ಎಸಿಬಿ ಸಭೆಯ ಅರ್ಜಿಗಳಿಗೆ ಸ್ಪಂದಿಸದಿದ್ದರೆ ಕ್ರಮಕ್ಕೆ ಶಿಫಾರಸ್ಸು

ಹುಳಿಯಾರು : 

      ಎಸಿಬಿಯ ಸಾರ್ವಜನಿಕ ಸಭೆಗಳಲ್ಲಿ ಬರುವ ಅರ್ಜಿಗಳನ್ನು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಸ್ಪಂದಿಸದೆ ಪೆಂಡಿಗ್ ಇಟ್ಟರೆ ಕ್ರಮಕ್ಕೆ ಮೇಲಧಿಕಾರಿಗಳಿಗೆ ಶಿಫಾರಸ್ಸು ಮಾಡುವುದಾಗಿ ಎಸಿಬಿ ಅಧಿಕಾರಿ ಪ್ರವೀಣ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

      ತುಮಕೂರು ಭ್ರಷ್ಟಾಚಾರ ನಿಗ್ರಹದಳ ಪೊಲೀಸ್ ಠಾಣೆಯ ವತಿಯಿಂದ ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

      ಕಳೆದ ಒಂದು ವರ್ಷದಲ್ಲಿ ಜಿಲ್ಲೆಯ ಅನೇಕ ಕಡೆ ಎಸಿಬಿಯಿಂದ ಸಾರ್ವಜನಿಕ ಸಭೆ ನಡೆಸಿದ್ದು ಈ ಸಭೆಯಲ್ಲಿ ಬಂದಿದ್ದ ಅರ್ಜಿಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ಸಂಬಂಧ ಪಟ್ಟ ಇಲಾಖೆಗಳ ಅಧಿಕಾರಿಗಳು ಪರಿಶೀಲಿಸಿ ಕ್ರಮತೆಗೆದುಕೊಳ್ಳದೆ ಬಾಕಿ ಉಳಿಸಿಕೊಂಡಿದ್ದಾರೆ. ಎಸಿಬಿಗೆ ಕೊಟ್ಟರೂ ಸಮಸ್ಯೆ ಬಗೆಹರಿಯದಿದ್ದರೆ ಸಾರ್ವಜನಿಕವಾಗಿ ಇಲಾಖೆ ನಂಬಿಕೆ ಕಡೆದುಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಜನರು ಎಸಿಬಿ ಮೇಲಿಟ್ಟಿರುವ ನಂಬಿಕೆ ಮತ್ತು ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಿರ್ಲಕ್ಷ್ಯಿಸಿರುವ ಅಧಿಕಾರಿಗಳ ಮೇಲೆ ಕ್ರಮ ಅನಿವಾರ್ಯ ಎಂದರು.

      ಎಸಿಬಿಯಿಂದ ಪತ್ರ ಬಂದಿದೆ ಎಂಬ ಮಾತ್ರಕ್ಕೆ ಕಾನೂನು ಬಾಹಿರವಾಗಿ ಅಧಿಕಾರಿಗಳು ಕೆಲಸ ಮಾಡುವುದು ಬೇಡ. ಕಾನೂನು ಚೌಕಟ್ಟಿನಲ್ಲಿ ಅರ್ಜಿಗೆ ಸ್ಪಂದಿಸುವ ಪ್ರಮಾಣಿಕ ಪ್ರಯತ್ನ ಮಾಡಬೇಕಿದೆ. ಅರ್ಜಿ ಪೆಂಡಿಗ್ ಇಡಲು ಇರುವ ಸಕಾರಣವನ್ನು ನೀಡುವ, ಅರ್ಜಿ ತಿರಸ್ಕಾರಕ್ಕೆ ಇರುವ ಕಾನೂನು ತೊಡಕುಗಳನ್ನು ತಿಳಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರಲ್ಲದೆ, ಕೊರೊನಾ ಸೋಂಕಿನ ಭೀತಿಯ ನಡುವೆಯೂ ಜಿಲ್ಲೆಯ ಎಲ್ಲಾ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿ ಕೆಲಸ ವಿರ್ವಹಿಸುತ್ತಿರುವುದಕ್ಕೆ ಅಭಿನಂದಿಸಿದರು.

      ಈ ಸಭೆಯಲ್ಲಿ ಉಪತಹಸೀಲ್ದಾರ್ ಬಿ.ಸಿ.ಸುಮತಿ, ತಾಪಂ ಯೋಜನಾಧಿಕಾರಿ ಮೂರ್ತಪ್ಪ, ಬೆಸ್ಕಾಂ ಎಇಇ ಎನ್.ಬಿ.ಗವೀರಂಗಯ್ಯ, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಎ.ಎಸ್.ಮಂಜುಶ್ರೀ, ಅಕ್ಷರ ದಾಸೋಹದ ಕಾಂತರಾಜು ಸೇರಿದಂತೆ ತಾಲೂಕಿನ ವಿವಿಧ ಪಂಚಾಯ್ತಿಯ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
 
ಶೌಚಾಲಯ ವ್ಯವಸ್ಥೆ ಕಲ್ಪಿಸಿ:

      ಹುಳಿಯಾರು ಬಸ್ ನಿಲ್ದಾಣಕ್ಕೆ ನಿತ್ಯ ಸಾವಿರಾರು ಪ್ರಯಾಣಿಕರು ಬಂದುಹೋಗುತ್ತಾರೆ. ನೂರಾರೂ ಫುಟ್ ಫಾತ್ ವ್ಯಾಪಾರಿಗಳು ಇದ್ದಾರೆ. ಆದರೆ ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಸಾರ್ವಜನಿಕ ಶೌಚಾಲಯಕ್ಕೆ ಹಾಕಿದ್ದ ಬೀಗ ಇನ್ನೂ ತೆರೆದಿಲ್ಲ. ಪತ್ರಿಕೆಗಳಲ್ಲಿ ಈ ಬಗ್ಗೆ ವರದಿ ಬಂದಿದ್ದರೂ ನಿರ್ಲಕ್ಷ್ಯಿಸಿದ್ದಾರೆ. ಹಾಗಾಗಿ ಸಾರ್ವಜನಿಕರಿಗೆ ಬಯಲಲ್ಲಿ ಶೌಚಕ್ಕೆ ಹೋಗುದಂತಾಗಿದೆ ಎಂದು ಬಸ್ ಏಜೆಂಟ್ ರಹಮತ್ ದೂರಿದರು. ಇದಕ್ಕೆ ಸ್ಪಂದಿಸಿದ ಎಸಿಬಿ ಅಧಿಕಾರಿ ಪ್ರವೀಣ್ ಅವರು, ಹೊಸ ಶೌಚಾಲಯ ಕಟ್ಟುವವರೆವಿಗೆ ಹಳೆ ಶೌಚಾಲಯದ ಬಳಕೆಗೆ ಅನುವು ಮಾಡುವಂತೆ ಪಪಂಗೆ ಸೂಚಿಸಿದರು.

 ಮೂಲ ಪತ್ರ ಇದ್ದರೂ ಖಾತೆ ರದ್ದು

      ಹುಳಿಯಾರಿನ ಬಾಲಾಜಿ ಚಿತ್ರ ಮಂದಿರದ ಹಿಂಭಾಗ ನಮ್ಮ ನಿವೇಶನವಿದ್ದು ಮೂಲ ಪತ್ರ ಸಹ ನಮ್ಮ ಬಳಿಯಿದ್ದು ಪಂಚಾಯ್ತಿಯಲ್ಲಿ ಖಾತೆಯಾಗಿತ್ತು. ಆದರೆ ನಮ್ಮ ಗಮನಕ್ಕೆ ಬಾರದೆ ಖಾತೆ ರದ್ದು ಮಾಡಿ ಬೇರೆಯವರಿಗೆ ಇಸ್ವತ್ತು ಮಾಡಿಕೊಟ್ಟಿದ್ದಾರೆ ಎಂದು ನಿವಾಸಿ ಮಂಜುನಾಥ್ ಆರೋಪಿಸಿದರಲ್ಲದೆ ಈ ಬಗ್ಗೆ ಮುಖ್ಯಾಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸದೆ ನಿರ್ಲಕ್ಷ್ಯಿಸಿದ್ದಾರೆ ಎಂದು ದೂರಿದರು.

      ಮೂಲ ಪತ್ರ ಹಾಗೂ ಖಾತೆಯಿಂತೆ ಈಗ ನಮೂನೆ 3 ರಲ್ಲಿ ನಿವೇಶನ ದಾಖಲಾತಿ ಕೊಡಿಸಿಕೊಡುವಂತೆ ಮನವಿ ಮಾಡಿದರು. ತಕ್ಷಣ ಸಮಸ್ಯೆ ಪರಿಹರಿಸುವಂತೆ ಪಪಂ ಅಧಿಕಾರಿಗಳಿಗೆ ಎಸಿಬಿ ಅಧಿಕಾರಿ ಪ್ರವೀಣ್ ಸೂಚಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap