ಹುಳಿಯಾರು :
ಕೊರೊನಾದ ರೂಪಾಂತರ ವೈರಸ್ ಡೆಲ್ಟಾಪ್ಲೆಸ್ ಸೋಂಕಿನ ಶಂಕೆಯಿರುವ ಹುಳಿಯಾರು ಹೋಬಳಿಯ ಯಳನಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಂಗಾಪುರ ಗ್ರಾಮಕ್ಕೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭಾನುವಾರ ಭೇಟಿ ನೀಡಿ ಪರಿಶೀಲಿಸಿತು.
ಇಡೀ ಜಿಲ್ಲೆಯಲ್ಲೆ ಕೊರೊನಾ ಸೋಂಕಿತರ ಸಂಖ್ಯೆ ಸಿಂಗಾಪುರದಲ್ಲಿ ಹೆಚ್ಚಿದ್ದು ಒಂದು ವಾರದ ಅಂತರದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಅಲ್ಲದೆ ಕೊರೊನಾ ಪರೀಕ್ಷೆ ಮಾಡಿದಂತೆಲ್ಲಾ ಸೋಂಕಿತರ ಸಂಖ್ಯೆಯೂ ಸಹ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‍ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಚನ್ನಬಸಪ್ಪ, ಜಿಲ್ಲಾ ಪಂಚಾಯಿತಿ ಕಾರ್ಯಾನಿರ್ವಹಣಾಧಿಕಾರಿ ಕೆ.ವಿದ್ಯಾಕುಮಾರಿ, ತಹಶೀಲ್ದಾರ್ ಬಿ.ತೇಜಸ್ವಿನಿ, ಟಿಎಚ್‍ಒ ನವೀನ್ ಭೇಟಿ ನೀಡಿದ್ದರು.
ಗ್ರಾಮದಲ್ಲಿ ಕೊರೊನಾ ಸೋಂಕು ಹತೋಟಿಗೆ ತರಲು ತಾಲೂಕು ಆಡಳಿತ ತೆಗೆದುಕೊಂಡಿರುವ ಕ್ರಮ, ಆರೋಗ್ಯ ಇಲಾಖೆ ನಡೆಸುತ್ತಿರುವ ಕೊರೊನಾ ತಪಾಸಣೆ ಬಗ್ಗೆ ಮಾಹಿತಿ ಪಡೆದರಲ್ಲದೆ ಸೋಂಕು ಹತೋಟಿಗೆ ಬರುವವರೆವಿಗೂ ಸೀಲ್‍ಡೌನ್ ಮಾಡುವಂತೆ ಸೂಚಿಸಿದರು. ಅಲ್ಲದೆ ಗ್ರಾಮದಲ್ಲಿ ಕೆಟ್ಟಿರುವ ಶುದ್ಧ ನೀರಿನ ಘಟಕ ದುರಸ್ಥಿ ಮಾಡುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಬಿ.ತೇಜಸ್ವಿನಿ ಅವರು ಚಿತ್ರದುರ್ಗ ಜಿಲ್ಲೆಯ ಓಬಳಾಪುರ ಗ್ರಾಮಕ್ಕೂ ಸಿಂಗಾಪುರ ಗ್ರಾಮಕ್ಕೂ ನೆಂಟರಿಷ್ಟರ ಸಂಬಂಧವಿದೆ. ಇತ್ತೀಚೆಗೆ ಓಬಳಾಪುರ ಗ್ರಾಮದಿಂದ ಕೆಲವರು ಇಲ್ಲಿಗೆ ಆಗಮಿಸಿದ್ದರು. ಓಬಳಾಪುರ ಗ್ರಾಮದಲ್ಲಿ ಹೆಚ್ಚು ಜ್ವರ ಪೀಡಿತರು ಇದ್ದುದರಿಂದ ಕೊರೊನಾ ಸೋಂಕಿತರು ಹೆಚ್ಚಾಗಲು ಕಾರಣವಾಗಿದೆ. ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‍ಗೆ ದಾಖಲಿಸಲಾಗಿದೆ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ