ಏಕನಾಯಕತ್ವ ಪ್ರಜಾಪ್ರಭುತ್ವಕ್ಕೆ ಗಂಡಾಂತರ : ಎಲ್ ಹನುಮಂತಯ್ಯ

ತುಮಕೂರು

     ಪ್ರಜಾಪ್ರಭುತ್ವದಲ್ಲಿ ಏಕನಾಯಕತ್ವ ಗಂಡಾಂತರಕಾರಿ, ಸಾಮೂಹಿಕ ನಾಯಕತ್ವ ಅರ್ಥಪೂರ್ಣ. ಹೆಚ್ಚಿನ ಜನರು ಒಳಗೊಳ್ಳುವ ಆಡಳಿತ ವ್ಯವಸ್ಥೆ ಅಗತ್ಯವಿದೆ. ಸೈನಿಕರ ರಕ್ತವನ್ನು ಬಿಜೆಪಿ ಮತವಾಗಿ ಪರಿವರ್ತಿಸಲು ಹೊರಟಿರುವುದು ನಾಚಿಕೆಗೇಡಿನ ವಿಚಾರ ಎಂದು ರಾಜ್ಯಸಭಾ ಸದಸ್ಯ ಎಲ್ ಹನುಮಂತಯ್ಯ ಟೀಕಿಸಿದರು.

      ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಪೊರೇಟ್ ಕಂಪನಿಗಳನ್ನು ಬೆಳೆಸುವ ಬಿಜೆಪಿ ತಿರಸ್ಕರಿಸಿ, ಶೋಷಿತರ ಕಲ್ಯಾಣಕ್ಕಾಗಿ ಇರುವ ಕಾಂಗ್ರೆಸ್, ಜೆಡಿಎಸ್ ಮೈತ್ರಿಗೆ ಈ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿದರು.

       ಸಣ್ಣ ಹಗರಣವೂ ಇಲ್ಲದಂತೆ 11 ತಿಂಗಳ ಕಾಲ ಪ್ರಧಾನಿಯಾಗಿ ಆಡಳಿತ ನಡೆಸಿದ್ದ ಕೀರ್ತಿ ದೇವೆಗೌಡರಿಗೆ ಸಲ್ಲುತ್ತದೆ. ತುಮಕೂರಿನಿಂದ ಇವರನ್ನು ಗೆಲ್ಲಿಸಿದರೆ, ಅದೃಷ್ಟವಿದ್ದರೆ ಮತ್ತೆ ಪ್ರಧಾನಿ ಆಗಬಹುದು. ಕಾಂಗ್ರೆಸ್ ಜೆಡಿಎಸ್‍ನಿಂದ ಮಾತ್ರ ಎಲ್ಲಾ ವರ್ಗದವರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ, ಎಲ್ಲರೂ ಒಳಗೊಳ್ಳುವ ಆಡಳಿತ ರಚಿಸಲು ಸಾಧ್ಯ ಎಂದರು.

      ಬಲಿಷ್ಠ ನಾಯಕ, ಬಲಿಷ್ಠ ಸರ್ಕಾರ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿಯ ಐದು ವರ್ಷ ಆಡಳಿತದಲ್ಲಿ ದ್ವೇಷದ ರಾಜಕಾರಣ ಮೇಲುಗೈ ಸಾಧಿಸಿದೆ. ಎಲ್ಲರನ್ನೂ ಒಳಗೊಳ್ಳುವ ಸಾಮರಸ್ಯದ ಮೌಲ್ಯಗಳು ಗಂಡಾಂತರಕ್ಕೆ ಸಿಕ್ಕಿವೆ. ದೇಶ ಭಕ್ತಿ ಹೆಸರಿನಲ್ಲಿ ಬಿಜೆಪಿಯ ಅಂಗ ಸಂಸ್ಥೆಗಳಾದ ಆರ್‍ಎಸ್‍ಎಸ್, ಭಜರಂಗದಳ, ವಿಹೆಚ್‍ಪಿ ಮೊದಲಾದ ಸಂಘಟನೆಗಳು ಜನರನ್ನು ವಿಭಜನೆ ಮಾಡುವ ಕೆಲಸಕ್ಕೆ ಇಳಿದಿವೆ. ಶೋಷಿತರು ಒಂದೆಡೆ ಸಂಕಷ್ಟಕ್ಕೆ ಸಿಲುಕಿದ್ದರೆ, ಶೋಷಣೆ ಮಾಡುವವರು ಮತ್ತೊಂದೆಡೆ ಒಗ್ಗಟ್ಟಾಗುತ್ತಾ ಹೋಗುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಆತಂಕಕ್ಕೀಡುಮಾಡಿದೆ ಎಂದು ಹೇಳಿದರು.

      ಶೋಷಿತ ವರ್ಗದ ಕಲ್ಯಾಣದ ಬದಲು ಬಿಜೆಪಿ ಸರ್ಕಾರ ಕಾರ್ಪೊರೇಟ್ ಸಂಸ್ಥೆಗಳು ಇನ್ನಷ್ಟು ಆರ್ಥಿಕವಾಗಿ ಬೆಳೆಯಲು ಸಹಕಾರಿಯಾಗಿ, ಕೆಲವೇ ವ್ಯಕ್ತಿಗಳ ಸಂಪತ್ತು ಹೆಚ್ಚು ಮಾಡುವತ್ತ ಆದ್ಯತೆ ನೀಡುತ್ತಿದೆ ಎಂದು ಟೀಕಿಸಿದರು.

       ಈಗ ದೇಶದ ಭದ್ರತೆ ಹೆಚ್ಚು ಚರ್ಚೆಯಾಗುತ್ತಿರುವ ವಿಚಾರ. 60 ವರ್ಷದಲ್ಲಿ ಯಾವ ಪ್ರಧಾನಿ ಕಾಲದಲ್ಲಿಯೂ ಸೇನೆ ಇಷ್ಟು ಚರ್ಚೆಗೊಳಗಾಗಿರಲಿಲ್ಲ. ಆಗಲೂ ಯುದ್ದಗಳು ನಡೆದಿದ್ದವು, ಸರ್ಜಿಕಲ್ ದಾಳಿಗಳಾಗಿದ್ದವು. ಸೈನಿಕರು ದೇಶ ಕಾಯುವುದು ಆಗಿನಿಂದ ಈವರೆಗೂ ನಡೆದು ಬರುತ್ತಿದೆ. ದೇಶದ ಗಡಿಯಾಚೆ ಅರಾಜಕತೆಯ ಸರ್ಕಾರ ಇರುವವರೆಗೂ ದೇಶದ ಭದ್ರತೆ ಸೈನಿಕರ ಕೈಯಲ್ಲಿರಬೇಕು. ಆದರೆ, ಸೈನಿಕರು ರಾಜಕೀಯ ಚರ್ಚೆ ಆಗಬಾರದು. ಸೈನ್ಯದ ಮುಖ್ಯಸ್ಥರು ರಾಜಕೀಯ ವಕ್ತಾರರಂತೆ ಮಾತನಾಡುವ ಸ್ಥಿತಿ ಬರಬಾರದು ಎಂದರು.

         ಸೈನಿಕರನ್ನು ಭಾಷಣದ ವಸ್ತುವಾಗಿಸಿ, ಸೈನಿಕರ ರಕ್ತದ ಮೇಲೆ ಮತ ಕೇಳುವ ನಾಚಿಕೆಗೇಡಿನ ರಾಜಕಾರಣವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಆರ್‍ಬಿಐ, ಸಿಬಿಐ, ಇಡಿ, ಐಟಿಯಂತಹ ಸಾಂವಿಧಾನಿಕ ಸಂಸ್ಥೆಗಳನ್ನು ಬೀದಿಗೆ ತಂದು ಘನತೆ ಹಾಳು ಮಾಡಿದ್ದಾರೆ ಎಂದು ಎಲ್ ಹನುಮಂತಯ್ಯ ಟೀಕೆ ಮಾಡಿದರು.ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಮುಖಂಡರಾದ ಮುರಳಿಧರ ಹಾಲಪ್ಪ, ಟಿ ಎಸ್ ನಿರಂಜನ್, ಪಿ ಶಿವಾಜಿ, ಡಾ. ಸೌಮ್ಯ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link