ಹುಳಿಯಾರು :
ಎರಡು ತಿಂಗಳ ಲಾಕ್‍ಡೌನ್ ನಂತರ ಸಾರಿಗೆ ಸಂಸ್ಥೆ ಬಸ್‍ಗಳ ಓಡಾಟ ಕ್ರಮೇಣ ಮೊದಲಿನಂತೆ ಸಹಜ ಸ್ಥಿತಿಗೆ ಮರಳಿದೆ.
ಬೆಂಗಳೂರು, ಹೊಸದುರ್ಗ ಕಡೆ ಎಂದಿನಂತೆ ಅರ್ಧ ಗಂಟೆಗೊಂದರಂತೆ ಬಸ್‍ಗಳು ಸಂಚರಿಸುತ್ತಿವೆ. ತಿಪಟೂರು, ತುರುವೇಕೆ, ಶಿರಾ, ಹಿರಿಯೂರು ಕಡೆ ಆಗೊಂದು ಈಗೊಂದು ಬಸ್ ಬರುತ್ತಿವೆ, ಆದರೆ ಅರಸೀಕೆರೆ, ಚಿಕ್ಕಮಗಳೂರು, ಕಡೂರು ಮಾರ್ಗದಲ್ಲಿ ಇನ್ನೂ ಬಸ್ ಸಂಚಾರ ಆರಂಭವಾಗಿಲ್ಲ.
ಬೆಳಿಗ್ಗೆ ಕಚೇರಿ ಸಮಯ ಹಾಗೂ ಸಂಜೆ ವೇಳೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು. ಮಧ್ಯಾಹ್ನ ಬಸ್‍ಗಳಲ್ಲಿ ಪ್ರಯಾಣಿಕರೆ ಇರಲಿಲ್ಲ. ಶೇ 50 ರಷ್ಟು ಪ್ರಯಾಣಿಕರೊಂದಿಗೆ ಬಸ್‍ಗಳು ಸಂಚರಿಸಬೇಕೆಂದು ಸರ್ಕಾರ ನಿಯಮ ಜಾರಿಗೆ ತಂದಿದೆ. ಆದರೆ, ಆ ನಿಯಮ ಪಾಲನೆಯಾದಂತೆ ಕಂಡು ಬರಲಿಲ್ಲ. ಬಹುತೇಕ ಬಸ್‍ಗಳಲ್ಲಿ ಎಲ್ಲ ಸೀಟುಗಳು ತುಂಬಿದ್ದವು.
ಕೊರೊನ ಮೊದಲನೆ ಅಲೆಯ ಅನ್‍ಲಾಕ್ ನಂತರ ಪ್ರತಿಯೊಬ್ಬ ಪ್ರಯಾಣಿಕರಿಗೂ ಥರ್ಮಲ್ ಸ್ಕ್ರೀನಿಂಗ್ ನಡೆಸಿ ಬಸ್‍ಗಳಿಗೆ ಹತ್ತಿಸಲಾಗುತ್ತಿತ್ತು. ಅಂತರ ಕಾಯ್ದುಕೊಳ್ಳುವಿಕೆ, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು. ಈಗ ಅದ್ಯಾವುದೂ ಇಲ್ಲ. ಪ್ರಯಾಣಿಕರು ನಿಲ್ದಾಣದಲ್ಲಿ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ.
ಅದರಲ್ಲೂ ಬಸ್‍ಗೆ ಹತ್ತುವ ಸಂದರ್ಭದಲ್ಲಂತೂ ಅಂತರ ಮಾಯವಾಗಿ ಒಬ್ಬರ ಮೇಲೋಬ್ಬರು ಬಿದ್ದು ಬಸ್ ಹತ್ತುತ್ತಿದ್ದಾರೆ. ಬಸ್ ಇಳಿಯುವವರಿಗೂ ಅವಕಾಶ ಮಾಡಿಕೊಡದೆ ಸೀಟ್‍ಗಾಗಿ ಬಸ್ ಒಳಗೆ ನುಗ್ಗುತ್ತಿದ್ದಾರೆ. ಕಂಡಕ್ಟರ್‍ಗಳು ಕಂಡೂ ಕಾಣದಂತೆ ಮೌನಕ್ಕೆ ಶರಣಾಗುತ್ತಿದ್ದಾರೆ. ಕೆಲವೊಂದು ಸಂದರ್ಭದಲ್ಲಿ ಸ್ಟಾಂಡಿಂಗ್ ಸೀಟ್ ಹಾಕಿಕೊಂಡು ಬರುತ್ತಿದ್ದಾರೆ.
ಒಟ್ಟಾರೆ ಅನ್‍ಲಾಕ್ ಆಗಿದ್ದೇ ತಡ ಜನರು ಕೊರೊನಾ ಭಯದಿಂದ ಹೊರಬಂದು ಕೋವಿಡ್ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. 3 ನೇ ಅಲೆ ಭಾರಿ ಸಾವು – ನೋವು ತಂದೊಡ್ಡುತ್ತದೆಂದು ತಜ್ಞರು ಎಚ್ಚರಿಕೆ ನೀಡಿದ್ದರೂ ಜನರು ಮಾತ್ರ ಎಚ್ಚರಿಕೆ ವಹಿಸುತ್ತಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
