ಹುಳಿಯಾರು ಪ.ಪಂ. ಚುನಾವಣೆ : ಕಾಂಗ್ರೆಸ್‍ಗೆ ನಿರಾಳ, ಬಿಜೆಪಿಗೆ ಆತಂಕ!

ಹುಳಿಯಾರು : 

      ಹುಳಿಯಾರು ಪಟ್ಟಣ ಪಂಚಾಯ್ತಿ ಚುನಾವಣೆಯ ನಾಮಪತ್ರ ಹಿಂಪಡೆಯುವ ಕೊನೆ ದಿನ ಕಾಂಗ್ರೆಸ್‍ಗೆ ನಿರಾಳ ಭಾವ, ಬಿಜೆಪಿಗೆ ಆತಂಕದ ಛಾಯೆ ಮೂಡಿಸಿದೆ.

      ಹೌದು ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಬಣ ರಾಜಕೀಯ ಭಾರಿ ಸುದ್ದಿ ಮಾಡಿತ್ತು. ಪರಿಣಾಮ ಯಾರೇ ಬಿ ಫಾರಂ ಕೊಟ್ಟರೂ ಮತ್ತೊಂದು ಬಣದ ಬಂಡಾಯ ಎದುರಿಸಬೇಕಾಗುತ್ತದೆ ಎನ್ನುವ ಚರ್ಚೆ ಶುರುವಾಗಿತ್ತು. ಅದರಂತೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಬಿ ಫಾರಂ ಸಿಗದ ಬಣದ ಬೆಂಬಲಿಗರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದರು.

      ಇದು ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಗೆ ನುಂಗಲಾರದ ತುತ್ತಾಗಿತ್ತು. ಬಂಡಾಯ ಶಮನ ಮಾಡಲು ಇನ್ನಿಲ್ಲದ ಕಸರತ್ತು ಮಾಡಲಾಗಿತ್ತು. ಹಣದ ಆಮೀಷ, ಬೆದರಿಕೆ ಸೇರಿದಂತೆ ವಿವಿಧ ಅಸ್ತ್ರಗಳನ್ನು ಬಳಸಲಾಗಿತ್ತು. ಆದರೆ ಕಾಂಗ್ರೆಸ್‍ನಲ್ಲಿ ಬಂಡಾಯ ಶಮನವಾಗಿದ್ದು ಬಿಜೆಪಿಯಲ್ಲಿ ಹಾಗೆ ಉಳಿದಿದೆ.

      ಕಾಂಗ್ರೆಸ್‍ನ ಜಿಲ್ಲಾಕಾರ್ಯಾಧ್ಯಕ್ಷ ಸಾಸಲು ಸತೀಶ್ ಅವರ ಬಣದಿಂದ ನಾಮಪತ್ರ ಸಲ್ಲಿಸಿ ಬಂಡಾಯದ ಭಾವುಟ ಹಾರಿಸಿದ್ದವರಲ್ಲಿ ಸೈಯದ್ ಜಬೀಉಲ್ಲಾ ಅವರನ್ನು ಹೊರತು ಪಡಿಸಿ ಉಳಿದ ಎಲ್ಲರೂ ನಾಮಪತ್ರ ಹಿಂಪಡೆದಿದ್ದಾರೆ. ಆದರೆ ಬಿಜೆಪಿ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಬಣದಿಂದ ಬಂಡಾಯ ಎದ್ದಿದ್ದ ಎಲ್ಲರೂ ಕಣದಲ್ಲಿ ಉಳಿದಿದ್ದಾರೆ.

      ಬಿಜೆಪಿ ಅಭ್ಯರ್ಥಿಗಳಿಗೆ ಬಂಡಾಯ ಮಗ್ಗಲಮುಳ್ಳಾಗಿದ್ದು ಅನೇಕ ಕಡೆ ಗೆದ್ದೇಗೆಲ್ಲುವ ಅಭ್ಯರ್ಥಿಗಳಿಗೆ ಇವರು ಅಡ್ಡಿಯಾಗಿದ್ದಾರೆ. ಇನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಯಾವುದೇ ತೊಡರುಗಾಲಿಲ್ಲದಿದ್ದರೂ ಸಂಪನ್ಮೂಲದ ಕೊರತೆ ಎದ್ದುಕಾಣುತ್ತಿದೆ. ಬಿಜೆಪಿ ಬಂಡಾಯ ಅಭ್ಯರ್ಥಿಗಳಿಗೆ ಕಿರಣ್ ಅವರೇ ಆನೆ ಬಲವಾಗಿದ್ದು ಪಕ್ಷದ ಅಭ್ಯರ್ಥಿಗಳ ವಿರುದ್ಧ ಸೆಡ್ಡು ಹೊಡೆಯುವರೇ ಎನ್ನುವ ಪ್ರಶ್ನೆ ಎದ್ದಿದೆ.
ಬಿಜೆಪಿಯಲ್ಲಿ ಸಚಿವ ಮಾಧುಸ್ವಾಮಿ ಅವರ ಪುತ್ರ ಡಾ.ಅಭಿಜ್ಞಾ, ಕಾಂಗ್ರೆಸ್‍ನಲ್ಲಿ ಜಿಪಂ ಸದಸ್ಯ ವೈ.ಸಿ.ಸಿದ್ಧರಾಮಯ್ಯ ಅವರುಗಳು ಪಕ್ಷದ ಅಭ್ಯರ್ಥಿಗಳ ಬೆನ್ನಿಗೆ ನಿಂತಿದ್ದಾರೆ. ಈ ಇಬ್ಬರೂ ಯುವ ಮುಖಂಡರು ತಮ್ಮ ಭವಿಷ್ಯದ ರಾಜಕಾರಣದ ದೃಷ್ಠಿಯಿಂದ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ. ಶತಾಯಗತಾಯ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿ ಪಂಚಾಯ್ತಿ ಗಾದಿ ಹಿಡಿದು ಹೈಕಮಾಂಡ್‍ಗೆ ತಮ್ಮ ನಾಯಕತ್ವ ರುಜುವಾತು ಪಡಿಸಲು ಕಾಯುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link