ಒಟ್ಟಿಗೆ ಹರಿದ ಹೇಮಾವತಿ-ಮಳೆ ನೀರು : ಕೆರೆಯಾದ ರಸ್ತೆ

ಹುಳಿಯಾರು :

     ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಹರಿಯುವ ಸುವರ್ಣಮುಖಿ ಹಳ್ಳಕ್ಕೆ ಹಂದನಕೆರೆ ಹೋಬಳಿ ಗೂಬೆಹಳ್ಳಿ ಬಳಿ ಸೇತುವೆ ನಿರ್ಮಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

      ಗೂಬೆಹಳ್ಳಿ ಗ್ರಾಮದ ಮೂಲಕ ನಿರುವಗಲ್ಲು ಮಾರ್ಗವಾಗಿ ಹುಳಿಯಾರು-ತಿಪಟೂರು ಜಿಲ್ಲಾ ರಸ್ತೆ ಸಂಪರ್ಕ ಕಲ್ಪಿಸುವ ಈ ರಸ್ತೆ ಮೇಲೆ ಸುವರ್ಣಮುಖಿ ಹಳ್ಳವು ಹರಿಯುತ್ತದೆ. ಈಗ ತಾಲೂಕಿನ ಕೆರೆಗಳನ್ನು ತುಂಬಿಸಲು ಹೇಮಾವತಿ ನೀರನ್ನು ನೈಸರ್ಗಿಕವಾಗಿ ಇದೇ ಹಳ್ಳದ ಮೂಲಕ ಹರಿಸುತ್ತಿದ್ದಾರೆ. ಹಾಗಾಗಿ ಪ್ರತಿ ವರ್ಷ ಮಳೆಗಾಲದಲ್ಲಿ ರಸ್ತೆ ಮೇಲೆ ನೀರು ತುಂಬಿ ಹರಿಯುತ್ತದೆ.

     ಸೇತುವೆ ಇಲ್ಲದ ಪರಿಣಾಮ ಜೋರು ಮಳೆ ಬಂತೆಂದರೆ ಈ ಹಳ್ಳದಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ವಾಹನ ಹಾಗೂ ಸಾರ್ವಜನಿಕರು ಸಂಚರಿಸಲು ಸಾಧ್ಯವಾಗುವುದಿಲ್ಲ.

      ಈಗ ಹೇಮಾವತಿ ನೀರು ಸಹ ಹರಿಯುತ್ತಿದ್ದು, ಗುರುವಾರ ರಾತ್ರಿ ಈ ಭಾಗದಲ್ಲಿ ಸುರಿದ ಮಳೆ ನೀರಿನ ಜೊತೆಗೆ ಹೇಮೆ ನೀರು ಸೇರಿ ಸುವರ್ಣಮುಖಿ ಹಳ್ಳ ಮೈದುಂಬಿ ರಸ್ತೆ ಮಧ್ಯೆಯೆ ಹರಿಯುತ್ತಿದೆ. ಪರಿಣಾಮ ಸಂಚಾರ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡು ಜನರು ಪರದಾಡುವಂತ್ತಾಗಿದೆ.

ಹಳ್ಳಿ-ಪಟ್ಟಣದ ನಡುವೆ ಅಂತರ :

      ಸಾದರಹಳ್ಳಿ, ಅವಳಗೆರೆ, ಚಿಕ್ಕಬಿದರೆ, ಭೈರಾಪುತಾಂಡ್ಯ, ಕಲ್ಲಹಳ್ಳಿ, ನಂದಿಹಳ್ಳಿ, ಗೂಬೆಹಳ್ಳಿ, ಟಿ.ಎಸ್.ಹಳ್ಳಿ ಗ್ರಾಮಗಳ ಜನರು ತಿಪಟೂರು ರಸ್ತೆಗೆ, ಮಣಕಿಕೆರೆ ಜಾತ್ರೆ, ದುರ್ಗಮ್ಮನಜಾತ್ರೆ ಸೇರಿದಂತೆ ಅನೇಕ ಕೆಲಸ ಕಾರ್ಯಗಳಿಗೆ ಹಳ್ಳದಿಂದ ಮುಳುಗಡೆಯಾಗುವ ರಸ್ತೆಯಲ್ಲೇ ಓಡಾಡಬೇಕಿದೆ. ಇನ್ನು ರಂಗೇನಹಳ್ಳಿ, 3-4 ತಾಂಡ್ಯಗಳು, ಎಳ್ಳೇನಹಳ್ಳಿ, ಗದ್ದೆಗೇರಹಟ್ಟಿ, ನಿರುವಗಲ್ಲು, ಬಸವಪಟ್ಟಣ, ಗೊಲ್ಲರಹಟ್ಟಿ ಗ್ರಾಮಗಳ ಜನರು ಹುಳಿಯಾರು ಪಟ್ಟಣಕ್ಕೆ ಬಂದು ಹೋಗಲು, ವಿದ್ಯಾರ್ಥಿಗಳು ಹೈಸ್ಕೂಲ್ ಹಾಗೂ ಕಾಲೇಜಿಗೆ ಹೋಗಲು ಇದೇ ಮಾರ್ಗದಲ್ಲಿ ಓಡಾಡುತ್ತಾರೆ.

  ರೈತರು ಜಮೀನುಗಳಿಗೆ ಹೋಗಲು ಅಡ್ಡಿ :

     ಕಳೆದ ವರ್ಷದಿಂದ ಹೇಮೆ ನೀರು ಇದೇ ಹಳ್ಳದಲ್ಲಿ ಇದೇ ರಸ್ತೆಯ ಮೂಲಕ ಹರಿಯುತ್ತಿದೆ. ಅಲ್ಲದೆ ಇನ್ಮು ಮುಂದೆ ಪ್ರತಿ ವರ್ಷ ಕೆರೆಗಳನ್ನು ತುಂಬಿಸಲು ಹೇಮೆ ನೀರು ಹರಿಸಲಾಗುತ್ತದೆ. ಹೇಮೆ ನೀರೊಂದೆ ಹರಿದರೆ ದೊಡ್ಡವರು ಅಪಾಯವಿಲ್ಲದೆ ಓಡಾಡಬಹುದು. ಆದರೆ ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಆಸ್ಪತ್ರೆಗೆ ಬರುವ ವೃದ್ಧರು ಅಂಗೈಯಲ್ಲಿ ಜೀವ ಹಿಡಿದು ಓಡಾಡಬೇಕಿದೆ. ಅಲ್ಲದೆ ಗೂಬೆಹಳ್ಳಿಯ ಬಹುತೇಕ ಮಂದಿಯ ಜಮೀನು ನರುವಗಲ್ಲು ಭಾಗದಲ್ಲಿದ್ದು ರೈತರು ಜಮೀನಿಗೆ ಬರದಂತಾಗಿದೆ. ಇನ್ನು ಹೇಮೆ ಜೊತೆ ಮಳೆ ನೀರು ಸೇರಿಕೊಂಡರಂತೂ ಯಾರೂ ಓಡಾಡದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಕೊಂಕಣ ಸುತ್ತಿ ಮೈಲಾರಕ್ಕೆ ಹೋದಂತೆ :

      ನಿರುವಗಲ್-ಗೂಬೆಹಳ್ಳಿಯ ಬದಲಿ ಮಾರ್ಗವಾಗಿ ಗೂಬೆಹಳ್ಳಿ-ಎರೆಕಟ್ಟೆ-ಟಿ.ತಾಂಡ್ಯರಸ್ತೆ ಮತ್ತು ಹುಳಿಯಾರು-ಹರೇನಹಳ್ಳಿ-ಶ್ರೀಕ್ಷೇತ್ರ ಹುಲ್ಕಲ್ ಬೆಟ್ಟದ ರಸ್ತೆ ಹಾಗೂ ನಿರುವಗಲ್-ತೊರೆಮನೆ-ಸೀಗೆಬಾಗಿ ಮೂಲಕ ಓಡಾಡಬಹುದಾಗಿದೆ. ಆದರೆ ಈ ಯಾವುದೇ ಮಾರ್ಗದಲ್ಲಿ ಓಡಾಡಿದರೂ 10-12 ಕಿಮೀ ಹೆಚ್ಚಾಗಿ ಕೊಂಕಣ ಸುತ್ತಿ ಮೈಲಾರಕ್ಕೆ ಹೋದಂತಾಗುತ್ತಿದೆ. ಇತ್ತೀಚಿನ ದುಬಾರಿ ಪೆಟ್ರೊಲ್ ಬೆಲೆ ನಡುವೆ ಈ ಮಾರ್ಗದ ಪ್ರಯಾಣ ಇಲ್ಲಿನ ನಿವಾಸಿಗಳಿಗೆ ಆರ್ಥಿಕ ಹೊರೆಯಾಗಿದೆ. ಅಲ್ಲದೆ ಬೆಳಗುಲಿ, ಗೂಬೆಹಳ್ಳಿಯ ಶಾಲಾ-ಕಾಲೇಜಿಗೆ ಸೈಕಲ್‍ನಲ್ಲಿ ಬರುವ ವಿದ್ಯಾರ್ಥಿಗಳಿಗಂತೂ ಓಡಾಟ ದುತ್ಸರವಾಗಿದೆ.

ಇಲಾಖೆಗೆ ವರದಿ ಕಳುಹಿಸಲಾಗಿದೆ :

ಹೇಮಾವತಿ ನೀರನ್ನು ಸುವರ್ಣಮುಖಿ ನದಿ ಮೂಲಕ ಹರಿಸಿ ಕೆರೆಗಳನ್ನು ತುಂಬಿಸುವುದರಿಂದ ನದಿ ಹರಿಯುವ ಮೂರು ಮಾರ್ಗದಲ್ಲಿ ಪಿಡ್ಲ್ಯೂಡಿ ರಸ್ತೆ ಹಾದು ಹೋಗುತ್ತದೆ. ಹಾಗಾಗಿ ಮೂರು ಕಡೆಯೂ ಸೇತುವೆಯ ಅಗತ್ಯವಿದೆ. ಈಗಾಗಲೇ ಎರಡು ಬಾರಿ 2-3 ಇಲಾಖೆಗಳಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಆದರೂ ಹಣಕಾಸು ಕೊರತೆಯ ಕಾರಣ ಕೊಟ್ಟು ಸೇತುವೆ ಮಂಜೂರು ಮಾಡಿಲ್ಲ. ಈಗ ಮಳೆ ನೀರು ಮತ್ತು ಹೇಮೆ ನೀರು ಒಟ್ಟಿಗೆ ಸೇರಿ ಹರಿಯುತ್ತಿರುವುದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಈಗ ಸೇತುವೆಯ ಅಗತ್ಯತೆಯ ಬಗ್ಗೆ ವಿಡಿಯೋ ಚಿತ್ರ ಸಹಿತ ವರದಿ ಸಲ್ಲಿಸುತ್ತೇವೆ. ಸೇತುವೆಗೆ ಕಾಮಗಾರಿ ಮಂಜೂರಾದರೆ ಮಳೆ ನಿಂತ ನಂತರ ಕಾಮಗಾರಿ ಆರಂಭಿಸುತ್ತೇವೆ.

-ಚಂದ್ರಶೇಖರ್, ಎಇಇ, ಲೋಕೋಪಯೋಗಿ ಇಲಾಖೆ, ಚಿಕ್ಕನಾಯಕನಹಳ್ಳಿ

     ಸಣ್ಣ ನೀರಾವರಿ ಸಚಿವರು ಮನಸ್ಸು ಮಾಡಬೇಕಿದೆ : ಇತ್ತೀಚ್ಛಿಗಷ್ಟೆ ಭೈರಾಪುರ ಗೇಟ್‍ನಿಂದ ನರುವಗಲ್ ಗ್ರಾಮದವರೆಗೆ ಹೊಸ ಡಾಂಬರ್ ರಸ್ತೆ ಮಾಡಿದ್ದು, ಸೇತುವೆ ಮಾಡದೆ ನಿರ್ಲಕ್ಷ್ಯಿಸಿದ್ದಾರೆ. ಪರಿಣಾಮ ಈಗ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಈ ಹಳ್ಳಕ್ಕೆ ಸೇತುವೆ ನಿರ್ಮಿಸಬೇಕೆಂಬುದು ಈ ಭಾಗದ ಗ್ರಾಮಸ್ಥರ ಆಗ್ರಹವಾಗಿದೆ. ಸುವರ್ಣಮುಖಿ ಹಳ್ಳವಾಗಿರುವುದರಿಂದ ಸಣ್ಣ ನೀರಾವರಿ ಇಲಾಖೆಯಿಂದ ಬ್ರಿಡ್ಜ್ ಕಂ ಬ್ಯಾರೇಜ್ ಕಟ್ಟಲು ಅವಕಾಶವಿದೆ. ಆದರೆ ಸಚಿವರು ಏಕೆ ಇನ್ನೂ ಮನಸ್ಸು ಮಾಡಿಲ್ಲ. ಇನ್ನಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಸಮಸ್ಯೆ ಪರಿಹರಿಸುವರೇ ಎಂಬುದನ್ನು ಕಾದು ನೋಡಬೇಕಿದೆ.

ಹೊಟ್ಟೆಪಾಡಿಗೂ ತೊಂದರೆ :

      ಮಳೆ ಹಾಗೂ ಹೇಮೆ ನೀರಿನ ಹರಿವಿನಿಂದಾಗಿ ಗೂಬೆಹಳ್ಳಿಯಿಂದ ನರುವಗಲ್ಲು ರಸ್ತೆ ಸಂಪೂರ್ಣ ಕಡಿತಗೊಂಡಿದೆ. ಇದರಿಂದ ಇಟ್ಟಿಗೆ ಕಾರ್ಖಾನೆಗೆ ಕೂಲಿ ಕೆಲಸಕ್ಕೆ ತೆರಳುವವರು, ಆಟೋ, ಟಾಟಾ ಏಸ್ ಮೂಲಕ ಪ್ಯಾಸೆಂಜರ್ ಹೊಡೆಯುತ್ತಿದ್ದವರು, ಡೇರಿಗೆ ಹಾಲು ತರುವ ಹೈನುಗಾರರು, ದಿನಪತ್ರಿಕೆ ಹಾಕುವ ಹುಡುಗರ ಓಡಾಟಕ್ಕೆ ತೊಂದರೆಯಾಗಿದ್ದು, ಪರಿಣಾಮ ಇವರ ಹೊಟ್ಟೆಪಾಡಿಗೂ ಸಂಚಕಾರ ಬಂದೊದಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link