ಹುಳಿಯಾರು :
ಹುಳಿಯಾರಿನ ಎಂ.ಜಿ ರಸ್ತೆಯೆಂದೆ ಹೆಸರಾಗಿರುವ ರಾಜಕುಮಾರ್ ರಸ್ತೆಗೆ ಇತ್ತೀಚೆಗಷ್ಟೆ ನಿರ್ಮಾಣಮಾಡಿರುವ ಸಿಮೆಂಟ್ ಕಾಂಕ್ರೇಟ್ ರಸ್ತೆಗೆ ಕ್ಯೂರಿಂಗ್ ಮಾಡದೆ ನಿರ್ಲಕ್ಷ್ಯಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಹುಳಿಯಾರು ಪಟ್ಟಣದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುವ ರಾಜ್‍ಕುಮಾರ್ ರಸ್ತೆಯಲ್ಲಿ ಗುಂಡಿಬಿದ್ದು ಸುಗಮ ಸಂಚಾರಕ್ಕೆ ತೊಡಕಾಗಿತ್ತು. ಆಸ್ಪತ್ರೆ ಪೊಲೀಸ್ ಠಾಣೆ ಸೇರಿದಂತೆ ವ್ಯಾಪಾರ ವಹಿವಾಟಿಗೆ ಬರುವವರೆಲ್ಲರೂ ಇದೇ ರಸ್ತೆಯಲ್ಲಿ ಓಡಾಡಬೇಕಿದೆ. ಈ ರಸ್ತೆಯಲ್ಲಿ ನಿತ್ಯ ಓಡಾಡುವ ಸಾವಿರಾರು ಮಂದಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಿಡಿಶಾಪ ಹಾಕಿ ಓಡಾಡುವಂತ್ತಾಗಿತ್ತು.
ದಶಕಗಳಿಗೂ ಹೆಚ್ಚು ಕಾಲ ಯಾರೊಬ್ಬರೂ ರಸ್ತೆ ದುರಸ್ತಿಗೆ ಮುಂದಾಗಿರಲಿಲ್ಲ. ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ರಸ್ತೆಯ ಅವ್ಯವಸ್ತೆಯ ಮನಗಂಡು ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ ಮಾಡಿಸಲು ಮುಂದಾದರು. ಮೊದಲ ಹಂತದಲ್ಲಿ ಸ್ಟೇಷನ್ ಸರ್ಕಲ್‍ನಿಂದ ದುರ್ಗಮ್ಮಗುಡಿ ರಸ್ತೆಯವರೆವಿಗೆ ಸಿಸಿ ರಸ್ತೆ ನಿರ್ಮಿಸಲಾಗಿತ್ತು.
ಈಗ ಮುಂದುವರೆದ ಭಾಗವಾಗಿ ದುರ್ಗಮ್ಮನಗುಡಿ ರಸ್ತೆಯಿಂದ ಶಿಲ್ಪಾಸ್ಟೋರ್ ವರೆವಿಗೂ ಇತ್ತೀಚೆಗಷ್ಟೆ ಸಿಸಿ ರಸ್ತೆ ಮಾಡಲಾಗಿದೆ. ಕಾಮಗಾರಿ ಮುಗಿದ ಮೂರ್ನಲ್ಕು ದಿನಗಳು ಮಾತ್ರ ಕ್ಯೂರಿಂಗ್ ಮಾಡಿದ್ದು ಬಿಟ್ಟರೆ ಮತ್ತೆಂದೂ ಸಿಸಿ ರಸ್ತೆಗೆ ನೀರು ಹಾಕಿಲ್ಲ. ಸರಿಯಾಗಿ ಸಿಮೆಂಟ್ ಕ್ಯೂರಿಂಗ್ ಆಗದಿದ್ದರೆ ಸಿಮೆಂಟ್ ರಸ್ತೆ ಬಹುಬೇಗ ಹಾಳಾಗುತ್ತದೆ ಎನ್ನುವ ಆತಂಕ ಸಾರ್ವಜನಿಕರದಾಗಿದೆ.
ಸಿಸಿ ರಸ್ತೆಗೆ ಕನಿಷ್ಠ 20 ದಿನಗಳ ಕಾಲವಾದರೂ ಕ್ಯೂರಿಂಗ್ ಮಾಡಿದಾಗ ಮಾತ್ರ ದೀರ್ಘಕಾಲ ಬಾಳಿಕೆ ಬರುತ್ತದೆ. ಆದರೆ ಪಪಂನ ಸಂಬಂಧಪಟ್ಟ ಅಧಿಕಾರಿಗಳು ಇತ್ತ ತಿರುಗಿಯೂ ಸಹ ನೋಡದಿದ್ದರಿಂದ ಕ್ಯೂರಿಂಗ್ ಮಾಡದೆ ನಿರ್ಲಕ್ಷ್ಯಿಸಿದ್ದಾರೆ. ಇನ್ನಾದರೂ ಸರಿಯಾಗಿ ಕ್ಯೂರಿಂಗ್ ಮಾಡುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ