ಹುಳಿಯಾರು :
ಹುಳಿಯಾರು ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಶನಿವಾರ ರಾತ್ರಿ ಧಾರಕಾರ ಮಳೆಯಾಗಿದ್ದು ಕೆರೆಕಟ್ಟೆಗಳು ಕೋಡಿ ಬಿದ್ದು ರೈತರ ಸಂಭ್ರಮಕ್ಕೆ ಕಾರಣವಾಗಿದೆ. ಅಲ್ಲದೆ ಮಳೆಯಿಂದಾಗಿ ಮತ್ತೆ ಜಲಮೂಲಗಳಿಗೆ ಜೀವ ಬಂದಿದೆ.
ಶನಿವಾರ ರಾತ್ರಿಯಿಂದ ಭಾನುವಾರ ಬೆಳಗ್ಗೆಯವರೆವಿಗೂ ನಿರಂತರವಾಗಿ ಮಳೆ ಬಂದಿತು. ಸುತ್ತಲಿನ ಅನೇಕ ಹಳ್ಳಿಗಳಲ್ಲಿಯೂ ಸಾಕಷ್ಟು ಮಳೆ ಸುರಿದಿದೆ. ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹವಾಗಿದೆಯಲ್ಲದೆ ತೋಟಗಳಲ್ಲಿ ನೀರು ನಿಂತು ರಸ್ತೆಗಳಲ್ಲಿ ರಭಸವಾಗಿ ನೀರು ಹರಿದಿದೆ. ಜನರಿಗೆ ತೊಂದರೆಯಾಗಿರುವ ಬಗ್ಗೆ ಯಾವುದೇ ಮಾಹಿತಿ ವರದಿಯಾಗಿಲ್ಲ.
ಕಳೆದ ಹತ್ತದಿನೈದು ದಿನಗಳಿಂದಲೂ ಬೇಸಿಗೆಯ ಮಾದರಿಯಲ್ಲಿ ಬಿಸಿಲಿನ ಪ್ರಕೋಪ ಇತ್ತು. ಜೊತೆಗೆ ಆಗಾಗ ಮಳೆಯೂ ಸಹ ಆಗುತ್ತಿರುವುದು ವಾತಾವರಣ ತಂಪಾಗಲು ಕಾರಣವಾಗಿದೆ. ಅಲ್ಲದೆ ಹಿಂಗಾರು ಹಂಗಾಮಿನ ರಾಗಿ, ಸಾಮೆ, ನವಣೆ, ಹುರುಳಿ ಮತ್ತಿತರೆ ಬೆಳೆಗಳಿಗೆ ಮಳೆಯಿಂದ ಅನುಕೂಲವಾಗಲಿದೆ ಎಂದು ರೈತರು ಹೇಳಿದರು.
ಕಳೆದ 15 ದಿನಗಳಿಂದ ತಾಲ್ಲೂಕಿನ ವಿವಿಧೆಡೆ ಸುರಿದ ಉತ್ತಮ ಮಳೆಯಿಂದಾಗಿ ಬಹುತೇಕ ಕೆರೆ, ಕುಂಟೆಗಳು ತುಂಬಿವೆ. ಹೋಬಳಿಯ ದಸೂಡಿ ಸಮೀಪದ ರಾಮಪ್ಪನಕೆರೆ ಹಾಗೂ ಹೋಬಳಿಯ ಚಿಕ್ಕಬಿದರೆ ಸಮೀಪದ ಸಂಗೇನಹಳ್ಳಿ ಕೆರೆಗಳು ಕೋಡಿ ಬಿದ್ದಿವೆ. ಚಿಕ್ಕಬಿದರೆ ಕೆರೆ ಕೋಡಿಗೆ ಕೇವಲ ಅರ್ಧ ಅಡಿ ಬಾಕಿ ಉಳಿದಿದೆ. ಈ ಭಾಗದ ಸುವರ್ಣಮುಖಿ ನದಿಯು ಮಳೆ ಮತ್ತು ಹೇಮೆ ನೀರಿನಿಂದ ಮೈದುಂಬಿ ಹರಿಯುತ್ತಿದೆ.
ಮಳೆ ವಿವರ:
ಹುಳಿಯಾರು 16 ಮಿಮೀ, ಶೆಟ್ಟಿಕೆರೆ 30.2 ಮಿಮೀ, ಬೋರನಕಣಿವೆ 404 ಮಿಮೀ, ಮತ್ತಿಘಟ್ಟ 54.2 ಮಿಮೀ, ದೊಡ್ಡಎಣ್ಣೇಗೆರೆ 22.4 ಮಿಮೀ, ಸಿಂಗದಹಳ್ಳಿ 52.2 ಮಿಮೀ ಮಳೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ