ಹುಳಿಯಾರು ಅಭಿವೃದ್ಧಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ

 ಹುಳಿಯಾರು : 

     ಹುಳಿಯಾರಿನ ಇತಿಹಾಸದಲ್ಲೇ ಪ್ರಪ್ರಥಮವಾಗಿ ಪಟ್ಟಣ ಪಂಚಾಯಿತಿ ಚುನಾವಣೆ ನಡೆಯುತ್ತಿದ್ದು ಇಲ್ಲಿನ ಪರಿಸ್ಥಿತಿ ಅವಲೋಕಿಸಿದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗಳು ಜಯಗಳಿಸುವ ಎಲ್ಲಾ ಲಕ್ಷಣಗಳಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಹಾಗೂ ಮಾಜಿ ಶಾಸಕರೂ ಆದ ಕೆ.ಎನ್.ರಾಜಣ್ಣ ವಿಶ್ವಾಸ ವ್ಯಕ್ತಪಡಿಸಿದರು.

     ಹುಳಿಯಾರು ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ನಿಮಿತ್ತ ಇತರೆ ಕಾಂಗ್ರೆಸ್ ಮುಖಂಡರುಗಳೊಂದಿಗೆ ಆಗಮಿಸಿದ್ದ ಅವರು ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಸಿ.ಸಿದ್ದರಾಮಯ್ಯ ಅವರ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

     ಹುಳಿಯಾರಿನ ಎಲ್ಲಾ 16 ವಾರ್ಡ್ ಗಳಿಂದಲೂ 16 ಸ್ಪರ್ಧಿಗಳು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದು ಪಟ್ಟಣದ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಮತದಾರರು ಅವರನ್ನು ಚುನಾಯಿಸಬೇಕು ಎಂದು ಮನವಿ ಮಾಡಿದರು.

     ಕಾಂಗ್ರೆಸ್ ಪಕ್ಷದಿಂದ ಈ ಹಿಂದೆ ಟಿ.ಬಿ.ಜಯಚಂದ್ರ ಅವರು ಸಚಿವರಾಗಿದ್ದ ಕಾಲದಲ್ಲಿ ನೀರಾವರಿ ಯೋಜನೆಯಿಂದ ಹಿಡಿದು ಸಾಕಷ್ಟು ಜನಪರವಾದ ಅಭಿವೃದ್ಧಿ ಕೆಲಸಗಳನ್ನು ಮಾಡಿರುವುದು ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕೈಹಿಡಿಯಲಿದೆ.ಅಲ್ಲದೇ ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರ ಕಾಲದಲ್ಲಿ ಜಾರಿಗೆ ತರಲಾಗಿದ್ದ ಅನ್ನಭಾಗ್ಯ ಯೋಜನೆಯಂತೂ ಈ ದೇಶ ಕಂಡ ಅತ್ಯುತ್ತಮ ಯೋಜನೆಯಾಗಿದ್ದು ಈ ರಾಜ್ಯದ ಜನತೆ ಎಂದೆಂದೂ ನೆನಪಿನಲ್ಲಿಡಬೇಕಾದ ಯೋಜನೆಯಾಗಿದೆ. ಕೊರೊನಾ ಸಮಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿಯಲ್ಲಿ ಇಲ್ಲದಿದ್ದಲ್ಲಿ ರಾಜ್ಯದ ಜನತೆ ಹೇಗೆ ಜೀವನ ಮಾಡುತ್ತಿದ್ದರು ಎಂದು ಊಹಿಸುವುದು ಕೂಡ ಕಷ್ಟವಾಗುತ್ತದೆ. ಇಂತಹ ಪುಣ್ಯದ ಕಾರ್ಯ ಮಾಡಿರುವುದು ಸಿದ್ದರಾಮಯ್ಯನವರ ಕಾಂಗ್ರೆಸ್ ಪಕ್ಷ ಎಂದರು.

ಖಾತೆ, ಎನ್‍ಓಸಿ ಸಮಸ್ಯೆ ವ್ಯಾಪಕ:

     ಪಟ್ಟಣ ವ್ಯಾಪ್ತಿಯ ವಾಡ್ರ್ಗಳಲ್ಲಿ ಸಂಚರಿಸಿದಾಗ ಖಾತೆ ಮಾಡದಿರುವುದು, ನಿರಾಕ್ಷೇಪಣ ಪತ್ರ ನೀಡದಿರುವುದು ಮತ್ತಿತರ ಸಮಸ್ಯೆಗಳು ಗೋಚರವಾಗಿದ್ದು ಆಡಳಿತಾಧಿಕಾರಿಗಳು ಹಾಗೂ ಹಾಲಿ ಸಚಿವರ ಮನೋಭಾವಕ್ಕೆ ಹಿಡಿದ ಕನ್ನಡಿಯಾಗಿದೆ. ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಮತದಾರರು ಕೈ ಹಿಡಿದಲ್ಲಿ ನಾವೆಲ್ಲಾ ಮುಖಂಡರುಗಳು ಸಹ ಇಲ್ಲಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ಇತ್ತರು.

      ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ , ಮಾಜಿ ಸಚಿವರಾದ ಹೆಚ್.ಎಂ.ರೇವಣ್ಣ, ಮಾಜಿ ಶಾಸಕರು ಹಾಗೂ ತುಮಕೂರು ಜಿಲ್ಲಾ ಕಾಂಗ್ರೆಸ್ ನ ಮಾಜಿ ಅಧ್ಯಕ್ಷರಾದ ಶಫಿ ಅಹಮದ್, ಮಾಜಿ ಶಾಸಕರಾದ ಲಕ್ಕಪ್ಪ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ರಾಮಕೃಷ್ಣಪ್ಪ, ಸೋಮಶೇಖರ್, ಜಿಲ್ಲಾ ಕಾಂಗ್ರೆಸ್ ವೀಕ್ಷಕ ಹನುಮಂತಪ್ಪ, ತಿಪಟೂರು ಜಿಲ್ಲಾ ಪಂಚಾಯಿತಿ ಸದಸ್ಯ ನಾರಾಯಣ್, ಮಲ್ಲಿಕಾರ್ಜುನಯ್ಯ, ರಮೇಶ್, ಹುಳಿಯಾರು ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಹುಳಿಯಾರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ.ಸಿ.ಸಿದ್ದರಾಮಯ್ಯ,ಕಾಂಗ್ರೆಸ್ ಮುಖಂಡರಾದ ಜಾಫರ್ ಸಾಬ್,ಬಡಗಿ ರಾಮಣ್ಣ,ಕೃಷ್ಣೇಗೌಡ,ಧನುಷ್ ರಂಗನಾಥ್ ಮತ್ತಿತರರು ಸೇರಿದಂತೆ ಪಟ್ಟಣ ಪಂಚಾಯಿತಿಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪ.ಪಂ ಗೆಲುವು ಜಿಪಂಗೆ ಮುನ್ನುಡಿ

      ಕಾಂಗ್ರೆಸ್ ಪಕ್ಷದ ಎಲ್ಲಾ 16 ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಮುಂಬರುವ ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಇಡೀ ರಾಜ್ಯಕ್ಕೆ ಒಂದು ಸಂದೇಶ ನೀಡಬೇಕು ಎನ್ನುವ ಆಶಯ ಕಾಂಗ್ರೆಸ್ ಪಕ್ಷ ದಾಗಿದ್ದು ಇದಕ್ಕಾಗಿ ಇಲ್ಲಿನ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಇಲ್ಲಿನ ಎಲ್ಲಾ 16 ಅಭ್ಯರ್ಥಿಗಳು ಗೆದ್ದಿದ್ದೇ ಆದಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಕಣಕ್ಕಿಳಿಸುವುದಾಗಿ ಕೆ.ಎನ್.ರಾಜಣ್ಣ ಘೋಷಣೆ ಮಾಡಿದರು.

      ಈ ಭಾಗಕ್ಕೆ ನೀರಾವರಿ ಯೋಜನೆ ರೂಪಿಸಿದ್ದಲ್ಲದೇ ಅದಕ್ಕೆ ಹಣದ ಮಂಜೂರಾತಿ ಮಾಡಿಸಿ ಕಾಮಗಾರಿಗಳ ಕಾರ್ಯಕ್ಕೆ ಚಾಲನೆ ನೀಡಿದ್ದು ಸಹ ಕಾಂಗ್ರೆಸ್ ಪಕ್ಷದ ಸಾಧನೆ. ಈ ಹಿನ್ನೆಲೆಯಲ್ಲಿ ಹುಳಿಯಾರು ಪಟ್ಟಣ ಇನ್ನಷ್ಟು ಅಭಿವೃದ್ಧಿ ಪಥದತ್ತ ಸಾಗಬೇಕಾಗಿದ್ದಲ್ಲಿ ಪಕ್ಷದ ಎಲ್ಲಾ 16 ಅಭ್ಯರ್ಥಿಗಳನ್ನು ಗೆಲ್ಲಿಸುವುದು ಮತದಾರರ ಕರ್ತವ್ಯವಾಗಿದೆ ಎಂದು ನುಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap