ತುಮಕೂರು ಗ್ರಾಮಾಂತರದಲ್ಲಿ ಜಿದ್ದಾಜಿದ್ದಿ ರಾಜಕಾರಣ

0
32

ತುಮಕೂರು

        ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಇದೀಗ ತಾನೆ ಚುನಾವಣಾ ಕಾವು ಏರತೊಡಗಿದೆ. ಇಲ್ಲೇನಿದ್ದರೂ ಬಿಜೆಪಿ ಮತ್ತು ಜೆಡಿಎಸ್ ನಡುವಿನ ನೇರ ಸೆಣಸಾಟ ಕಂಡುಬರುತ್ತಿದ್ದು, ಈ ಬಾರಿ ಮೈತ್ರಿ ಅಭ್ಯರ್ಥಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ದೇವೇಗೌಡರೇ ಸ್ಪರ್ಧಿಸಿರುವುದರಿಂದ ಈ ಕ್ಷೇತ್ರದಲ್ಲಿ ಚುನಾವಣೆ ರಂಗು ಪಡೆಯುತ್ತಿದೆ.

       ದೇವೆಗೌಡರು ಸಂಸದರಾಗಿ, ಮಾಜಿ ಪ್ರಧಾನಿಯಾಗಿ. ಜಿ.ಎಸ್.ಬಸವರಾಜು ಈಗಾಗಲೇ ಹಲವು ಬಾರಿ ಸಂಸದರಾಗಿ ಕಾರ್ಯ ನಿರ್ವಹಿಸಿದವರು. ಈ ಇಬ್ಬರೂ ರಾಜಕೀಯ ಅನುಭವಿಗಳ ನಡುವಿನ ಸ್ಪರ್ಧೆ ಕುತೂಹಲ ಮೂಡಿಸಿದೆ. ಜೊತೆಗೆ ಗ್ರಾಮಾಂತರದಲ್ಲಿ ಬೇರೂರಿರುವ ಸ್ಥಳೀಯ ಕಡಕ್ ರಾಜಕಾರಣ ಮಾತ್ರ ಇತರೆ ಕ್ಷೇತ್ರಗಳಿಗಿಂತಾ ವಿಭಿನ್ನವಾಗಿದೆ. ಜಿಲ್ಲೆಯಲ್ಲಿ ನೀರಿಗೆ ಹಾಹಾಕಾರವಿದ್ದಾಗ್ಯೂ ದೇವೇಗೌಡರು ಇಲ್ಲಿಗೆ ಬರುವ ಹೇಮಾವತಿ ನೀರು ತಡೆದರು ಎಂಬುದು ಬಿಜೆಪಿಯ ಪ್ರಧಾನ ಆರೋಪ. ದೇವೇಗೌಡರು ಯಾವತ್ತೂ ನೀರಿನ ವಿಷಯದಲ್ಲಿ ಯಾರಿಗೂ ಅನ್ಯಾಯ ಮಾಡಿಲ್ಲ.

       ಹಲವು ನೀರಾವರಿ ಯೋಜನೆ ಕಾರ್ಯಗತಗೊಳ್ಳಲು ಕಾರಣರಾಗಿದ್ದಾರೆ. ಗೆದ್ದ ಮೇಲೆ ಪ್ರತಿ ಹಳ್ಳಿಗೂ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ತಮ್ಮ ಪ್ರಭಾವ ಬಳಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಜಿಲ್ಲೆಗೆ ಹಲವು ಯೋಜನೆ ತರುತ್ತಾರೆ ಎಂಬುದು ಜೆಡಿಎಸ್‍ನವರ ಸಮರ್ಥನೆ.

       ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಹಳ್ಳಿಗಳಲ್ಲಿ ಇಂತಹ ಅಭಿಪ್ರಾಯಗಳು ಚರ್ಚೆಯಾಗುತ್ತಾ ಉರಿಬಿಸಿಲಿನಲ್ಲಿ ಚುನಾವಣೆ ಕಾವು ಹೆಚ್ಚಿಸುತ್ತಾ ಲೋಕಸಭಾ ಚುನಾವಣೆ ಪ್ರಚಾರ ತೀವ್ರಗೊಳಿಸುತ್ತ್ತಿವೆ.

        ಜಿಲ್ಲಾ ಕೇಂದ್ರ ತುಮಕೂರು ನಗರದ ಸುತ್ತ ವ್ಯಾಪಿಸಿರುವ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ 7 ಜಿಲ್ಲಾ ಪಂಚಾಯ್ತಿ ಕ್ಷೇತ್ರ, 35 ಗ್ರಾಮ ಪಂಚಾಯ್ತಿ ವ್ಯಾಪ್ತಿಯ 363 ಹಳ್ಳಿಗಳ ಸುಮಾರು 2.23 ಲಕ್ಷ ಮತದಾರರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸಂಸತ್ ಸದಸ್ಯರ ಆಯ್ಕೆಗೆ ಸಜ್ಜಾಗಿದ್ದಾರೆ. ಗ್ರಾಮಾಂತರ ಕ್ಷೇತ್ರದ ರಾಜಕೀಯ, ಆಡಳಿತ ಚಟುವಟಿಕೆಗಳು ರೂಪುಗೊಳ್ಳುವುದು ಕ್ಷೇತ್ರದ ಹೊರಗಿರುವ ತುಮಕೂರಿನಲ್ಲೇ.

         ತುಮಕೂರು ಸ್ಮಾರ್ಟ್‍ಸಿಟಿಯಾಗಿ ನಾಗರಿಕ ಸೌಕರ್ಯ ಪಡೆಯುತ್ತಾ ರೂಪು ಗೊಳ್ಳುತ್ತಿರುವಾಗ ನಗರದ ಅಕ್ಕಪಕ್ಕದಲ್ಲೇ ಇರುವ ಈ ಹಳ್ಳಿಗಳಲ್ಲಿ ಕುಡಿಯುವ ನೀರು, ಸಾರಿಗೆ ಸೇವೆಯಂತಹ ಕನಿಷ್ಠ ಸೌಕರ್ಯಕ್ಕೂ ಪರದಾಡುವ ಪರಿಸ್ಥಿತಿ. ಈ ಬಾರಿಯ ಲೋಕ ಸಭಾ ಚುನಾವಣೆ ಅಭ್ಯರ್ಥಿ ಆಯ್ಕೆಗೆ ಗ್ರಾಮಾಂತರ ಕ್ಷೇತ್ರದ ಮತದಾರರು ನಿರ್ಣಾಯಕವಾಗಲಿದ್ದಾರೆ.

      ಇಲ್ಲಿ ಜೆಡಿಎಸ್, ಬಿಜೆಪಿ ಪಕ್ಷಗಳ ಬಲಾಬಲ ಮೇಲ್ನೋಟಕ್ಕೆ ಸಮ ಬಲವಾಗಿದೆ. ಶಾಸಕ ಗೌರಿಶಂಕರ್ ನೇತೃತ್ವದಲ್ಲಿ ಜೆಡಿಎಸ್ ಬಲವಧರ್ನೆಗೊಂಡಿದೆ. ಎರಡು ಬಾರಿ ಶಾಸಕರಾಗಿದ್ದ ಸುರೇಶ್‍ಗೌಡರ ಮುಂದಾಳತ್ವದ ಬಿಜೆಪಿ ಪ್ರಬಲವಾಗಿದೆ. ಈ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಏಳು ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಲ್ಲೂ ಬಿಜೆಪಿ ಸದಸ್ಯರಿದ್ದಾರೆ. ಜಿದ್ದಾಜಿದ್ದಿ ರಾಜಕಾರಣದಲ್ಲಿ ಎರಡು ಪಕ್ಷಗಳೂ ತಮ್ಮ ಸಾಮಥ್ರ್ಯ ಉಳಿಸಿಕೊಂಡಿವೆ.

        ಮಾಜಿ ಪ್ರಧಾನಿ ದೇವೆಗೌಡರು ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿರುವುದು ಜೆಡಿಎಸ್ ಪಾಲಿಗೆ ದೊಡ್ಡ ಪ್ರತಿಷ್ಠೆ. ದೇವೆಗೌಡರ ಪ್ರಭಾವ, ಜೆಡಿಎಸ್‍ನ ಸಾಮಥ್ರ್ಯದ ಜೊತೆಗೆ ಕಾಂಗ್ರೆಸ್‍ನ ಬೆಂಬಲ, ಗೌಡರನ್ನು ಬೆಂಬಲಿಸಬಹುದಾದ ಅಧಿಕ ಸಂಖ್ಯೆಯಲ್ಲಿರುವ ಒಕ್ಕಲಿಗ ಮತದಾರರು ದೇವೆಗೌಡರ ಮತ ಶಕ್ತಿ ಹೆಚ್ಚಿಸಬಹುದು. ಮತ್ತೊಂದೆಡೆ ಬಿಜೆಪಿಗೆ ನೆರವಾಗುವ ಮೋದಿ ಅಲೆ ಜೊತೆ ಮಾಜಿ ಶಾಸಕ ಸುರೇಶ್‍ಗೌಡರ ಸಾಮಥ್ರ್ಯ ಏನೆಂಬುದನ್ನು ಈ ಚುನಾವಣೆ ಸಾಬೀತು ಮಾಡಲಿದೆ.

        ಇತ್ತೀಚಿನ ಎಲ್ಲಾ ಚುನಾವಣೆಗಳಂತೆ ಈ ಚುನಾವಣೆಯಲ್ಲೂ ನೀರು ಪ್ರಮುಖ ವಿಷಯವಾದಂತಿದೆ. ಯಾವುದೇ ಹಳ್ಳಿಗಳಲ್ಲೂ ಚುನಾವಣೆ ಚರ್ಚೆ ಶುರುವಾದರೆ ಅಲ್ಲಿ ನೀರಿನ ವಿಷಯದ ಪ್ರಸ್ತಾಪ ಬಂದೇ ಬರುತ್ತದೆ. ಎಲ್ಲೆಡೆ ನೀರಿಗೆ ಅಂತಹ ಅಭಾವವಿದೆ. ಕುಡಿಯಲು ನೀರಿಲ್ಲ, ತೋಟ, ತುಡಿಕೆ ಒಣಗುತ್ತಿವೆ.

         1200 ಅಡಿ ನೆಲ ಕೊರೆದರೂ ಜಲವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆಶಾಭಾವನೆ ಮೂಡಿಸಿದ್ದು, ಕೆರೆಗಳಿಗೆ ಹರಿಸುವ ಹೇಮಾವತಿ ನೀರು, ಕೆರೆ ತುಂಬಿಸಿ, ಅಂತರ್ಜಲ ಹೆಚ್ಚಿಸಿ, ಬದುಕು ಉಳಿಸುವ ಈ ಯೋಜನೆಯ ಆಶಯ ಈಡೇರುತ್ತಲೇ ಇಲ್ಲ. 38 ಕೆರೆಗಳಿಗೆ ಹೇಮಾವತಿ ನೀರು ಹರಿಸುವ ಹೆಬ್ಬೂರು, ಗೂಳೂರು ಹೋಬಳಿ ಏತ ನೀರಾವರಿ ಯೋಜನೆ ಫಲಪ್ರದವಾಗಲಿಲ್ಲ. ನೀರಿನ ಭರವಸೆ ಮೇಲೆ ಎಷ್ಟೋ ಚುನಾವಣೆ ನಡೆದು ಹೋಗಿವೆ. ಈ ಲೋಕಸಭಾ ಚುನಾವಣೆಯೂ ಅದರಲ್ಲೊಂದು ಹೊರತು, ಹೆಚ್ಚಿನ ನಿರೀಕ್ಷೆ ಮಾಡುವಂತಿಲ್ಲ ಎಂಬ ನಿರಾಶಾ ಭಾವನೆ ಜನರಲ್ಲಿದೆ.

         ಹೇಳಿ-ಕೇಳಿ ಇದು ಲೋಕಸಭಾ ಚುನಾವಣೆ. ವಿಧಾನ ಸಭೆ, ಜಿಲ್ಲಾ ಪಂಚಾಯ್ತಿ ಚುನಾವಣೆ ರೀತಿಯಲ್ಲ. ಹತ್ತರಲ್ಲೊಂದು ಎಂಬಂತೆ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಇದೂ ಒಂದು ಕ್ಷೇತ್ರ ಎನ್ನುವ ಕಾರಣಕ್ಕೆ ಗ್ರಾಮಾಂತರ ಕ್ಷೇತ್ರದಲ್ಲಿ ಪಾರ್ಲಿಮೆಂಟ್ ಚುನಾವಣೆ ಹೆಚ್ಚು ಉತ್ಸಾಹ ಮೂಡಿಸಿಲ್ಲ.

         ಜೊತೆಗೆ ಪಕ್ಷಗಳ ನಾಯಕರು, ಕಾರ್ಯಕರ್ತರು ಪ್ರಚಾರಕ್ಕಾಗಿ ಇನ್ನೂ ಹಳ್ಳಿ ಮಟ್ಟಕ್ಕೆ ಬಂದಿಳಿದಿಲ್ಲ. ನಾಯಕರುಗಳು ಜಿಲ್ಲಾ ಕೇಂದ್ರ ತುಮಕೂರು ಮಟ್ಟದಲ್ಲೇ ಕಾರ್ಯಕರ್ತರ ಸಭೆ, ಪತ್ರಿಕಾ ಗೋಷ್ಠಿಗಳ ಪ್ರಚಾರದಲ್ಲೇ ಇದ್ದಾರೆ. ಹಳ್ಳಿಗಳ ಹಾದಿ ತುಳಿದಿಲ್ಲ. ತಮ್ಮ ಅಭ್ಯರ್ಥಿ ಪರ ತಮ್ಮ ಊರಿನಲ್ಲೂ ಮತದಾರರ ಮನೆಗೆ ತೆರಳಿ ಪ್ರಚಾರ ಮಾಡಿ ತಮ್ಮ ನಾಯಕತ್ವ ಕಾಪಾಡಿಕೊಳ್ಳಲು ಗ್ರಾಮದ ಮುಖಂಡರು ಉತ್ಸಾಹದಿಂದಿದ್ದಾರೆ. ಇವರನ್ನು ಇನ್ನಷ್ಟು ಹುರಿದುಂಬಿಸಲು ನಾಯಕರೇ ಪೂರ್ಣ ಪ್ರಮಾಣದಲ್ಲಿ ಸಿದ್ದರಾದಂತಿಲ್ಲ. ತಮಗೆ ಸೂಚನೆ ನೀಡಲು ಈ ಹೊತ್ತು ಬರುತ್ತಾರೆ, ನಾಳೆ ಬರುತ್ತಾರೆ ಎಂದು ಹಳ್ಳಿಗಳ ಮುಖಂಡರು ತಮ್ಮ ನಾಯಕರ ದಾರಿ ಎದುರು ನೋಡುತ್ತಿದ್ದಾರೆ.

          ಚುನಾವಣಾ ಪ್ರಚಾರಕ್ಕೆ ಯಾರು ಬರಲಿ ಬಿಡಲಿ, ತುಮಕೂರು ಗ್ರಾಮಾಂತರ ಕ್ಷೇತ್ರದ ಶೇಕಡ 80 ರಷ್ಟು ಮತದಾರರು ಯಾರಿಗೆ ಮತ ಹಾಕಬೇಕೆಂದು ತೀರ್ಮಾನಿಸಿದಂತಿದೆ. ಹಳ್ಳಿಗಳಲ್ಲಿ ಈ ಬಗ್ಗೆ ಯಾರನ್ನಾದರೂ ಕೇಳಿದಾಗ ಅವರು ಖಚಿತವಾಗಿ ತಮ್ಮ ಅಭಿಪ್ರಾಯ ಹೇಳುತ್ತಾರೆ. ಇನ್ನುಳಿದ ಶೇಕಡ 20 ರಷ್ಟು ಮತದಾರರು ಇನ್ನೂ ನಿರ್ಧರಿಸಿದಂತಿಲ್ಲ. ನಾಯಕರು, ಕಾರ್ಯಕರ್ತರು ತಮ್ಮ ಪಕ್ಷದ ಅಭ್ಯರ್ಥಿ ಪರ ಇಂತಹವರ ಮನವೊಲಿಸಲು ಅವಕಾಶವಿದೆ. ಇಂತಹ ಕೆಲಸ ಇನ್ನೂ ಆರಂಭವಾಗಿಲ್ಲ.

         ಬೆಳ್ಳಾವಿ ಹೋಬಳಿಯಲ್ಲಿ ಬಿಜೆಪಿಗೆ ಹೆಚ್ಚು ಒಲವು ಕಂಡು ಬಂದರೂ, ಗ್ರಾಮಾಂತರ ಕ್ಷೇತ್ರದಾದ್ಯಂತ ಮೈತ್ರಿ ಹಾಗೂ ಬಿಜೆಪಿ ಅಭ್ಯರ್ಥಿಗಳಿಗೆ ಸಮಬಲದ ಬೆಂಬಲ ಕಂಡು ಬಂದಿದೆ. ಮೇಲ್ನೋಟಕ್ಕೆ ಇದು ಕೂಡ ಜಾತಿ ಆಧಾರಿತ ಚುನಾವಣೆ ಆಗಲಿದೆ ಎಂಬ ಅನುಮಾನ ವ್ಯಕ್ತವಾದರೂ, ಅದು ಪೂರ್ಣ ಪ್ರಮಾಣದಲ್ಲಿ ಸಾಧ್ಯವಿಲ್ಲ.

         ಹೆಚ್ಚಿನ ಒಕ್ಕಲಿಗರು ದೇವೆಗೌಡರನ್ನು ಬೆಂಬಲಿಸುವುದು ಖಚಿತವಾದರೂ, ಮಾಜಿ ಶಾಸಕ ಸುರೇಶ್ ಗೌಡರ ಬೆಂಬಲಿಗ ಒಕ್ಕಲಿಗರು ಬಿಜೆಪಿ ಪರವಾಗಿದ್ದಾರೆ. ಬೆಳ್ಳಾವಿ, ಕಸಬಾ, ಹೊನ್ನುಡಿಕೆ ಹೋಬಳಿಗಳಲ್ಲಿ ಹೆಚ್ಚಾಗಿರುವ ಲಿಂಗಾಯತ ಮತಗಳು ಬಿಜೆಪಿಗೆ ತಪ್ಪುವುದಿಲ್ಲ. ಆದರೆ, ಶಾಸಕ ಗೌರಿಶಂಕರ್ ಬೆಂಬಲಿತ ಸಣ್ಣ ಪ್ರಮಾಣದ ಲಿಂಗಾಯಿತರು ದೇವೆಗೌಡರಿಗೆ ಮತ ಚಲಾಯಿಸುವುದೂ ನಿಜ. ಉಳಿದ ಜಾತಿಗಳ ಮತಗಳು ಆಯಾ ಅಭ್ಯರ್ಥಿಗಳು, ಪಕ್ಷದ ಬಗ್ಗೆ ಅವರಿಗಿರುವ ನಂಬಿಕೆ, ವಿಶ್ವಾಸ, ಅವರ ಮನವೊಲಿಸುವುದರ ಮೇಲೆ ನಿರ್ಧಾರವಾಗುತ್ತವೆ.

        ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್, ಬಿಜೆಪಿಯೇ ನೇರ ಎದುರಾಳಿಗಳು. ಇಲ್ಲಿ ಕಾಂಗ್ರೆಸ್ ಕಾರ್ಯಕರ್ತರಿದ್ದರೂ ಅವರನ್ನ ಸಂಘಟಿಸಿ ಶಕ್ತಿ ಕೊಡುವ ನಾಯಕರಿಲ್ಲದೆ ಕಾಂಗ್ರೆಸ್À ಸೊರಗಿದೆ. ಪ್ರತಿ ವಿಧಾನ ಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತ ಹೋಯಿತು. ಹೀಗಾಗಿ ಇಲ್ಲಿ ನೆಲೆಯೂರಿ ಪಕ್ಷ ಸಂಘಟಿಸುವ ನಾಯಕ ಇಲ್ಲದ ಕಾರಣ ಪಕ್ಷದ ಅಭ್ಯರ್ಥಿ ಇದ್ದರೂ, ಚುನಾವಣೆಗಳಲ್ಲಿ ಕಾಂಗ್ರೆಸ್ ಮತಗಳು ಇತರೆ ಪಕ್ಷಗಳಿಗೆ ಹಂಚಿ ಹೋಗಿರುವುದೇ ಹೆಚ್ಚು ಎಂದು ಆ ಪಕ್ಷದ ಮುಖಂಡರೆ ಹೇಳುತ್ತಾರೆ.

          ಎರಡೂ ಪಕ್ಷಗಳ ನಾಯಕರು ಮೈತ್ರಿ ಮಾಡಿಕೊಂಡಿದ್ದೇವೆ ಎಂದು ವೇದಿಕೆ ಮೇಲೆ ಪರಸ್ಪರ ಹೆಗಲ ಮೇಲೆ ಕೈ ಹಾಕಿಕೊಳ್ಳಬಹುದು. ಆದರೆ, ಪ್ರತಿ ಚುನಾವಣೆಯಲ್ಲೂ ಇತರೆ ಪಕ್ಷದವರನ್ನು ಎದುರಾಳಿಗಳಾಗಿ ಕಂಡು, ತಮ್ಮ ಬದುಕಿನಲ್ಲೂ ಅವರನ್ನು ಶತ್ರುಗಳಂತೆ ಭಾವಿಸಿ ಬೆಳೆದ ಕಾರ್ಯಕರ್ತರು, ತಮ್ಮ ನಾಯಕರು ಮೈತ್ರಿ ಮಾಡಿಕೊಂಡರು ಎಂದ ಮಾತ್ರಕ್ಕೆ ಅವರು ಅಷ್ಟು ಸಲೀಸಾಗಿ ಸಂಬಂಧ ಬೆಳೆಸಿಕೊಂಡು ಒಂದಾಗುವುದು ಸುಲಭವಲ್ಲ ಎಂದು ಹೆಸರು ಹೇಳಲು ಇಚ್ಚಿಸದ ಮುಖಂಡರೊಬ್ಬರು ಹೇಳುತ್ತಾರೆ.

           ಇದು ಲೋಕಸಭಾ ಚುನಾವಣೆಯೇ ಆಗಿದ್ದರೂ, ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಶಾಸಕ ಗೌರಿಶಂಕರ್ ಹಾಗೂ ಮಾಜಿ ಶಾಸಕ ಸುರೇಶ್ ಗೌಡರ ನಡುವಿನ ಮತ್ತೊಂದು ವಿಧಾನ ಸಭಾ ಚುನಾವಣೆ ಎನ್ನುವ ಭಾವನೆ ಜನರಲ್ಲಿ ಕಂಡುಬಂದಿದೆ. ಜಿಲ್ಲೆಯ ಇತರೆ ಕ್ಷೇತ್ರಗಳಿಗೆ ಹೋಲಿಸಿದರೆ ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್, ಬಿಜೆಪಿಯದು ಜಿದ್ದಾಜಿದ್ದಿ ರಾಜಕಾರಣ. ಶಾಸಕ ಹಾಗೂ ಮಾಜಿ ಶಾಸಕರ ನಡುವೆ ಇರುವಷ್ಟು ದ್ವೇಷದ ರಾಜಕಾರಣ ಜಿಲ್ಲೆಯ ಇನ್ನಾವುದೇ ಕ್ಷೇತ್ರದಲ್ಲಿ ಕಾಣುವುದಿಲ್ಲವೇನೊ? ಇಬ್ಬರೂ ನಾಯಕರು ಪರಸ್ಪರ ಆರೋಪ ಮಾಡುತ್ತಾ ಸದಾ ವಿವಾದದಲ್ಲಿದ್ದಾರೆ.

          ನೂಲಿನಂತೆ ಸೀರೆ, ನಾಯಕನಂತೆ ಕಾರ್ಯಕರ್ತರು ಎನ್ನುವಂತೆ ಅವರ ಕಾರ್ಯಕರ್ತರಲ್ಲೂ ಅದೇ ಜಿದ್ದು. ಗ್ರಾಮಾಂತರ ಕ್ಷೇತ್ರದ ಬಹುತೇಕ ಹಳ್ಳಿಗಳಲ್ಲಿ ಇಂತಹ ವಾತಾವರಣ ಇದೆ. ಹೀಗಾಗಿ ಈ ಲೋಕಸಭೆ ಚುನಾವಣೆ ದೇವೆಗೌಡರು, ಬಸವರಾಜು ಅವರ ನಡುವಿನದ್ದು ಎನ್ನುವುದಕ್ಕಿಂತ, ತಮ್ಮ ಪಕ್ಷದ ಅಭ್ಯರ್ಥಿಗೆ ಹೆಚ್ಚು ಮತ ದೊರಕಿಸಿ, ತಮ್ಮ ಸಾಮಥ್ರ್ಯ ಮೆರೆಯಬೇಕು ಎನ್ನುವಂತಾಗಿ ಇದು ಗೌರಿಶಂಕರ್, ಸುರೇಶ್‍ಗೌಡರ ನಡುವೆ ಇನ್ನೊಂದು ಚುನಾವಣೆಯಂತೆ ಗೋಚರಿಸುತ್ತಿದೆ. ಕಾರ್ಯಕರ್ತರೂ ಹಾಗೇ ಭಾವಿಸಿದಂತಿದೆ. ಇಂತಹ ಮತ ಪೈಪೋಟಿಯಲ್ಲಿ ದೇವೆಗೌಡರು ಇಲ್ಲವೆ ಜಿ.ಎಸ್.ಬಸವರಾಜು ಅವರಲ್ಲಿ ಯಾರು ಅಧಿಕ ಓಟು ಪಡೆಯುತ್ತಾರೆ ಎಂಬುದು ಕೂಡ ಆಯಾ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

LEAVE A REPLY

Please enter your comment!
Please enter your name here