ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ನಡೆ.. ಹಳ್ಳದ ಕಡೆ

0
60

      ಮೈತ್ರಿ ಸರ್ಕಾರದಲ್ಲಿ ಜೆಡಿಎಸ್‍ನ ನಡೆ ಹಾಗೂ ಲೋಕ ಸಭಾ ಚುನಾವಣೆಯ ಸೀಟು ಹಂಚಿಕೆ ವಿಚಾರಕ್ಕಾಗಿ ಅದು ಹಾಕುತ್ತಿರುವ ಪಟ್ಟನ್ನು ಸೂಕ್ಷ್ಮವಾಗಿ ಗಮನಿಸಿದರೆ ರಾಜ್ಯ ಕಾಂಗ್ರೆಸ್‍ನ ಸ್ಥಿತಿ ಕೋಡಗನ್ನ ಕೋಳಿನುಂಗಿತ್ತ ಎಂಬತಾಗಿದೆ.

      ಕಳೆದ ಒಂಭತ್ತು ತಿಂಗಳ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರದ ಆಡಳಿತ ವೈಖರಿಯನ್ನು ನೋಡಿದರೆ ಎಲ್ಲಾ ನಿರ್ಧಾರಗಳಲ್ಲೂ ಜೆಡಿಎಸ್ ಮೇಲುಗೈ ಸಾಧಿಸುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳ ಪೈಕಿ 80 ಸ್ಥಾನ ಗಳಿಸಿದ್ದರೂ, 37 ಸೀಟು ಗೆದ್ದಿರುವ ಜೆಡಿಎಸ್ ಮುಂದೆ ಕಾಂಗ್ರೆಸ್ ಮಂಡಿಯೂರಿದ್ದು, ಅದರ ಇಂದಿನ ಸ್ಥಿತಿಗೆ ಕಾರಣ.

    ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಹಳೇ ಮೈಸೂರು ಭಾಗದ ಜಿಲ್ಲೆಗಳಾದ ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು, ಬೆಂಗಳೂರು, ಕೋಲಾರ, ಚಿತ್ರದುರ್ಗ ಹಾಗೂ ಚಿಕ್ಕಮಗಳೂರುಗಳಿಗೆ ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ. ಹೀಗಿದ್ದರೂ ಕಾಂಗ್ರೆಸ್ ಚಕಾರವೆತ್ತಿಲ್ಲ.

      ಇನ್ನು ಸಂಪುಟದಲ್ಲಿ ಜೆಡಿಎಸ್ ಪಾಲಿನಲ್ಲಿ ಒಂದೇ ಕೋಮಿನ ಬಹಳಷ್ಟು ಮಂದಿಗೆ ಅವಕಾಶ ಕಲ್ಪಿಸಲಾಗಿದೆ. ಸಾಮಾಜಿಕ ನ್ಯಾಯದ ಪರಿಪಾಲಕರಂತೆ ಬೊಬ್ಬೆ ಹೊಡೆಯುವ ಕಾಂಗ್ರೆಸ್ ನಾಯಕರೇಕೆ ಮೌನದಿಂದಿದ್ದಾರೆ ? ಸಮಿಶ್ರ ಸರ್ಕಾರವೆಂದ ಮೇಲೆ ಸಾಮಾಜಿಕ ನ್ಯಾಯದ ಸಿದ್ಧಾಂತ ಪರಿಪಾಲನೆ ಆಗಬೇಕಲ್ಲವೇ?

      ಇದಲ್ಲದೇ, ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕದಲ್ಲೂ ಕಾಂಗ್ರೆಸ್ ನಿರ್ಧಾರಕ್ಕೆ ಮೂರು ಕಾಸಿನ ಕಿಮ್ಮತ್ತು ಸಿಕ್ಕಿಲ್ಲ. ಉದಾಹರಣೆಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿಗೆ ಕಾಂಗ್ರೆಸ್ ತಮ್ಮಪಕ್ಷದ ಶಾಸಕ ಡಾ|| ಸುಧಾಕರ್ ಅವರನ್ನು ನೇಮಿಸಿತ್ತು. ಅದನ್ನು ತಿರಸ್ಕರಿಸಿದ್ದ ಜೆಡಿಎಸ್, ಇತ್ತೀಚೆಗಷ್ಟೆಸರ್ಕಾರಿನೌಕರಿಯಿಂದನಿವೃತ್ತರಾದತಮ್ಮಆಪ್ತಅಧಿಕಾರಿಗೆಈಹುದ್ದೆನೀಡಲಾಗಿದೆ. ಇದುವರೆಗೆ ಕರ್ನಾಟಕ ಲೋಕ ಸೇವಾ ಆಯೋಗದ ಮೂಲಕ ಆಯ್ಕೆ ಮಾಡುತ್ತಿದ್ದ ಎಂಜಿನಿಯರ್‍ಗಳನ್ನು ತಾನೇ ಆಯ್ಕೆ ಮಾಡುವುದಾಗಿ ಲೋಕೋಪಯೋಗಿ ಇಲಾಖೆ ಕಾಯಿದೆಗೆ ತಿದ್ದುಪಡಿ ತಂದಿದೆ. ಶಾಸಕರ ಖರೀದಿ ಲಂಚ ಪ್ರಕರಣದ ಆರೋಪದ ಬಗ್ಗೆ ಎ.ಸಿ.ಬಿ ತನಿಖೆನಡೆಸುವಂತೆ ಸ್ಪೀಕರ್ ರಮೇಶ್‍ಕುಮಾರ್ ನೀಡಿದ ಆದೇಶಕ್ಕೆ ಸರ್ಕಾರ ತಿಲಾಂಜಲಿ ನೀಡಿದೆ. ಏಕೆಂದರೆ ಈ ತನಿಖೆ ತಮಗೆ (ಮುಖ್ಯಮಂತ್ರಿಗೆ) ತಿರುಗು ಬಾಣವಾಗುವ ಆತಂಕ. ಇದ್ಯಾವುದನ್ನು ಕಾಂಗ್ರೆಸ್ ಪ್ರಶ್ನಿಸುತ್ತಿಲ್ಲ. ಅಷ್ಟೇ ಏಕೆ, ಪ್ರಶ್ನಿಸುವ ಹಕ್ಕನ್ನೇ ಕಳೆದು ಕೊಂಡಿದೆ.

      ಟಿಕೆಟ್ ಹಂಚಿಕೆ ವಿಚಾರದಲ್ಲಂತೂ ಜೆಡಿಎಸ್ ಆಡಿದ್ದೇ ಆಟ. ಹೂಡಿದ್ದೇ ಲಗ್ಗೆ ಎಂಬತಾಗಿದೆ. ಜೆಡಿಎಸ್ ಗೆದ್ದಿರುವ ಹಾಸನ ಹಾಗೂ ಮಂಡ್ಯ ಜೊತೆಗೆ ಕೆಲವು ಕ್ಷೇತ್ರಗಳನ್ನು ಕೇಳುವುದು ಸಹಜ, ಇದು ಮೈತ್ರಿ ಸರ್ಕಾರದ ಸೂತ್ರವೂ ಹೌದು. ಆದರೆ ಮೈಸೂರು ಹಾಗೂ ಕಾಂಗ್ರೆಸ್‍ನ ಹಾಲೀ ಸದಸ್ಯರಿರುವ ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಚಿತ್ರದುರ್ಗ ಕ್ಷೇತ್ರಗಳಿಗಾಗಿ ಪಟ್ಟು ಹಿಡಿದಿದ್ದರೂ, ಕಾಂಗ್ರೆಸ್ ವರಿಷ್ಟರು ಕೈ ಕಟ್ಟಿಕೊಂಡು ಸುಮ್ಮನಿರುವುದು ಆ ಪಕ್ಷದ ಕಾರ್ಯಕರ್ತರಲ್ಲಿ ಜಿಗುಪ್ಸೆ ಮೂಡಿಸಿದೆ. ತಮ್ಮದು ಜಾತ್ಯತೀತ ಜನತಾದಳ ಎನ್ನುವ ಜೆಡಿಎಸ್ ವರಿಷ್ಟರು, ಒಕ್ಕಲಿಗ ಸಮುದಾಯ ಹೆಚ್ಚಿರುವ ಕ್ಷೇತ್ರಗಳ ಮೇಲೆ ಮಾತ್ರ ಏಕೆ ಕಣ್ಣಿಟ್ಟಿದ್ದಾರೆ ? ಉತ್ತರ ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗವಲ್ಲವೇ..

      ಕಳೆದ ವಿಧಾನಸಭಾ ಚುನಾವಣೆಗೆ ಮೊದಲು ಹಾಗೂ ಚುನಾವಣೆ ಪ್ರಚಾರದ ವೇಳೆ ಜೆಡಿಎಸ್ ಮೇಲೆ ಉರಿದು ಬೀಳುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಗೆ ಇದೆನ್ನೆಲ್ಲಾ ಈಗ ಸಹಿಸಿ ಕೊಂಡಿದ್ದಾರೆ ಎಂಬುದೇ ಸೋಜಿಗದ ಸಂಗತಿ. ತಮ್ಮ ತವರು ಜಿಲ್ಲೆಯಲ್ಲಿಯೇ ಜೆಡಿಎಸ್ ಅಭ್ಯರ್ಥಿಯಿಂದ ಸೊಲುಂಡೂ ಬಾದಾಮಿಗೆ ಪಲಾಯನ ಮಾಡಿರುವ ಸಿದ್ದು ಅವರನ್ನು ಮೈಸೂರಿನಿಂದ ಶಾಶ್ವತವಾಗಿ ಅಟ್ಟುವ ತಂತ್ರ ಕಾಣುತ್ತಿದೆ.

      ಅಂದರೆ ಮೈಸೂರು ಲೋಕಸಭಾ ಟಿಕೆಟ್ ಜೆಡಿಎಸ್ ಪಾಲಾಗುವ ಸಾಧ್ಯತೆಯ ಹೆಚ್ಚು. ಹಾಗಾದರೆ ಸಿದ್ದು ತವರು ಮನೆ ಬಿಟ್ಟು ಶಾಶ್ವತವಾಗಿ ನೆರೆಮನೆ(ಬಾದಾಮಿ)ಯಲ್ಲಿ ಉಳಿಯಬೇಕಾದೀತು. ಮೈತ್ರಿ ಸರ್ಕಾರದ ಸಂಚಾಲಕರಾಗಿದ್ದು ಕೊಂಡು ತಮ್ಮ ಪಕ್ಷದ ಹಾಲಿ ಸಂಸದರಿಗೆ ಟಿಕೆಟ್ ತಪ್ಪಿಸಿದರೆ ಕಾಂಗ್ರೆಸ್‍ನ ಕಾರ್ಯಕರ್ತರು ಇವರನ್ನು ಕ್ಷಮಿಸುವುದಿಲ್ಲ. ಇನ್ನು ಕಾಂಗ್ರೆಸ್ ಉಸ್ತುವಾರಿ ಕೆಸಿವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡುರಾವ್ ಹಾಗೂ ಡೆಪ್ಯೂಟಿ ಸಿ.ಎಂಪರಮೇಶ್ವರ್ ಆಟಕ್ಕೂಂಟು ಲೆಕ್ಕಕಿಲ್ಲ ಎಂಬಂತಾಗಿದೆ.

      ಮುಂದೊಂದು ದಿನ ಅಂದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಸೂತ್ರದ ಪ್ರಕಾರ ಇಡೀ ಮಂಡ್ಯ ಜಿಲ್ಲೆಯನ್ನು ಜೆಡಿಎಸ್‍ಗೆ ಧಾರೆಯೆರೆದು ಕೊಡಬೇಕಾಗುತ್ತದೆ. ಏಕೆಂದರೆ 7 ವಿಧಾನಸಭಾ ಕ್ಷೇತ್ರಗಳು ಈಗ ಜೆಡಿಎಸ್ ವಶದಲ್ಲಿವೆ. ಆಗ ಆ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರ ಪರಿಸ್ಥಿತಿ ಏನು ? 

      ಕಾಂಗ್ರೆಸ್ ಈಗ ಜೆಡಿಎಸ್‍ಗೆ 8-10ಸ್ಥಾನಗಳನ್ನು ಬಿಟ್ಟು ಕೊಟ್ಟು ಎರಡು ಪಕ್ಷಗಳ ಬಲದಿಂದ ಜೆಡಿಎಸ್ 6-8 ಸ್ಥಾನಗಳನ್ನೇನಾದರೂ ಗಳಿಸಿದರೆ ಉಳಿದ 18 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕೂಡ ಜೆಡಿಸ್‍ಗಿಂತ ಹೆಚ್ಚು ಸ್ಥಾನಗಳನ್ನು ಗಳಿಸುವ ಸಾಧ್ಯತೆ ಕಡಿಮೆ. ಅಂದರೆ ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಸಿಮೀತವಾಗಿ ಅರ್ಥೈಸುವುದಾದರೆ ಜೆಡಿಎಸ್-ಕಾಂಗ್ರೆಸ್ ಸಮ ಬಲ ಎಂಬುದನ್ನು ಒಪ್ಪಿಕೊಂಡಂತೆ ಆಯಿತು. ಹೀಗೆ ಕ್ರಮೇಣ ಕಾಂಗ್ರೆಸ್‍ನ್ನು ಮೆಟ್ಟಿ ನಿಲ್ಲುವುದು ಜೆಡಿಎಸ್ ವರಿಷ್ಠರ (ದು) ದೂರಾಲೋಚನೆ.

      ಕಾಂಗ್ರೆಸ್ ಹೈಕಮಾಂಡ್‍ಗೆ ರಾಜ್ಯದಲ್ಲಿ ಏನಾದರೂ ಸರಿ, ಸದ್ಯಕ್ಕೆ ಮೈತ್ರಿ ಸರ್ಕಾರದ ಮೂಲಕ ಹೆಚ್ಚು ಸ್ಥಾನಗಳಿಸಿ ದೆಹಲಿ ಗದ್ದುಗೆ ಹಿಡಿಯುವುದು ಅವರ ಕನಸು. ರಾಜ್ಯದಲ್ಲಿ ಜೆಡಿಎಸ್ ನಾಯಕರನ್ನು ಮಣಿಸ ಬಲ್ಲ ಶಕ್ತಿ ಇರುವುದು ಸಿದ್ದುವಿಗೆ ಮಾತ್ರ. ಆದರೂ ಕಾಂಗ್ರೆಸ್ ದಿನೇ ದಿನೇ ಅವರ ಕೈ ಕಟ್ಟಿಹಾಕುತ್ತಿದೆ. ಇದರಿಂದ ಪಕ್ಷದ ಜೊತೆಗೆ ಸಿದ್ದು ವರ್ಚಸ್ಸು ಕುಸಿಯುತ್ತಿದೆ.

      ಜೆಡಿಎಸ್‍ನ ಕುಟುಂಬ ರಾಜಕಾರಣದ ದುಷ್ಪರಿಣಾಮ ಕಾಂಗ್ರೆಸ್ ಮೇಲೂ ಬೀಳದೆ ಇರದು. ಕಾಂಗ್ರೆಸ್- ಜೆಡಿಎಸ್‍ಗೆ ಸೀಟು ಬಿಟ್ಟು ಕೊಟ್ಟ ಜಿಲ್ಲೆಗಳಲ್ಲಿನ ಕಾಂಗ್ರೆಸ್ ಕಾರ್ಯಕರ್ತರ ಪಾಡೇನು? ಕಾಂಗ್ರೆಸ್ ಬೆಂಬಲವು ಸೇರಿ ಜೆಡಿಎಸ್, ಈಗಿರುವುದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಜಯಗಳಿಸಲಿದೆ. ಜೆಡಿಎಸ್‍ನ ಸಖ್ಯದಿಂದ ಕಾಂಗ್ರೆಸ್‍ಗೆ ಲಾಭವಾಗುವ ಸಾಧ್ಯತೆ ಇದೆಯೇ ? ಈಪ್ರಶ್ನೆಗಳಿಗೆ ಉತ್ತರ ಮಾತ್ರ ನಿಗೂಢ ! ಅಂದರೆ ದಿನ ಕಳೆದಂತೆ ರಾಜ್ಯದಲ್ಲಿ ಕಾಂಗ್ರೆಸ್ ಹಳ್ಳ ಹಿಡಿಯುತ್ತಿದೆ.

      ರಾಜ್ಯದ ಈಗಿನ 28 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 10 ಸ್ಥಾನ ಹೊಂದಿದೆ. ಈ ಪೈಕಿ ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ (ಹಾಲೀ ಸದಸ್ಯರಿರುವ ಕ್ಷೇತ್ರ) ಸ್ಥಾನಗಳನ್ನು ತ್ಯಜಿಸಿದರೆ ಚುನಾವಣೆಗೆ ಮೊದಲೇ ಈ 3 ಸ್ಥಾನಗಳನ್ನು ಕಳೆದುಕೊಂಡಂತಾಗುತ್ತದೆ. ಇನ್ನು, ಈಗಿನ ಸ್ಥಿತಿ ಅವಲೋಕಿಸಿದರೆ ಸೋಲಿಲ್ಲದ ಸರ್ದಾರ ಖ್ಯಾತಿಯ ಮಲ್ಲಿಕಾರ್ಜುನಖರ್ಗೆಯವರಿಗೆ ಪ್ರಥಮ ಬಾರಿಗೆ ಅಗ್ನಿಪರೀಕ್ಷೆ ಎದುರಾಗಿದೆ.
ಹೀಗಾಗಿ ಕಾಂಗ್ರೆಸ್ ತನ್ನ ಈಗಿನ 10 ಸ್ಥಾನಗಳ ಪೈಕಿ 3ನ್ನು ಜೆಡಿಎಸ್‍ಗೆ ಬಿಟ್ಟು ಆಕಸ್ಮಿಕವಾಗಿ ಖರ್ಗೆಯವರಿಗೆ ಸೀಟು ಕೈ ತಪ್ಪಿದರೆ ಪಕ್ಷಕ್ಕೆ ಉಳಿಯುವುದೇ 6 ಸ್ಥಾನ. ಜೆಡಿಎಸ್ ತನ್ನ ಈಗಿನ 2 ಕ್ಷೇತ್ರಗಳ ಜೊತೆಗೆ ಕಾಂಗ್ರೆಸ್‍ನಿಂದ ಕಿತ್ತುಕೊಂಡ 3 + ಮತ್ತೊಂದು ಕ್ಷೇತ್ರಗಳಲ್ಲಿ ಜಯಭೇರಿ ಗಳಿಸಿದರೆ ಅದರಗಳಿಕೆಯು 6ಕ್ಕೆ ಏರಲಿದೆ. ಅಂದರೆ ಸಂಖ್ಯಾಬಲದ ದೃಷ್ಟಿಯಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ ಬಲವಾಗುತ್ತವೆ. ಈ ಹೊಂದಾಣಿಯಿಂದ ಯಾರಿಗೆ ಲಾಭ ? ಯಾರಿಗೆ ನಷ್ಟ ? ನೀವೇ ಯೋಚಿಸಿ. ಅಂದರೆ 125 ವರ್ಷಗಳ ಇತಿಹಾಸವುಳ್ಳ ಕಾಂಗ್ರೆಸ್ ಎಂಬ ಆನೆಯನ್ನು, ಸುಮಾರು 25 ವರ್ಷಗಳ ಚರಿತ್ರೆಯುಳ್ಳ ಜೆಡಿಎಸ್ ಎಂಬ ಆಡು ನುಂಗಿದಂತಾಗುತ್ತದೆ. ? ಆಡು ಆನೆಯ ನುಂಗಿತ್ತ? ಎಂಬ ಶಿಶುನಾಳ ಶರೀಫರ ಹಾಡು ನೆನಪಿಗೆ ಬರುತ್ತದೆ.

      ಈಗಿನ ಮಹಾ ಚುನಾವಣೆಯಲ್ಲಿ ಕಾಂಗ್ರೆಸ್‍ನೊಂದಿಗೆ ಹೊಂದಾಣಿಕೆ ಮುಂದುವರಿಸಿಕೊಂಡು ಹೋಗಿ, ಮಹಾಘಟ ಬಂಧನದ ಭಾಗವಾಗಿ, ವಿಜಯಿಯಾದರೆ, ತಾವೇ ಪ್ರಧಾನಿಯಾಗಬೇಕು ಎಂಬುದು ಗೌಡರ ಮೊದಲ ಯೋಜನೆ ಮತ್ತು ಯೋಚನೆ. ಅದೇನಾದರೂ ಆಗದೆ, ಬಿಜೆಪಿಗೆ 265ರ ಆಸುಪಾಸು ಸ್ಥಾನಗಳು ಬಂದರೆ, ಆಗ ದೇವೇಗೌಡರೇ ಮುಂದಾಗಿ ಹೋಗಿ ಮೋದಿಯವರಿಗೆ ಬೆಂಬಲ ನೀಡುತ್ತಾರೆ. ನಂತರ ತಮ್ಮ ಮಗ ಕುಮಾರಸ್ವಾಮಿಯವರನ್ನು ಕೇಂದ್ರದಲ್ಲಿ ಮಂತ್ರಿಮಾಡಿ, ರಾಜ್ಯದಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಲು ಬಿಟ್ಟು, ತಮ್ಮ ಇನ್ನೊಬ್ಬ ಮಗ ರೇವಣ್ಣ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುವುದು ಅವರ ತಂತ್ರ. ನಂತರ ಎರಡು ವರ್ಷಗಳಾದ ಮೇಲೆ ತಮ್ಮನ್ನು ದೇಶದ ರಾಷ್ಟ್ರಪತಿ ಮಾಡಿ ಎಂಬ ಬೇಡಿಕೆ ಇಡುವುದು ಖಂಡಿತ.

      ಇನ್ನು ಮೋದಿಯವರಿಗೆ ಬಹುಮತ ಬಂದರೆ, ರಾಜ್ಯದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡು ಹೋಗುವುದು ದೊಡ್ಡಗೌಡರ ಮೂರನೇ ತಂತ್ರ. ಯಾಕೆಂದರೆ, ಕಾಂಗ್ರೆಸ್ ಸತ್ತು ಬಿಜೆಪಿ ತಮ್ಮ ಸಮಾನ ವೈರಿಗಳು ಹಾಗೂ ಸಮಾನಮಿತ್ರರು ಎಂಬುದನ್ನು ಅವರು ಈಗಾಗಲೇ ಸಾಬೀತುಮಾಡಿದ್ದಾರೆ. ಅಂದರೆ, ಚುನಾವಣೆಯ ನಂತರ ದೊಡ್ಡಗೌಡರ ಲೆಕ್ಕಚಾರವೆಂದರೆ 6 ದೋಸೆ ಕೊಟ್ಟರೆ ಅತ್ತೆ ಕಡೆಗೆ 3 ದೋಸೆ ಕೊಟ್ಟರೆ ಸೊಸೆ ಕಡೆಗೆ ಎಂಬ ಗಾದೆಯಂತೆ ಇರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ದೇವೇಗೌಡರ ತಂತ್ರಕ್ಕೆ ಪೂರಕವಾಗಿ ಎಂಬಂತೆ ಮೋದಿಯವರು ಸಹ ದೊಡ್ಡಗೌಡರು ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ತೆರೆಮರೆಯಲ್ಲಿ ಚಕ್ಕಂದವಾಡುತ್ತಿರುವುದು ರಹಸ್ಯವೇನಲ್ಲ.

      ರಾಜ್ಯದ ದೋಸ್ತಿಗಳ ಕಿತ್ತಾಟದಿಂದ ತಮಗೆ ಲಾಭವಾಗಲಿದೆ ಎಂದು ಬಿಜೆಪಿ ಬೀಗುವಂತಿಲ್ಲ. ಏಕೆಂದರೆ ಎಲ್ಲರ ಮನೆಯ ದೋಸೆಯೂ ತೂತು ಎಂಬಂತೆ ಬಿಜೆಪಿಯಲ್ಲಿಯೂ ಎಲ್ಲವೂ ನೆಟ್ಟಗಿಲ್ಲ. ಎತ್ತುಏ ರಿಗೆ, ಕೋಣ ಕೆರೆಗೆ ಎಂಬಂತಾಗಿದೆ ಆ ಪಕ್ಷದ ಇಂದಿನ ಸ್ಥಿತಿ. ತಕ್ಷಣ ಎಚ್ಚತ್ತುಕೊಳ್ಳದಿದ್ದರೆ ಕಮಲವನ್ನು ಎದೆಯ ಮೇಲಲ್ಲ, ಕಿವಿ ಮೇಲೆ ಇಟ್ಟುಕೊಳ್ಳ ಬೇಕಾದೀತು.

 

-ಆರ್.ಪಿ. ಜಗದೀಶ್

LEAVE A REPLY

Please enter your comment!
Please enter your name here