ಹುಳಿಯಾರು :
ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಹಾದು ಹೋಗುವ ಭದ್ರಾ ನಾಲೆಯಿಂದ ತಾಲೂಕಿನ 4.5 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಹನಿ ನೀರಾವರಿ ವ್ಯವಸ್ಥೆಗೆ ನೀರು ಪೂರೈಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಹುಳಿಯಾರು ಹೋಬಳಿಯ ಚಿಕ್ಕಬಿದರೆ ಕೆರೆಗೆ ಭದ್ರಾ ನಾಲೆಯಿಂದ ನೀರು ಪೂರೈಕೆ ಕಾಮಗಾರಿಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ದೂರದ ಕೆರೆಗಳಿಗೆ ಪಿಕಪ್ ಮೂಲಕ ನೀರು :
ಕೆರೆಗಳು ದೂರವಿರುವ 19 ಕಡೆ ಹಳ್ಳಗಳಿಗೆ ಸಣ್ಣ ನೀರಾವರಿ ಇಲಾಖೆಯಿಂದ ಕೆರೆಗಳಿಗಷ್ಟೆ ನೀರು ನಿಲ್ಲುವವಂತೆ ದೊಡ್ಡದೊಡ್ಡ ಪಿಕಪ್ ಮಾಡಿ ಅಂತರ್ಜಲ ವೃದ್ಧಿಯಾಗುವಂತೆ ಮಾಡಲಾಗುವುದು ಎಂದರಲ್ಲದೆ ತಾಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಲು 250 ಕೋಟಿ ರೂ. ಮೀಸಲಿಟ್ಟು ಈಗಾಗಲೇ ಕಾಮಗಾರಿ ಸಹ ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ಇನ್ನೆರಡ್ಮೂರು ವರ್ಷದಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕಿನ ಪ್ರಾಕೃತಿಕ ಸ್ಥಿತಿ ಬದಲಾಗಿ ಸದಾ ಹಸಿರು ನೋಡುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದರು.
ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ :
ತಾಲೂಕಿನ ವಿದ್ಯುತ್ ಸಮಸ್ಯೆ ನಿವಾರಣೆಗೆ ಜೆ.ಸಿ.ಪುರ, ಬೈಲಪ್ಪನಮಠ, ದೊಡ್ಡಎಣ್ಣೇಗೆರೆ, ಮತ್ತಿಘಟ್ಟ ಮತ್ತು ದೊಡ್ಡಅಗ್ರಹಾರದಲ್ಲಿ ಎಂವಿಎಸ್ ಸ್ಟೇಷನ್ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದಾಗಿ ಈಗ ಐಪಿ ಸೆಟ್‍ಗೆ ಕೊಡುತ್ತಿರುವ ವಿದ್ಯುತ್ ಸಮಯವನ್ನು 3 ರಿಂದ 4 ಗಂಟೆ ಜಾಸ್ತಿ ಕೊಡಬಹುದಾಗಿದೆ. ದೊಡ್ಡಎಣ್ಣೇಗೆರೆಯಲ್ಲಿ 40 ಎಕರೆ ಜಮೀನು ಸ್ವಾಧೀನ ಪಡಿಸಿಕೊಂಡು 220 ಕೆವಿ ಸ್ವಿಚ್ ಆಫ್ ಸ್ಟೇಷನ್ ಮಾಡಲಾಗುವುದು. ಇದರಿಂದ ತಾಲೂಕಿನಲ್ಲಿ ವೋಲ್ಟೇಜ್ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಇದಲ್ಲದೆ ಚಿಕ್ಕನಾಯಕನಹಳ್ಳಿಯ 10 ಎಂವಿಎಸ್ ಸ್ಟೇಷನ್ ಅನ್ನು 20 ಕ್ಕೆ ಏರಿಸಿ ಅಲ್ಲಿಂದ ವಿದ್ಯುತ್ ಸರಬರಾಜು ಆಗುವ ಭಾಗಗಳಿಗೆ 2 ಗಂಟೆ ಹೆಚ್ಚಾಗಿ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ನಂತರದ ದಿನಗಳಲ್ಲಿ ಶೆಟ್ಟಿಕೆರೆ ಹಾಗೂ ಹಂದನಕೆರೆ ಸ್ಟೇಷನ್‍ಗಳನ್ನೂ ಸಹ ಹೆಚ್ಚು ಮಾಡಿ ಆ ಭಾಗದ ರೈತರಿಗೂ ಅನಕೂಲ ಮಾಡುವುದಾಗಿ ತಿಳಿಸಿದರು.
ಹಿಂದೆಂದೂ ಕಾಣದ ಅಭಿವೃದ್ಧಿ :
ತಾಪಂ ಮಾಜಿ ಸದಸ್ಯ ನಿರಂಜನ್ ಅವರು ಮಾತನಾಡಿ ಕೇವಲ ಮೂರ್ನಾಲ್ಕು ವರ್ಷಗಳ ಹಿಂದೆ ತಾಲೂಕಿಗೆ ನದಿ ನೀರು ಹರಿಸಲು ಅನೇಕ ರೀತಿಯ ಹೋರಾಟಗಳು ನಡೆಯುತ್ತಿದ್ದವು. ಮಾಧುಸ್ವಾಮಿ ಅವರು ಒಂದು ಹೋರಾಟದಲ್ಲಿ ಭಾಗವಹಿಸಿ ನನ್ನನ್ನು ವಿಧಾನಸಭೆಗೆ ಕಳುಹಿಸಿದರೆ ತಾಲೂಕಿನ ಜನತೆಗೆ ಹೋರಾಟ ಮಾಡುವ ಪ್ರಮೇಯವೇ ಇಲ್ಲದಂತೆ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಅದರಂತೆ ವಿಧಾನಸಭಾ ಸದಸ್ಯರಾಗಿ ತಾಲೂಕಿಗೆ ಹೇಮಾವತಿ, ಭದ್ರೆ, ಎತ್ತಿನಹೊಳೆ ನದಿಗಳ ನೀರು ಹರಿಸುತ್ತಿದ್ದಾರೆ. ಗುಂಡಿಬಿದ್ದು ಓಡಾಡಲಾಗದ ರಸ್ತೆಗಳು ದುರಸ್ಥಿ ಮಾಡಿಸಿ ಸುಗಮ ಸಂಚಾರಕ್ಕೆ ನೆರವಾಗುವಂತೆ ಮಾಡಿದ್ದಾರೆ. ಒಟ್ಟಾರೆ ತಾಲೂಕಿನಲ್ಲಿ ಹಿಂದೆಂದೂ ಕಾಣದಂತಹ ಅಭಿವೃದ್ಧಿ ಕಾರ್ಯಗಳಾಗುತ್ತಿವೆ. ಮುಂದಿನ ಚುನಾವಣೆಗೆ ಇವರ ಅಭಿವೃದ್ಧಿ ಕಾರ್ಯಗಳು ಮನೆಮಾತಾಗಿ ಮತಗಳಾಗಿ ಪರಿವರ್ತನೆಯಾಗುವುದರಲ್ಲಿ ಸಂಶಯವಿಲ್ಲ ಎಂದರು.
ಈ ಸಂದರ್ಭದಲ್ಲಿ ಎಇ ಭಾಸ್ಕರರೆಡ್ಡಿ, ಎಇಇ ನರಸಿಂಹರಾಜು, ಗುತ್ತಿಗೆದಾರ ರಾಜಗೋಪಾಲರೆಡ್ಡಿ ತಾಪಂ ಮಾಜಿ ಸದಸ್ಯ ಕೇಶವಮೂರ್ತಿ, ಕೆಂಕೆರೆ ನವೀನ್, ವಸಂತಯ್ಯ, ಮುಖಂಡರಾದ ಬರಕನಹಾಲ್ ವಿಶ್ವನಾಥ್, ಗ್ರಾಪಂ ಸದಸ್ಯ ದಿನೇಶ್, ದೊಡ್ಡಬಿದರೆ ಗ್ರಾಪಂ ಅಧ್ಯಕ್ಷ ರಂಗಸ್ವಾಮಿ, ಯಳನಾಡು ಗ್ರಾಪಂ ಉಪಾಧ್ಯಕ್ಷ ಉಮೇಶ್, ಕೊಬ್ಬರಿವರ್ತಕ ಬ್ಯಾಂಕ್‍ಮರುಳಪ್ಪ, ಶಾಂತಕುಮಾರ್, ಪ್ರದೀಪ್, ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ