ಹುಳಿಯಾರು :
ಗ್ಯಾಸ್ ಪೈಪ್ ಲೈನ್ ಕಾಮಗಾರಿಗೆ ಸ್ವಾದೀನ ಪಡಿಸಿಕೊಳ್ಳುವ ಭೂಮಿಗೆ ಪರಿಹಾರ ಘೋಷಿಸದೆ ಕಾಮಗಾರಿ ಆರಂಭಿಸಿರುವುದನ್ನು ಖಂಡಿಸಿ ಶೀಘ್ರದಲ್ಲೇ ಸಂತ್ರಸ್ತ ರೈತರನ್ನು ಸಂಘಟಿಸಿ ಕಾಮಗಾರಿ ತಡೆ ಚಳುವಳಿ ನಡೆಸುವುದಾಗಿ ಸಾಮಾಜಿಕ ಹೋರಾಟಗಾರ ದಬ್ಬಗುಂಟೆ ರವಿಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಹುಳಿಯಾರು ಹೋಬಳಿಯ ಬೋರನಕಣಿವೆಯ ಶ್ರೀ ಭೈರವೇಶ್ವರ ದೇವಸ್ಥಾನದ ಬಳಿ ಭಾನುವಾರ ಗ್ಯಾಸ್ ಪೈಪ್ ಲೈನ್ ಹಾದು ಹೋಗುವ ಜಮೀನಿನ ರೈತರ ಸಭೆ ನಡೆಸಿ ನಂತರ ಅವರು ಈ ನಿರ್ಧಾರ ಪ್ರಕಟಿಸಿದರು.
ಗ್ಯಾಸ್ ಪೈಪ್ ಲೈನ್ ಹಾದು ಹೋಗುವ ಮಾರ್ಗದಲ್ಲಿ ಅತೀ ಸಣ್ಣ ರೈತರಿದ್ದು ಈ ಜಮೀನುಗಳನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಈಗ ಸ್ವಾದೀನವಾಗುವ ಭೂಮಿಗೆ ಪರಿಹಾರ ಘೋಷಿಸಿದಾಗ ಪರಿಹಾರ ಹಣ ಕಡಿಮೆಯಾದರೆ ಮೇಲ್ಮನವಿ ಸಲ್ಲಿಸಬಹುದಾಗಿದೆ. ಆದರೆ ಕಾಮಗಾರಿ ಪೂರ್ಣಗೊಳಿಸಿ ಪೈಪ್ ಅಳವಡಿಸಿದರೆ ಅವರು ಕೊಡುವ ಹಣಕ್ಕೆ ಸುಮ್ಮನಾಗುವ ಅನಿವಾರ್ಯತೆ ಸೃಷ್ಠಿಯಾಗುತ್ತದೆ. ಅಲ್ಲದೆ ಹಾಸನದ ಬಳಿ ಸ್ವಾದೀನ ಪಡಿಸಿಕೊಂಡಿರುವ ಭೂಮಿಗೆ ಇನ್ನೂ ಪರಿಹಾರ ಕೊಡದೆ ರೈತರನ್ನು ಸತಾಯಿಸುತ್ತಿದ್ದಾರೆ. ಹಾಗಾಗಿ ಪರಿಹಾರ ಘೋಷಿಸಿ ಕಾಮಗಾರಿ ಆರಂಭಿಸಲಿ ಎನ್ನುವುದು ನಮ್ಮ ಬೇಡಿಕೆಯಾಗಿದೆ ಎಂದು ವಿವರಿಸಿದರು.
ಪರಿಹಾರ ಮೊದಲು ಘೋಷಿಸಿ ಎಂದು 2020ರ ಜನವರಿ ಮಾಹೆಯಲ್ಲಿ ರೈತರು ಹಾಸನಕ್ಕೆ ತೆರಳಿ ಈ ಯೋಜನೆಯ ಭೂಸ್ವಾದೀನಕ್ಕೆ ಆಕ್ಷೇಪಣೆ ಸಲ್ಲಿಸಿಬಂದಿದ್ದರು. ಫೆಬ್ರವರಿ ಮಾಹೆಯಲ್ಲಿ ಹುಳಿಯಾರಿನಲ್ಲಿ ಸಭೆgಯಲ್ಲಿ ಮತ್ತೊಂದು ಮನವಿ ಕೊಟ್ಟಿದ್ದೆವು. ಅಕ್ಟೋಬರ್ ಮಾಹೆಯಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಯಾಗಿ ಮಧ್ಯ ಪ್ರವೇಶಿಸಲು ಕೇಳಿಕೊಂಡಿದ್ದೆವು. ಆದರೆ ಯಾವ ಮನವಿಗೂ ಸ್ಪಂದಿಸದೆ ರೈತರಿಗೆ ಅರ್ಥವಾಗದ ಆಂಗ್ಲ ಭಾಷೆಯಲ್ಲಿ ರಿಜಿಸ್ಟರ್ ಪೋಸ್ಟ್ ಮೂಲಕ ನೋಟಿಸ್ ಕಳುಹಿಸಿ ರೈತರ ಒಪ್ಪಿಗೆ ಪಡೆಯದೆ ಕಾಮಗಾರಿ ಆರಂಭಿಸಿದ್ದಾರೆ ಎಂದು ಅವರು ಆರೋಪಿಸಿದರಲ್ಲದೆ ಕಾಮಗಾರಿ ಮುಂದುವರಿಸಿದರೆ ತಾಲೂಕಿನ ರೈತರನ್ನು ಸಂಘಟಿಸಿ ಕಾಮಗಾರಿ ತಡೆ ಚಳುವಳಿಗೆ ಮುಂದಾಗಬೇಕಾಗುತ್ತದೆ ಎಂದರು.
ಈ ಸಭೆಯಲ್ಲಿ ಮರೆನಡುಪಾಳ್ಯ, ದಬ್ಬಗುಂಟೆ, ಕಲ್ಲೇನಹಳ್ಳಿ, ಹೊಯ್ಸಲಕಟ್ಟೆ, ಲಕ್ಕೇನಹಳ್ಳಿ ಬಡಕೆಗುಡ್ಲು, ಅಣೇಪಾಳ್ಯ, ಗ್ರಾಮಗಳ ರೈತರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ