಕಳುಹಿಸಿ ಕೊಡುವಂತೆ ತಾಲೂಕು ವೈದ್ಯಾಧಿಕಾರಿಗೆ ಆದೇಶಿಸಿದರು. ಹುಳಿಯಾರಿನಲ್ಲಿ ಇದುವರೆಗೂ ಕೋವಿಡ್ ನಿಂದಾಗಿ ಒಂಬತ್ತು ಜನ ಮೃತಪಟ್ಟಿದ್ದು, ಕೋವಿಡ್ ಹರಡದಂತೆ ಎಲ್ಲಾ ರೀತಿಯ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ತಿಳಿಸಿದರಲ್ಲದೆ ಪಾಸಿಟಿವ್ ಬಂದವರನ್ನು ಪೊಲೀಸರ ಸಹಾಯ ಪಡೆದೆ ಕಡ್ಡಾಯವಾಗಿ ಕೇರ್ ಸೆಂಟರ್‍ಗೆ ಕಳುಹಿಸುವಂತೆ ತಿಳಿಸಿದರು.
ನೋಟಿಸ್ ನೀಡಲು ಸೂಚನೆ:
ಮೆಡಿಕಲ್ ಸ್ಟೋರ್‍ಗಳಲ್ಲಿ ಕೋವಿಡ್‍ಗೆ ಸಂಬಂಧಪಟ್ಟಂತೆ ಯಾವುದೇ ಪ್ರಿಸ್ಕ್ರಿಪ್ಷನ್ ಇಲ್ಲದೇ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದು, ಜನರು ವೈದ್ಯರ ಬಳಿ ಹೋಗದೆ ಇವರುಗಳಲ್ಲಿಯೇ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರುವುದು ಅಪಾಯಕ್ಕೆ ದಾರಿ ಮಾಡಿಕೊಟ್ಟಿದೆ. ಆ ಬಗ್ಗೆ ಎಲ್ಲಾ ಮೆಡಿಕಲ್ ಅಂಗಡಿಗಳಿಗೂ ಕೂಡಲೇ ನೋಟಿಸ್ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ ಖಾಸಗಿ ಕ್ಲಿನಿಕ್ಕಿನಲ್ಲಿ ಚಿಕಿತ್ಸೆ ಕೊಡುವ ವೈದ್ಯರು ಕೆಮ್ಮು ಜ್ವರದ ಲಕ್ಷಣ ಕಂಡು ಬಂದವರನ್ನು ಕೋವಿಡ್ ಟೆಸ್ಟ್ ಮಾಡಿಸಬೇಕು ಹಾಗೂ ಅದನ್ನು ಸಂಬಂಧಪಟ್ಟ ತಾಲೂಕು ಆಡಳಿತದ ಗಮನಕ್ಕೆ ತರಬೇಕು ಎಂದರು.
ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದರು. ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಹಾಗೂ ತರಕಾರಿ ದಿನಸಿ ಸಮಾನು ತರುವ ನೆಪದಲ್ಲಿ ಪಟ್ಟಣದಲ್ಲಿ ಅನಗತ್ಯವಾಗಿ ಓಡಾಡುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಸಮಸ್ಯೆ ಆಲಿಸಿದ ಸಚಿವರು ಪ್ರತಿನಿತ್ಯವೂ ಇಲಾಖೆಯ ಮಾರ್ಗಸೂಚಿಯಂತೆ ಐಸೋಲೇಶನ್‍ನಲ್ಲಿರುವವರ ಆರೋಗ್ಯ ತಪಾಸಣೆ ತಪ್ಪದೇ ಮಾಡುವಂತೆಯೂ ಹಾಗೂ ಸೋಕಿತರ ಮನೆಗಳ ಬಳಿ ಹೋದಾಗ ಯಾವುದೇ ಸಮಸ್ಯೆ ಬಂದಲ್ಲಿ ಕೂಡಲೇ ಪಿಎಸ್‍ಐ ಅವರ ಗಮನಕ್ಕೆ ತರುವಂತೆಯೂ ಹೇಳಿದರು.
ಸಭೆಯಲ್ಲಿ ತಹಸಿಲ್ದಾರ್ ಬಿ.ತೇಜಸ್ವಿನಿ, ತಿಪಟೂರು ಉಪ ವಿಭಾಗದ ಡಿವೈಎಸ್ಪಿ ಚಂದನ್ ಕುಮಾರ್, ತಾಲೂಕು ವೈದ್ಯಾಧಿಕಾರಿ ನವೀನ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್, ಪಿಎಸ್‍ಐ ರಮೇಶ್ ಸೇರಿದಂತೆ ಆಶಾ ಕಾರ್ಯಕರ್ತೆಯರು, ಪಟ್ಟಣ ಪಂಚಾಯಿತಿ ಸದಸ್ಯರುಗಳು, ಇತರೆ ಇಲಾಖೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ