ಹುಳಿಯಾರು ಪ.ಪಂ. ಚುನಾವಣೆ : 16 ವಾರ್ಡ್‍ಗಳಲ್ಲೂ ಶಾಂತಿಯುತ ಮತದಾನ

ಹುಳಿಯಾರು :

      ಹುಳಿಯಾರು ಪಟ್ಟಣ ಪಂಚಾಯ್ತಿಯ ಚುನಾವಣೆಯು ಸೋಮವಾರ ಶಾಂತಿಯುತವಾಗಿ ಮತದಾನ ನಡೆಯಿತು. ಮತದಾರರು ಕೊರೊನಾ ನಿಯಮಗಳನ್ನು ಪಾಲಿಸಿಕೊಂಡು ಮತದಾನ ಮಾಡಿದರು.

      ಬೆಳಿಗ್ಗೆಯೇ ಮತಗಟ್ಟೆಯ ಮುಂದೆ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಮಧ್ಯಾಹ್ನ ಬಿಸಿಲು ಹೆಚ್ಚಿದ್ದ ಕಾರಣ ಮಂದಗತಿಯಲ್ಲಿ ಮತದಾನ ನಡೆದು ಸಂಜೆಯ ಹೊತ್ತಿಗೆ ಮತ್ತೆ ಚುರುಕು ಪಡೆದುಕೊಂಡಿತು. ಪುರುಷ ಹಾಗೂ ಮಹಿಳಾ ಮತದಾರರು ಮತಗಟ್ಟೆಗಳ ಮುಂದೆ ಸಾಮಾಜಿಕ ಅಂತರ ಪಾಲನೆಯೊಂದಿಗೆ ಪ್ರತ್ಯೇಕ ಸಾಲುಗಳಲ್ಲಿ ನಿಂತು ಮತದಾನ ಮಾಡಿದರು.

      ಮತಗಟ್ಟೆಯಿಂದ ನಿಗದಿತ ಅಂತರದ ಹೊರಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಮತದಾನ ಮಾಡುವಂತೆ ಮತದಾರರಿಗೆ ಮನವಿ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಕೆಲಕಡೆ ಅಭ್ಯರ್ಥಿ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತಾದರೂ ಮತ್ತೆ ಸೌಹಾರ್ದತೆಯಿಂದ ಮತ ಕೇಳುತ್ತಿದ್ದರು.

     ಮತದಾನ ಮಾಡುವುದಕ್ಕೆ ವೃದ್ಧರಿಗೆ ಅಂಗವಿಕಲರಿಗೆ ವಾಹನ ವ್ಯವಸ್ಥೆ ಸಹ ಮಾಡಲಾಯಿತು. 16 ಮತಗಟ್ಟೆಗಳಲ್ಲಿ ಚುನಾವಣಾ ಕಾರ್ಯವನ್ನು ನಿರ್ವಹಿಸಲು ವಿವಿಧ ಇಲಾಖೆಗಳ ಸಿಬ್ಬಂದಿಗಳನ್ನು ನೇಮಿಸಲಾಗಿತ್ತು. ಮತಗಟ್ಟೆಗಳ ರಕ್ಷಣೆಗೆ ಹಾಗೂ ಶಾಂತಿಸುವ್ಯವಸ್ಥೆ ಕಾಪಾಡಿಕೊಳ್ಳಲು ಪೊಲೀಸ್ ಸಿಬ್ಬಂದಿಯನ್ನು ನೇಮಿಸಿ ಕೊಳ್ಳಲಾಗಿತ್ತು. ಮತದಾನ ಮುಗಿದ ಬಳಿಕ ಮತ ಪೆಟ್ಟಿಗೆಗಳು ಹಾಗೂ ಅವುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸೀಲ್ ಮಾಡಿ, ಚಿಕ್ಕನಾಯಕನಹಳ್ಳಿಯಲ್ಲಿ ಸ್ಥಾಪಿಸಲಾಗಿದ್ದ ಕೇಂದ್ರಕ್ಕೆ ಕಳುಹಿಸಿಕೊಡಲಾಯಿತು.

ನಿಧನರಾದವರ ನೂರಾರು ಹೆಸರು ಪಟ್ಟಿಯಲ್ಲಿ

     16 ವಾರ್ಡ್‍ಗಳ ಮತಪಟ್ಟಿಯಲ್ಲೂ ನಿಧನರಾದವರ ಹೆಸರು ಹಾಗೂ ಪರಸ್ಥಳಕ್ಕೆ ತೆರಳಿದವರ ನೂರಾರು ಹೆಸರು ಡಿಲಿಟ್ ಆಗದೆ ಹಾಗೆಯೇ ಉಳಿದಿತ್ತು. ಅಲ್ಲದೆ ಹೊಸದಾಗಿ ಸೇರಿಸಿದ ಕೆಲವರ ಹೆಸರು ಹೊಸ ಪಟ್ಟಿಯಲ್ಲಿ ಸೇರ್ಪಡೆಗೊಂಡಿರಲಿಲ್ಲ. ಓಟರ್ ಐಡಿ ಹಾಗೂ ಮತಪಟ್ಟಿಯಲ್ಲಿನ ಹೆಸರುಗಳಿಗೆ ವ್ಯತ್ಯಾಸವಿದ್ದು ಮತದಾನಕ್ಕೆ ಅವಕಾಶ ಕೋಡುವುದರಿಂದ ಕೆಲವರಿಗೆ ಗೊಂದಲ ನಿರ್ಮಾಣವಾಗಿತ್ತು.

ಮತಪಟ್ಟಿಯಲ್ಲಿ ಹೆಸರುಗಳೇ ಮಾಯ 

      ವಿಧಾನಸಭಾ ಚುನಾವಣೆ, ಸಂಸತ್ ಚುನಾವಣೆಗೆ ಮತದಾನ ಮಾಡಿದ್ದ ಕೆಲ ಮತದಾರರ ಹೆಸರುಗಳು ಮತಪಟ್ಟಿಯಲ್ಲಿ ಇಲ್ಲದಾಗಿತ್ತು. ಎಂದಿನಂತೆ ವೋಟರ್ ಐಡಿ ಹಿಡಿದುಕೊಂಡು ಬಂದವರಿಗೆ ಮತದಾನಕ್ಕೆ ಅವಕಾಶ ಕೊಡದೆ ಚುನಾವಣೆ ಸಿಬ್ಬಂದಿ ಕಳುಹಿಸುತ್ತಿದ್ದರು. ಈ ಸಂದರ್ಭದಲ್ಲಿ ಮತದಾರರು ಹಾಗೂ ಚುನಾವಣಾ ಸಿಬ್ಬಂದಿಗಳ ಜೊತೆ ಮಾತಿನ ಚಕಮಕಿ ಸಹ ನಡೆದವು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap