ಹುಳಿಯಾರು :
ಹೇಮಾವತಿ ಯೋಜನೆ ಮಂಜೂರಾಗಿ ದಶಕಗಳ ನಂತರ ಹುಳಿಯಾರು ಹೋಬಳಿಯ ತಿಮ್ಲಾಪುರ ಕೆರೆಗೆ ಹೇಮಾವತಿ ನೀರು ಹರಿದಿದೆ. ಈ ಮೂಲಕ ಬರದನಾಡಿನ ಜನರ ಮೂರ್ನಾಲ್ಕು ದಶಕಗಳ ಕನಸು ನನಸಾಗಿದೆ. ಆದರೆ ತಿಮ್ಲಾಪುರ ಕೆರೆ ತುಂಬಿ ಹುಳಿಯಾರು ಕೆರೆಗೆ ಹೇಮೆ ಹರಿಯಲು ಇನ್ನೂ ಕನಿಷ್ಠ 1 ತಿಂಗಳು ನೀರು ಹರಿಸುವ ಅಗತ್ಯವಿದೆ.
ಅಹೋರಾತ್ರಿ ಹೋರಾಟದ ಫಲ :
ದಶಕಗಳ ಹಿಂದೆ ರೈತ ಸಂಘದ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ 64 ದಿನಗಳ ಅಹೋರಾತ್ರಿ ಹೋರಾಟ ನಡೆಸಿದ ಫಲ ಹಾಗೂ ಮಾಜಿ ಶಾಸಕ ಕೆ.ಎಸ್.ಕಿರಣ್‍ಕುಮಾರ್ ಹಾಗೂ ಸಿ.ಬಿ.ಸುರೇಶ್‍ಬಾಬು ಅವರ ಒತ್ತಡದ ಪರಿಣಾಮ ಬರದನಾಡು ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಹೇಮಾವತಿ ಯೋಜನೆ ಮಂಜೂರಾಗಿತ್ತು. ಆದರೆ ಯೋಜನೆ ಮಂಜೂರಾಗಿ ದಶಕಗಳು ಕಳೆದಿದ್ದರೂ ಕಾಮಗಾರಿ ನೆನಗುದಿಗೆ ಬಿದ್ದು ತಾಲ್ಲೂಕಿಗೆ ಹೇಮೆ ಹರಿಯುವ ಕನಸು ಕನಸಾಗಿಯೇ ಉಳಿದಿತ್ತು. ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಚುನಾವಣಾ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ನೆನಗುದಿಗೆ ಬಿದ್ದಿದ್ದ ಕಾಮಗಾರಿಗೆ ಜಿಂಕೆ ವೇಗ ಕೊಟ್ಟರಲ್ಲದೆ ಕಾಮಗಾರಿ ಅನುಷ್ಠಾನಕ್ಕೆ ಇದ್ದ ಎಡರು-ತೊಡರುಗಳನ್ನು ನಿವಾರಿಸಿ ಕಳೆದ ವರ್ಷವೆ ತಾಲ್ಲೂಕಿಗೆ ಪ್ರಾಯೋಗಿಕವಾಗಿ ಹೇಮೆ ಹರಿಸಿ ಈ ಭಾಗದ ಜನರ ಕನಸು ನನಸಾಗಿಸಿದರು.
ಕೆರೆ ತುಂಬಲು ಒಂದು ತಿಂಗಳು ಬೇಕು :
ಕಳೆದ ವರ್ಷ ಸಾಸಲು, ಶೆಟ್ಟಿಕೆರೆ, ಅಣೆಕಟ್ಟೆ, ಅಂಕಸಂದ್ರ ಕೆರೆಗಳು ತುಂಬಿ ಬರಗೂರು, ಟಿ.ತಾಂಡ್ಯ, ಸಂದಿಹೊಳೆ ಅಣೆಗಳು ಭರ್ತಿಯಾಗುವಷ್ಟರಲ್ಲಿ ಜಲಾಶಯದಲ್ಲಿ ನೀರಿನ ಕೊರತೆ ಮುಂದಿಟ್ಟು ನೀರು ನಿಲ್ಲಿಸಲಾಗಿತ್ತು. ಪರಿಣಾಮ ಹೇಮೆ ಯೋಜನೆಯ ಕೊನೆಯ ಕೆರೆಗಳಾದ ತಿಮ್ಲಾಪುರ ಮತ್ತು ಹುಳಿಯಾರು ಕೆರೆಗೆ ನೀರು ಹರಿಯದೆ ಈ ಭಾಗದ ಜನರಿಗೆ ತೀವ್ರ ನಿರಾಸೆ ಮೂಡಿತ್ತು. ಈ ವರ್ಷ ಕಳೆದ 2-3 ತಿಂಗಳಿನಿಂದ ಹೇಮೆ ನೀರು ನಿರಂತರವಾಗಿ ಹರಿಯುವ ಜೊತೆಗೆ ಉತ್ತಮವಾಗಿ ಮಳೆಯಾಗುತ್ತಿರುವ ಪರಿಣಾಮ ಗೂಬೆಹಳ್ಳಿ, ನಂದಿಹಳ್ಳಿ ಗ್ರಾಮಗಳ 2-3 ಸಣ್ಣ ಪಿಕಪ್‍ಗಳನ್ನು ತುಂಬಿ ಬಹು ನಿರೀಕ್ಷಿತ ಕೆರೆಯಾದ ತಿಮ್ಲಾಪುರ ಕೆರೆಗೆ ಶುಕ್ರವಾರ ಹೇಮೆ ನೀರು ಹರಿಯುತ್ತಿದೆ. ಸರಿಸುಮಾರು 4 ಕಿ.ಮೀ ಉದ್ದವಿರುವ ಈ ಕೆರೆ ತುಂಬಲು ಇನ್ನೂ ಒಂದು ತಿಂಗಳು ನೀರು ಹರಿಯಬೇಕಿದೆ.
ಬತ್ತಿದ್ದ ಕೊಳವೆ ಬಾವಿಗಳಲ್ಲಿ ನೀರು :
ಮಳೆಯಾಶ್ರಿತ ಪ್ರದೇಶವಾದ ತಾಲ್ಲೂಕಿನಲ್ಲಿ ಸಮರ್ಪಕವಾದ ಮಳೆಯಿಲ್ಲದೆ ಬರದನಾಡಾಗಿ ಪರಿವರ್ತನೆಯಾಗಿತ್ತು. ಒಂದು ಸಾವಿರ ಅಡಿ ಕೊಳೆವೆ ಬಾವಿ ಕೊರೆದರೂ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಪರಿಣಾಮ ತೋಟಗಳು ಒಣಗಿ ಇಲ್ಲಿನ ಜನರು ಉದ್ಯೋಗ ಅರಸಿ ನಗರ ಸೇರಿದ್ದರು. 2ನೇ ವರ್ಷ ತಾಲ್ಲೂಕಿಗೆ ಗುರುತ್ವಾಕರ್ಷಣೆ ಮೂಲಕ ಹೇಮೆ ಹರಿಯುತ್ತಿರುವುದರಿಂದ ಬತ್ತಿದ್ದ ಬಾವಿ, ಕೊಳವೆಗಳಲ್ಲಿ ನೀರು ಬರಲಾರಂಭಿಸಿದೆ.
ರೈತರ ಮೊಗದಲ್ಲಿ ಸಂತಸ :
ಇದರಿಂದಾಗಿ ನೀರು ಹರಿಯುತ್ತಿರುವ ಪ್ರದೇಶಗಳ ರೈತರ ಸಂಭ್ರಮಕ್ಕೆ ಪಾರವೇ ಇಲ್ಲದಾಗಿದೆ. ಹಾಗಾಗಿ ಹೇಮೆ ನೀರು ಹರಿಯುವ ಪ್ರದೇಶದ ಒಂದೊಂದು ಕೆರೆ ತುಂಬಿದಾಗಲೂ ಜನರು ಹೇಮೆ ಹರಿಯುತ್ತಿರುವುದರನ್ನು ನೋಡಲು ಮುಗಿಬೀಳುತ್ತಿದ್ದಾರೆ. ಮಕ್ಕಳು, ಮಹಿಳೆಯರು ಎನ್ನದೆ ಬೈಕು, ಸೈಕಲ್, ಕಾರು ಹೀಗೆ ವಾಹನಗಳಲ್ಲಿ ತೆರಳಿ ಕೆರೆ ಕೋಡಿ ಬಳಿ ಕುಣಿದು ಕುಪ್ಪಳಿಸುತ್ತಿದ್ದಾರೆ. ಒಟ್ಟಾರೆ ಹೇಮೆ ನೀರು ಬರದ ನಾಡಿದ ಚಿತ್ರಣವನ್ನು ಬದಲಿಸುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ