ಹುಳಿಯಾರು :
ಜಿಲ್ಲೆಯಲ್ಲೇ ಅತೀ ದೊಡ್ಡ ಹೋಬಳಿ ಕೇಂದ್ರವಾದ ಹುಳಿಯಾರಿನಲ್ಲಿ ಆಧಾರ್ ಕೇಂದ್ರದ ಸಮರ್ಪಕ ವ್ಯವಸ್ಥೆಯಿಲ್ಲದೆ ಜನರು ಮೈಲುದ್ದ ಸರತಿ ಸಾಲಿನಲ್ಲಿ ದಿನಗಟ್ಟಲೆ ನಿಂತು ಆಧಾರ್ ತಿದ್ದುಪಡಿ ಮಾಡಿಸುವ ಅನಿವಾರ್ಯ ಕರ್ಮ ನಿರ್ಮಾಣವಾಗಿತ್ತು. ಈ ಬಗ್ಗೆ ಪತ್ರಿಕೆ ವಿಶೇಷ ವರದಿ ಪ್ರಕಟಿಸಿ ಜಿಲ್ಲಾಡಳಿತದ ಗಮನ ಸೆಳೆದಿತ್ತು. ಪರಿಣಾಮ ಈಗ ಹುಳಿಯಾರು ಪಪಂ ಕಚೇರಿಯಲ್ಲಿ ಪ್ರತ್ಯೇಕ ಆಧಾರ್ ಕೇಂದ್ರ ತೆರೆಯಲಾಗಿದೆ.
ಊಟ-ತಿಂಡಿ ಬಿಟ್ಟು ಕಾಯುತ್ತಿದ್ದ ಜನ :
ಹೌದು, ಪ್ರಸ್ತುತ ಸರ್ಕಾರದ ಯಾವುದೇ ಯೋಜನೆಗಳನ್ನು ಪಡೆದುಕೊಳ್ಳಬೇಕೆಂದರೂ ಆಧಾರ್‍ಸಂಖ್ಯೆ ಕಡ್ಡಾಯವಾಗಿದೆ. ಶಾಲಾ ಮಕ್ಕಳ ದಾಖಲಾತಿಗಾಗಿ, ಬ್ಯಾಂಕ್‍ಖಾತೆ ತೆರೆಲಾಗಲಿ ಮತ್ತು ಪಡಿತರ ಚೀಟಿಗೆ ಹೆಸರು ಸೇರ್ಪಡೆಗೆ ಆಧಾರ್ ನೋಂದಣಿ ಕಡ್ಡಾಯವಾಗಿದೆ. ಹಾಗಾಗಿ ಹುಳಿಯಾರು ನಾಡಕಚೇರಿಯ ಆಧಾರ್ ಕೇಂದ್ರಕ್ಕೆ ಆಧಾರ್ ನೋಂದಣಿ, ಹೆಸರು, ದೂರವಾಣಿ ಸಂಖ್ಯೆ, ವಿಳಾಸ, ಭಾವಚಿತ್ರ, ಸೇರಿದಂತೆ ಹಲವು ತಿದ್ದುಪಡಿಗಳಿಗಾಗಿ ನೂರಾರು ಜನರು ಬರುತ್ತಾರೆ. ಆದರೆ ನಾಡಕಚೇರಿಯ ಆಧಾರ್ ನೋಂದಣಿ ಕೇಂದ್ರ ಮಾತ್ರ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ನಿತ್ಯ ನೂರಾರು ಜನರು ಮಳೆ ಲೆಕ್ಕಿಸದೆ ಊಟ-ತಿಂಡಿ ಬಿಟ್ಟು ಆಧಾರ್ ಕೇಂದ್ರದ ಬಳಿ ದಿನ ಕಳೆಯುತ್ತಿದ್ದರು.
ಒಂದು ಆಧಾರ್ ತಿದ್ದುಪಡಿಗೆ 15 ನಿಮಿಷ :
ಇಲ್ಲಿನ ಆಧಾರ್ ನೋಂದಣಿ ಕೇಂದ ಹಾಗೂ ನಾಡಕಚೇರಿಯ ಚೆಕ್‍ಲಿಸ್ಟ್ ತೆಗೆಯಲು ಇರುವುದು ಒಬ್ಬ ಸಿಬ್ಬಂದಿ ಮಾತ್ರ. ಇತ್ತ ಸಾರ್ವಜನಿರಕ ಜಾತಿಆದಾಯಪತ್ರ, ವಂಶವೃಕ್ಷ, ಸಣ್ಣಹಿಡುವಳಿಪತ್ರ, 11 ಇ ಸ್ಕೆಚ್, ಪೌತಿಖಾತೆ ಸೇರಿದಂತೆ ವಿವಿಧ ಸೇವೆಯ ಚೆಕ್‍ಲಿಸ್ಟ್ ತೆಗೆಯಬೇಕು. ಜೊತೆಗೆ ಆಧಾರ್ ತಿದ್ದುಪಡಿಯನ್ನೂ ಸಹ ಮಾಡಬೇಕು. ಒಬ್ಬ ವ್ಯಕ್ತಿಯ ಅಥವಾ ಒಂದು ಮಗುವಿನ ಆಧಾರ್ ನೋಂದಣಿ ಕಾರ್ಯ ಮಾಡಲು ಕನಿಷ್ಠ 10 ರಿಂದ 15 ನಿಮಿಷ ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ದಿನಕ್ಕೆ 15 ರಿಂದ 20 ಜನರಿಗೆ ಮಾತ್ರ ಆಧಾರ್ ತಿದ್ದುಪಡಿ ಮತ್ತು ನೋಂದಣಿ ಸೇವೆ ದೊರೆಯುತ್ತಿದೆ. ಆದರೆ ಉಳಿದ ನೂರಾರು ಜನರು ತಿದ್ದುಪಡಿ ಸೇವೆ ಲಭಿಸದ ಕಾರಣ ಆಧಾರ್ ಸಿಬ್ಬಂದಿ ಮತ್ತು ಅಧಿಕಾರಿ ವರ್ಗಕ್ಕೆ ಹಿಡಿಶಾಪ ಹಾಕುತ್ತ ಮನೆಗಳತ್ತ ಹೋಗುವುದು ನಿತ್ಯದ ದೃಶ್ಯವಾಗಿತ್ತು.
ಪಾಲನೆಯಾಗದ ಕೋವಿಡ್ ನಿಯಮಗಳು :
ಅಲ್ಲದೆ ಕೋವಿಡ್ 3 ನೇ ಅಲೆಯ ಆತಂಕ ಕಾಡುತ್ತಿದ್ದರೂ ಸಹ ಜನರು ಆಧಾರ್ ತಿದ್ದುಪಡಿಗಾಗಿ, ಚೆಕ್‍ಲಿಸ್ಟ್ ತೆಗೆಸಲು ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಮುಗಿ ಬೀಳುತ್ತಾರೆ. ಒಬ್ಬರ ಮೇಲೊಬ್ಬರು ಬಿದ್ದು ಟೋಕನ್ ಪಡೆಯುತ್ತಿದ್ದಾರೆ. ಸರಿಯಾಗಿ ಮಾಸ್ಕ್ ಧರಿಸದೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಜೊತೆಗೆ ಮಕ್ಕಳನ್ನು ಕರೆ ತರುತ್ತಿರುವುದರಿಂದ ಕೋವಿಡ್ ಹರಡುವ ಭೀತಿಯೂ ಉಂಟಾಗಿತ್ತು. ಮಕ್ಕಳು, ಮಹಿಳೆಯರು, ವೃದ್ಧರು ನೀರು, ಆಹಾರ ಇಲ್ಲದೆ ಸರತಿಯಲ್ಲಿ ದಿನಗಟ್ಟಲೆ ನಿಲ್ಲುವ ದೃಶ್ಯ ಕಲ್ಲು ಹೃದಯಿಗಳನ್ನೂ ಕರಗಿಸುವಂತ್ತಿದ್ದರೂ ಅಧಿಕಾರಿಗಳ ಹೃದಯ ಮಾತ್ರ ಕರಗಿರಲಿಲ್ಲ.
ವಿಶೇಷ ವರದಿ ಪ್ರಕಟಿಸಿದ ಪತ್ರಿಕೆ :
ಈ ಬಗ್ಗೆ ಪತ್ರಿಕೆ ಸಮಗ್ರವಾದ ವಿಶೇಷ ವರದಿ ಪ್ರಕಟಿಸಿತ್ತು. ಮತ್ತೊಂದು ಆಧಾರ್ ಕೇಂದ್ರ ತೆರೆದು ನಾಡಕಚೇರಿ ಸಿಬ್ಬಂದಿ ಮೇಲಿದ್ದ ಒತ್ತಡ ಕಡಿಮೆ ಮಾಡುವಂತೆಯೂ, ಜನರಿಗೆ ದಿನ ಪೂರ್ತಿ ಆಧಾರ್ ಸೇವೆ ಸಿಗುವಂತೆ ಮಾಡಲು ಒತ್ತಾಯಿಸಿತ್ತು. ಪತ್ರಿಕೆ ವರದಿಗೆ ಜಿಲ್ಲಾಡಳಿತ ಸ್ಪಂದಿಸಿ ಈಗ ಹುಳಿಯಾರು ಪ.ಪಂ.ಕಚೇರಿಯಲ್ಲಿ ಪ್ರತ್ಯೇಕ ಆಧಾರ್ ಕೇಂದ್ರ ತೆರೆದಿದೆ.
ಕಚೇರಿ ಸಮಯದಲ್ಲಿ ನಿತ್ಯ ಆಧಾರ್ ತಿದ್ದುಪಡಿ ಹಾಗೂ ಬಯೋಮೆಟ್ರಿಕ್ ಅಪ್ಡೇಟ್ ಮಾಡಲಾಗುತ್ತಿದೆ. ದಿನಕ್ಕೆ 50 ಮಂದಿಗೆ ಮಾತ್ರ ಅವಕಾಶವಿದ್ದು, ಮೈಲುದ್ದ ಸರತಿ ಸಾಲನಲ್ಲಿ ಗಂಟೆಗಟ್ಟಲೆ ನಿಲ್ಲುವುದನ್ನು ತಪ್ಪಿಸಲು ನಮ್ಮ ಸಿಬ್ಬಂದಿಯಿಂದ ಟೋಕನ್ ಕೊಡುವ ವ್ಯವಸ್ಥೆ ಕಲ್ಪಿಸಲಾಗಿದೆ. 2-3 ದಿನಗಳ ಮುಂಚಿತ ಟೋಕನ್ ಕೊಡದೆ ನಿತ್ಯವೂ ಬೆಳಗ್ಗೆ 10 ರಿಂದ 10-30 ರ ಅವಧಿಯಲ್ಲಿ ಅಂದಿನ 50 ಮಂದಿಗೆ ಮಾತ್ರ ಟೋಕನ್ ಕೊಟ್ಟು ಆಧಾರ್ ತಿದ್ದುಪಡಿ ಮಾಡಲಾಗುವುದು.
-ಮಂಜುನಾಥ್, ಹುಳಿಯಾರು ಪಪಂ ಮುಖ್ಯಾಧಿಕಾರಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ