ಹುಳಿಯಾರು:
ಗ್ರಾಮೀಣ ಅಭಿವೃದ್ಧಿ ಸಚಿವರಾದ ಕೆ.ಎಸ್.ಈಶ್ವರಪ್ಪ ಹಾಗೂ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಮೈಸೂರು ಹಾಗೂ ಬೆಂಗಳೂರು ಕಂದಾಯ ವಿಭಾಗಗಳ ಗ್ರಾಮ ಪಂಚಾಯತಿ ಅಧ್ಯಕ್ಷರುಗಳ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿದರು. ಈ ಸಭೆಯಲ್ಲಿ ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಕೆ.ಸಿ.ವಿಕಾಸ್ ಅವರು ಭಾಗವಹಿಸಿ ತಮ್ಮ ಸಲಹೆಗಳನ್ನು ನೀಡಿದರು.
ಪ್ರಮುಖವಾಗಿ ಹೋಮ್ ಐಸೋಲೇಷನ್‍ನಲ್ಲಿ ಇದ್ದವರ ಸಂಖ್ಯೆ ಹೆಚ್ಚಾಗುತ್ತಿದ್ದು, ಐಸೋಲೇಷನ್‍ಗೆ ಮನೆಯಲ್ಲಿ ವ್ಯವಸ್ಥೆ ಇಲ್ಲದವರನ್ನು ಕೋವಿಡ್ ಕೇರ್ ಸೆಂಟರ್‍ಗೆ ಕಳುಹಿಸಲು ಸಿಸಿಸಿ ಕೇಂದ್ರಗಳನ್ನು ಹೆಚ್ಚಿಸಬೇಕು. ಸ್ಥಳೀಯವಾಗಿ ಖಾಸಗಿ ವೈದ್ಯರು ಕೋವಿಡ್ ಪರೀಕ್ಷೆ ಮಾಡದೇ, ಚಿಕಿತ್ಸೆ ನೀಡುತ್ತಿರುವುದರಿಂದ ಅಂತಹವರು ಗ್ರಾಮದಲ್ಲಿ ತಿರುಗಾಡಿ ಹೆಚ್ಚು ಸೋಂಕು ಹಬ್ಬಿಸುತ್ತಿದ್ದಾರೆ, ಹೀಗಾಗಿ ಸ್ಥಳೀಯ ವೈದ್ಯರು ಕೂಡ ಕೋವಿಡ್ ಪರೀಕ್ಷೆಯ ಬಳಿಕ ಚಿಕಿತ್ಸೆ ನೀಡುವಂತೆ ಸೂಚಿಸಲು ತಿಳಿಸಿದರು.
ಅಲ್ಲದೇ ಕೋವಿಡ್ ಲಸಿಕೆ ಮೊದಲ ಡೋಸ್ ಹಾಕಿಕೊಂಡಿರುವವರು ಎರಡನೇ ಡೋಸ್‍ಗೆ ಪಕ್ಕದ ಹೋಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಲು ಸಾಧ್ಯವಿರುವುದಿಲ್ಲ, ಹೀಗಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಲಸಿಕೆ ಕೊಡಿಸುವ ವ್ಯವಸ್ಥೆ ಮಾಡಿದರೆ ಅಂಗವಿಕಲರಿಗೆ ಹಾಗೂ ವೃದ್ಧರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಈಗಾಗಲೇ ಕೆಂಕೆರೆ ಗ್ರಾಮ ಪಂಚಾಯತಿ ವತಿಯಿಂದ ಪಲ್ಸ್ ಆಕ್ಸಿಮೀಟರ್‍ಗಳನ್ನು ಆಶಾ ಕಾರ್ಯಕರ್ತೆಯರಿಗೆ ನೀಡಲಾಗಿದ್ದು, ನಿತ್ಯ ಅವರು ಮನೆ ಮನೆಗೆ ತೆರಳಿ ಸಾರ್ವಜನಿಕರ ತಪಾಸಣೆ ಮಾಡಿ ಮಾಹಿತಿ ನೀಡುತ್ತಿದ್ದಾರೆ. ಇದರಿಂದ ಹೆಚ್ಚು ಅನುಕೂಲ ಆಗಿದೆ ಹಾಗೂ ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರು ಮನೆಮನೆಗೆ ತೆರಳಿ 18 ರಿಂದ 45 ವರ್ಷ ವಯೋಮಾನದವರಿಗೆ ಕೋವಿಡ್ ಲಸಿಕೆ ಪಡೆಯಲು ನೋಂದಣಿ ಪ್ರಾರಂಭಿಸಿದ್ದೇವೆ ಎಂದು ಸಚಿವರು ಮತ್ತು ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
