ಅಂಗನವಾಡಿ ಕಾರ್ಯಕರ್ತೆಯರಿಗೆ ಹೊರೆಯಾದ ಮೊಟ್ಟೆ

ಹುಳಿಯಾರು :

      ಅಂಗನವಾಡಿಗಳ ಮೂಲಕ ಮಕ್ಕಳ ಹಾಗೂ ಗರ್ಭಿಣಿಯರ, ಬಾಣಾಂತಿಯರ ಅಪೌಷ್ಟಿಕತೆ ನಿವಾರಿಸಲು ವಿತರಿಸಲಾಗುತ್ತಿರುವ ಮೊಟ್ಟೆ ಈಗ ಅಂಗನವಾಡಿ ಕಾರ್ಯಕರ್ತೆಯರಿಗೆ ಹೊರೆಯಾಗಿದೆ. ಇಲಾಖೆ 3 ತಿಂಗಳಿಂದ ಮೊಟ್ಟೆ ಹಣ ಪಾವತಿಸದೆ ತಮ್ಮ ಸಂಬಳದಲ್ಲಿ ಮೊಟ್ಟೆ ಖರೀಧಿಸಿ ಫಲಾನುಭವಿಗಳಿಗೆ ಕೊಡುತ್ತಿದ್ದಾರೆ. ಅಲ್ಲದೆ ಮೊಟ್ಟೆಯ ಬೆಲೆಯು ಮಾರುಕಟ್ಟೆಯಲ್ಲಿ ಸರ್ಕಾರ ನಿಗಧಿಪಡಿಸಿರುವ ದರಕ್ಕಿಂತಲೂ ಹೆಚ್ಚಾಗಿರುವುದು ಅಂಗನವಾಡಿ ಕಾರ್ಯಕರ್ತೆಯರ ಆರ್ಥಿಕ ಹೊರೆಗೆ ಕಾರಣವಾಗಿದೆ.

ಹೆಚ್ಚುವರಿ 2 ರೂಪಾಯಿ ಹೊರೆ :

      ಸರ್ಕಾರ ಅಂಗನವಾಡಿ ಕೇಂದ್ರಗಳ ಮೂಲಕ ಆಯಾ ಅಂಗನವಾಡಿ ಕೇಂದ್ರಗಳ ವ್ಯಾಪ್ತಿಯ 3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ವಾರಕ್ಕೆ 2 ಮೊಟ್ಟೆ, ಅಪೌಷ್ಠಿಕ ಮಕ್ಕಳಿಗೆ ವಾರಕ್ಕೆ 5 ಮೊಟ್ಟೆ, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ವಾರಕ್ಕೆ 6 ಮೊಟ್ಟೆಗಳಂತೆ ವಿತರಿಸಲಾಗುತ್ತಿದೆ. ಸರ್ಕಾರ ಪ್ರತಿ ಮೊಟ್ಟೆಗೆ 5 ರೂ. ನಿಗದಿಪಡಿಸಿದೆ. ಆದರೆ ಮಾರುಕಟ್ಟೆಯಲ್ಲಿ ಪ್ರತಿ ಮೊಟ್ಟೆಯ ದರ ಪ್ರಸ್ತುತ 7 ರೂ. ಅಸುಪಾಸಿನಲ್ಲಿ ಮಾರಾಟವಾಗುತ್ತಿರುವುದರಿಂದ ಹೆಚ್ಚುವರಿ 2 ರೂಪಾಯಿಯನ್ನು ಹೇಗೆ ಹೊಂದಿಸಬೇಕೆನ್ನುವ ಗೊಂದಲ ಅಂಗನವಾಡಿ ಕಾರ್ಯಕರ್ತೆಯರದಾಗಿದೆ.

ಸ್ವಂತ ದುಡ್ಡಲ್ಲಿ ಮೊಟ್ಟೆ ಖರೀದಿ :

      ಪ್ರತಿ ಮಾಹೆ ಮೊಟ್ಟೆ ಹಣ ಪಾವತಿಸುತ್ತಿದ್ದ ತಾಲೂಕು ಪಂಚಾಯ್ತಿ ಕಳೆದ 3 ತಿಂಗಳಿಂದ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಟ್ಟೆಯ ಅನುದಾನ ಬಿಡುಗಡೆ ಮಾಡಿಲ್ಲ. ಹಾಗಾಗಿ ಅಂಗನವಾಡಿ ಕಾರ್ಯಕರ್ತೆಯರು ಮಾಸಿಕ ಕನಿಷ್ಟ 1500 ರೂಗಳಿಂದ 2500 ರೂ.ಗಳಷ್ಟು ಹಣವನ್ನು ತಮ್ಮ ಕೈಯಿಂದ ಭರಿಸಿ ಮೊಟ್ಟೆ ತರಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ತಾಪಂ ಕಾರ್ಯ ನಿರ್ವಾಹಣಾಧಿಕಾರಿಗಳ ವರ್ಗಾವಣೆಯಿಂದಾಗಿ ಈ ಸಮಸ್ಯೆ ಸೃಷ್ಠಿಯಾಗಿದ್ದು, ನೂತನ ಇಓ ತಕ್ಷಣ ಹಣ ಬಿಡುಗಡೆ ಮಾಡಿ ಕಾರ್ಯಕರ್ತೆಯರ ಮೇಲಿನ ಹೊರೆ ಇಳಿಸುವ ಜವಾಬ್ದಾರಿ ಇದೆ.

ವ್ಯತ್ಯಾಸದ ಹಣ ಗ್ರಾಪಂ ಹೆಗಲಿಗೆ :

      ಉಳಿದಂತೆ ಮೊಟ್ಟೆ ದರದ ವ್ಯತ್ಯಾಸದ ಹಣವನ್ನು ಗ್ರಾಮ ಪಂಚಾಯಿತಿಗಳ ಸ್ವಂತ ಸಂಪನ್ಮೂಲದಿಂದ ಪಾವತಿಸಿ ವೆಚ್ಚ ಭರಿಸುವಂತೆ ಜಿಲ್ಲಾ ಪಂಚಾಯಿತಿಯಿಂದ ಆದೇಶ ಹೊರಡಿಸಿದ್ದಾರೆ. ಆದರೆ ಈ ಹಣವನ್ನು ಇದೂವರೆವಿಗೂ ಯಾವ ಪಂಚಾಯ್ತಿಯೂ ಬಿಡುಗಡೆ ಮಾಡಿಲ್ಲವಾದರೂ ಕೊಡುವ ಭರವಸೆಗಳನ್ನು ಕೆಲ ಪಂಚಾಯ್ತಿಗಳು ನೀಡಿದೆ. ಆದರೆ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಅಂಗನವಾಡಿಗಳಿಗೆ ಮಾತ್ರ ವ್ಯತ್ಯಾಸದ ಹಣವನ್ನು ಕೊಡುವುದೇ ಇಲ್ಲ ಎಂದು ಪಪಂ ಮುಖ್ಯಾಧಿಕಾರಿಗಳು ಕಡ್ಡಿ ಮುರಿದಂತೆ ಹೇಳಿದ್ದಾರೆ.
ಹಾಗಾಗಿ ಹುಳಿಯಾರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಹತ್ತನ್ನೆರಡು ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಟ್ಟೆ ಕೊಡುವುದು ಸಂಪೂರ್ಣ ಹೊರೆ ಯೋಜನೆಯಾಗಿ ಪರಿಣಮಿಸಿದೆ.

      ಮಾರುಕಟ್ಟೆಯಲ್ಲಿ ಮೊಟ್ಟೆದರ ಹೆಚ್ಚಳವಾಗಿರುವುದರಿಂದ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಕೈಯಿಂದಲೇ ಹೆಚ್ಚುವರಿ ಮೊತ್ತವನ್ನು ಭರಿಸುತ್ತಿದ್ದಾರೆ. ವ್ಯತ್ಯಾಸದ ಹಣ ಬಿಡುಗಡೆ ಮಾಡುವಂತೆ ಗ್ರಾ.ಪಂ.ಗಳಿಗೆ ಆದೇಶ ಬಂದಿದ್ದರೂ ಸಹ ಇದುವರೆಗೆ ಯಾವ ಪಂಚಾಯಿತಿಯೂ ಹಣ ಪಾವತಿಸಿಲ್ಲ. ಆದರೆ ಸಾಮಾನ್ಯ ಸಭೆಗೆ ಬಂದು ಸದಸ್ಯರ ಒಪ್ಪಿಗೆ ಪಡೆಯಿರಿ ಕೊಡುತ್ತೇವೆ ಎನ್ನುತ್ತಿದ್ದಾರೆ. ಆದರೆ ಪಂಚಾಯ್ತಿಗಳು ಹಣ ಕೊಡುವವರೆವಿಗೂ ಕಾಯದೆ ಕೋವಿಡ್ 3 ನೇ ಅಲೆ ಎದುರಿಸಲು ಅಪೌಷ್ಠಿಕ ಮಕ್ಕಳಿಗೆ ತಕ್ಷಣ ಮೊಟ್ಟೆ ಕೊಡಬೇಕಿದೆ.

-ಪುಷ್ಪಾ, ಕಾರ್ಯದರ್ಶಿ, ಅಂಗನವಾಡಿ ಕಾರ್ಯಕರ್ತೆಯ ಸಂಘ,

      ಮೊಟ್ಟೆ ಖರೀದಿಗೆ ಸಂಬಂಧಪಟ್ಟಂತೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿಗಳಿಗೆ ಹಣ ಪಾವತಿಸುವಂತೆ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ. ಪಟ್ಟಣ ಪಂಚಾಯ್ತಿಯಿಂದ ನಿರ್ವಹಿಸುತ್ತಿರುವ ಅಂಗನವಾಡಿಗಳಿಗೆ ಹಣ ನೀಡಲು ಅವಕಾಶವಿದೆ. ಆದರೆ ಹುಳಿಯಾರಿನಲ್ಲಿ ಇರುವ ಎಲ್ಲಾ ಅಂಗನವಾಡಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕೇಂದ್ರಗಳಾಗಿವೆ. ಹಾಗಾಗಿ ಮೊಟ್ಟೆ ಹಣವನ್ನು ನಾವು ಕೊಡಲು ಸಾಧ್ಯವಿಲ್ಲ ಎಂದು ಕಾರ್ಯಕರ್ತೆಯರಿಗೆ ತಿಳಿಸಿದ್ದೇನೆ. ಮುಂದಿನ ವಾರ ನಡೆಯುವ ತಾಲೂಕು ಸಭೆಯಲ್ಲೂ ಅಧಿಕಾರಿಗಳಿಗೆ ಈ ಬಗ್ಗೆ ಸ್ಪಷ್ಟನೆ ನೀಡುತ್ತೇನೆ.

-ಮಂಜುನಾಥ್, ಮುಖ್ಯಾಧಿಕಾರಿ, ಪಟ್ಟಣ ಪಂಚಾಯ್ತಿ, ಹುಳಿಯಾರು.

 

ಎಚ್.ಬಿ.ಕಿರಣ್‍ಕುಮಾರ್

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap