ತುಮಕೂರು
ಬೆಂಗಳೂರು ಮೂಲದ ಓರ್ವ ವ್ಯಕ್ತಿಯನ್ನು ಕುಣಿಗಲ್ ಪೊಲೀಸರು ಬಂಧಿಸಿ, ಆತನ ಮೂಲಕ ಒಟ್ಟು 11 ಕಳವು ಪ್ರಕರಣಗಳನ್ನು ಪತ್ತೆ ಮಾಡಿ ಒಟ್ಟು 52,00,000 ರೂ. ಮೌಲ್ಯದ ಆಭರಣ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಕೋನಾ ವಂಶಿಕೃಷ್ಣ ತಿಳಿಸಿದ್ದಾರೆ.
ಇತ್ತೀಚೆಗೆ ಕುಣಿಗಲ್ ತಾಲ್ಲೂಕು ಅಮೃತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರೊಂದರ ಗಾಜು ಒಡೆದು ಅದರಲ್ಲಿದ್ದ ಚಿನ್ನಾಭರಣಗಳು ಮತ್ತು ಲ್ಯಾಪ್ ಟ್ಯಾಪ್, ಮೊಬೈಲ್ ಕಳವು ಮಾಡಿದ್ದ ಪ್ರಕರಣ ನಡೆದಿತ್ತು. ಅಮೃತೂರು ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದರು. ಈ ತಂಡವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಬಿ.ಪಿ.ಲೋಕೇಶ್ ಅಲಿಯಾಸ್ ಲೋಕಿ ಅಲಿಯಾಸ್ ಜಗ್ಗುದಾದ (41) ಎಂಬಾತನನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಅಮೃತೂರು ಠಾಣೆ ವ್ಯಾಪ್ತಿಯ 2 ಕಳ್ಳತನ ಸೇರಿದಂತೆ ಒಟ್ಟು 11 ಪ್ರಕರಣಗಳಲ್ಲಿ ಈತ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ಅಮೃತೂರು ಠಾಣೆಯ 2, ಕ್ಯಾತಸಂದ್ರ ಠಾಣೆಯ 1, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಠಾಣೆಯ 2, ರಾಜಾನುಕುಂಟೆ ಠಾಣೆಯ 2, ಬೆಂಗಳೂರು ನಗರದ ಪುಟ್ಟೇನಹಳ್ಳಿ ಠಾಣೆಯ 1, ಮಂಡ್ಯ ಜಿಲ್ಲೆ ಬೆಳ್ಳೂರು ಠಾಣೆಯ 1, ಜಯನಗರ ಠಾಣೆಯ 1 ಮನೆಗಳವು, ಪುಟ್ಟೇನಹಳ್ಳಿ ಠಾಣೆಯ 1 ಮನೆಗಳವು ಪ್ರಕರಣ ಸೇರಿ ಒಟ್ಟು 11 ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದುದು ಬೆಳಕಿಗೆ ಬಂದಿದೆ. ಈತನಿಂದ ಒಟ್ಟು 663 ಗ್ರಾಂ ತೂಕದ ಒಟ್ಟು ಸುಮಾರು 52 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು, ಡೈಮಂಡ್ ಆಭರಣಗಳು, 4 ಲ್ಯಾಪ್ ಟ್ಯಾಪ್‍ಗಳು, 4 ಮೊಬೈಲ್‍ಗಳು, ಕೃತ್ಯಕ್ಕೆ ಬಳಸಿದ ಒಂದು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಡಿಷನಲ್ ಎಸ್ಪಿ ಟಿ.ಜೆ. ಉದೇಶ್, ಕುಣಿಗಲ್ ಡಿವೈಎಸ್ಪಿ ಜಗದೀಶ್, ಕುಣಿಗಲ್ ಸರ್ಕಲ್ ಇನ್ಸ್‍ಪೆಕ್ಟರ್ ನಿರಂಜನ್ ಕುಮಾರ್ ಇವರ ಮಾರ್ಗದರ್ಶನದಲ್ಲಿ ಅಮೃತೂರು ಸಬ್‍ಇನ್ಸ್‍ಪೆಕ್ಟರ್ ಬಿ.ಪಿ.ಮಂಜು ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ಕಚೇರಿಯ ನರಸಿಂಹರಾಜು, ರಮೇಶ್, ಜಗದೀಶ್ ಮತ್ತು ಠಾಣಾ ಸಿಬ್ಬಂದಿಗಳಾದ ಪ್ರಕಾಶ್, ನಟರಾಜ್, ನವೀನ್ ಕುಮಾರ್, ಪರಮೇಶ್, ಪುಟ್ಟರಾಜು, ಭಗವಂತರಾಯ ಬಿರಾದಾರ್, ನರಸಿಂಹಮೂರ್ತಿ, ರವಿಕುಮಾರ್, ಶೇಖರ್, ಪ್ರಶಾಂತ್ ಅವರು ಈ ಪ್ರಕರಣಗಳ ಪತ್ತೆಗೆ ಶ್ರಮಿಸಿದ್ದಾರೆಂದು ಎಸ್ಪಿ ಡಾ.ವಂಶಿಕೃಷ್ಣ ಅವರು ತಿಳಸಿದ್ದು, ಈ ತಂಡವನ್ನು ಅಭಿನಂದಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ