ಪಾವಗಡ :
ಪಶ್ಚಿಮ ಬಂಗಾಳದಲ್ಲಿ ಗುರುವಾರ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ದೇಶಕ್ಕಾಗಿ ವೀರಮರಣವನ್ನಪ್ಪಿದ ಪಾವಗಡ ತಾಲ್ಲೂಕಿನ ಕೆ.ಟಿ.ಹಳ್ಳಿ ಗ್ರಾಮದ ವೀರಯೋಧ ಡಿ.ರಂಗಯ್ಯರವರ ಅಂತ್ಯಕ್ರಿಯೆ ಸೋಮವಾರ ಅವರ ಹುಟ್ಟೂರು ಕೆ.ಟಿ.ಹಳ್ಳಿಯ ಅವರ ಜಮೀನಲ್ಲಿ ಸಾವಿರಾರು ದೇಶ ಪ್ರೇಮಿಗಳ ಸಮ್ಮುಖದಲ್ಲಿ ನೆರವೇರಿತು.
ಗ್ರಾಮದ ಬೆಳ್ಳಿಬಟ್ಟಲು ಮಾರ್ಗಕ್ಕೆ ಹೋಗುವ ಸಿದ್ದಪ್ಪನ ಗುಡಿಯ ಬಳಿ ಇರುವ ಜಮೀನಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಕುಂಚಿಟಿಗ ಒಕ್ಕಲಿಗ ಪದ್ದತಿಯಂತೆ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.
ಕೆ.ಟಿ.ಹಳ್ಳಿ ಗ್ರಾಮದ ದಾಸಣ್ಣ ಮತ್ತು ನಾಗಮ್ಮ ದಂಪತಿಯ ಪುತ್ರ ಡಿ.ರಂಗಯ್ಯ ಕಳೆದ 36 ವರ್ಷಗಳ ಕಾಲ ಬಿಎಸ್‍ಎಫ್ ಸೇನೆಯಲ್ಲಿ ಜಮ್ಮು-ಕಾಶ್ಮೀರ, ಕೊಲ್ಕತ್ತಾ, ನಾಗಲ್ಯಾಂಡ್ ಮತ್ತಿತರ ರಾಜ್ಯಗಳಲ್ಲಿ ಸೇವೆ ಸಲ್ಲಿಸಿದ್ದರು. ಭಾನುವಾರ ಸಂಜೆ 4 ಘಂಟೆಗೆ ಪಶ್ಚಿಮ ಬಂಗಾಳದಿಂದ ಸೇನಾ ಹೆಲಿಕಾಪ್ಟರ್ ಮೂಲಕ ಯೋಧನ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗಿ, ಅಲ್ಲಿಂದ ಮಿಲಿಟರಿ ವಾಹನದಲ್ಲಿ ಅವರ ರಾತ್ರಿ 8 ಗಂಟೆಗೆ ಪಾವಗಡಕ್ಕೆ ತಲುಪಿತು. ಈ ವೇಳೆ ಪಟ್ಟಣದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಟೋಲ್‍ಗೇಟ್ ಬಳಿ ಇರುವ ಅಂಬೇಡ್ಕರ್ ಪುತ್ಥಳಿಯಿಂದ ಪಟ್ಟಣದ ನಿರೀಕ್ಷಣಾ ಮಂದಿರದವರೆಗೂ ಮೇಣದ ಬತ್ತಿ ಹಚ್ಚಿ ಮೆರವಣಿಗೆ ನಡೆಸಿದರು.
ಪಾರ್ಥಿವ ಶರೀರದ ಮೆರವಣಿಗೆ ಸೋಮವಾರ ಬೆಳಗ್ಗೆ 7 ಗಂಟೆಗೆ ಹೊರಟು, ಕೆ.ಟಿ.ಹಳ್ಳಿ ಗ್ರಾಮದ ಶ್ರೀರಾಮ ಗ್ರಾಮಾಂತರ ಪ್ರೌಢಶಾಲಾ ಆವರಣದಲ್ಲಿ 11 ಘಂಟೆಯವರೆಗೂ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನಂತರ ಗ್ರಾಮದಲ್ಲಿ ಮೆರವಣಿಗೆಯ ಮೂಲಕ ಜಮೀನಿಗೆ ಪಾರ್ಥಿವ ಶರೀರ ಕೊಂಡೊಯ್ಯಲಾಯಿತು. ತಹಸೀಲ್ದಾರ್ ಕೆ.ಆರ್. ನಾಗರಾಜ್ ಸರ್ಕಾರದ ಪರವಾಗಿ ಹಾಗೂ ಸೇನಾ ಯೋಧರಿಂದ ಮೌನಾಚರಣೆ ಸಲ್ಲಿಸಿ ಅಂತಿಮ ನಮನ ಸಲ್ಲಿಸಲಾಯಿತು. 12 ಘಂಟೆಗೆ ಪುತ್ರ ಪುನಿತ್ ವಿಧಿವಿಧಾನಗಳನ್ನು ನೆರವೇರಿಸಿದರು. ಪತ್ನಿ ಭಾಗ್ಯಮ್ಮ ಮತ್ತು ಕುಟುಂಬ ವರ್ಗ ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಭಾಗವಹಿಸಿದ್ದರು.
ಈ ವೇಳೆ ತಾಲ್ಲೂಕಿನ ಮೂಲೆ ಮೂಲೆಗಳಿಂದ ಆಗಮಿಸಿದ ಅಭಿಮಾನಿಗಳು ಡಿ.ರಂಗಯ್ಯ ಅಮರ್ ರಹೇ ಎಂಬ ಘೋಷಣೆಗಳನ್ನು ಕೂಗಿದರು. ಅರಸೀಕೆರೆ ಪೋಲೀಸ್ ಠಾಣಾ ಎಸ್‍ಐ ರಂಗಪ್ಪ ಮತ್ತು ಪೋಲೀಸ್ ಪೇದೆಗಳು ಬಿಗಿ ಪೋಲೀಸ್ ಬಂದೊಬಸ್ತ್ ಕಲ್ಪಿಸಿದ್ದರು.
ಅಂತಿಮ ದರ್ಶನ ಪಡೆದ ಪ್ರಮುಖರು :
ಕೊರಟಗೆರೆ ಎಲೆರಾಂಪುರದ ಪೀಠಾಧಿಪತಿ ಹನುಮಂತ ನಾಥ ಸ್ವಾಮೀಜಿ, ಶಾಸಕ ವೆಂಕಟರವಣಪ್ಪ, ಮಾಜಿ ಶಾಸಕ ತಿಮ್ಮರಾಯಪ್ಪ, ಮಧುಗಿರಿ ಎಸಿ ಸೊಮಪ್ಪ ಕಡಕೋಳ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ವಿ.ವೆಂಕಟೇಶ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಅಂಜಿನಪ್ಪ, ಪುರಸಭಾ ಮಾಜಿ ಅಧ್ಯಕ್ಷ ಮಾನಂವೆಂಕಟಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ಸೊಗಡು ವೆಂಕಟೇಶ್, ಶಂಕರ್ ರೆಡ್ಡಿ, ಸಮಾಜ ಸೇವಕ ನೇರಳೆಕುಂಟೆ ನಾಗೇಂದ್ರಕುಮಾರ್, ಸಮಾಜ ಸೇವಕಿ ಸಾಯಿಸುಮನಾ, ಕೆ.ಟಿ.ಹಳ್ಳಿ ಗ್ರಾಪಂ ಪಿಡಿಓ ಕಿಶೋರ್‍ಲಾಲ್‍ಸಿಂಗ್ ಇತರರು ಅಂತಿಮ ದರ್ಶನ ಪಡೆದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
