ಹುಳಿಯಾರು :
ಕೆಎಸ್‍ಆರ್‍ಟಿಸಿ ನೌಕರರ ಮುಷ್ಕರವು ಮುಂದುವರಿದಿದ್ದು ಪ್ರಯಾಣಿಕರ ಬವಣೆ ಹೆಚ್ಚಾಗಿರುವ ಜೊತೆಗೆ ವ್ಯಾಪಾರ ವಹಿವಾಟಿಗೂ ತೊಂದರೆಯಾಗಿದೆ.
ಕೆಎಸ್‍ಆರ್‍ಟಿಸಿ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಖಾಸಗಿ ವಾಹನಗಳಿಗೆ ಅನುಮತಿ ನೀಡುವ ಮೂಲಕ ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದರು ಜನರ ಓಡಾಟ ಮೊದಲಿನಂತೆ ಇಲ್ಲ. ಹೊರ ಜಿಲ್ಲೆಗಳಿಗೆ ತೆರಳುವವರು ಪರದಾಡುತ್ತಿದ್ದು, ಸಕಾಲಕ್ಕೆ ಬಸ್ ಸೌಲಭ್ಯ ಸಿಗದಂತೆ ಆಗಿದೆ.
ಪ್ರಯಾಣಿಕರ ಕೊರತೆಯಿಂದ ಬಸ್‍ಗಳು ಸಕಾಲಕ್ಕೆ ನಿಲ್ದಾಣದಿಂದ ತೆರಳುತ್ತಿಲ್ಲ. ಪರಿಣಾಮ ಉದ್ಯೋಗಸ್ಥರು ಬೆಳಿಗ್ಗೆ ಕಚೇರಿ ತಲುಪಲು ಹಾಗೂ ಸಂಜೆ ಮನೆ ತಲುಪಲು ಪರದಾಡುತ್ತಿದ್ದಾರೆ. ವಿದ್ಯಾರ್ಥಿಗಳು, ಕಾರ್ಮಿಕರು, ಸರ್ಕಾರಿ ನೌಕರರಿಗೂ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದಾಗಿದೆ.
ಬೆಳಗ್ಗೆ ಹಾಗೂ ಸಂಜೆ ಹೆಚ್ಚಿನ ಪ್ರಯಾಣಿಕರು ಇದ್ದರೆ ಮಧ್ಯಾಹ್ನದ ಹೊತ್ತು ನಿಲ್ದಾಣಗಳು ಖಾಲಿ ಹೊಡೆಯುತ್ತಿವೆ. ಬಸ್ ನಿಲ್ದಾಣಕ್ಕೆ ಬರುವ ಬೆರಳೆಣಿಕೆ ಮಂದಿ ಪ್ರಯಾಣಿಕರಿಗೆ ತಮ್ಮ ಊರುಗಳಿಗೆ ತೆರಳಲು ವಾಹನಗಳು ಲಭಿಸದ ಕಾರಣ ಪರದಾಡುವಂತಾಯಿತು.
ಮುಷ್ಕರದ ಹಿನ್ನೆಲೆಯಲ್ಲಿ ನಗರಕ್ಕೆ ವಿವಿಧೆಡೆಯಿಂದ ಬಂದು ಹೋಗುವವರ ಸಂಖ್ಯೆ ವಿರಳವಾಗಿದ್ದ ಕಾರಣ ಮಾರುಕಟ್ಟೆಯಲ್ಲಿ ವ್ಯಾಪಾರ, ವಹಿವಾಟು ಕ್ಷೀಣವಾಗಿತ್ತು. ಅಲ್ಲದೆ ಯುಗಾದಿ ಹಬ್ಬ ಸಮೀಪಿ ಸುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಒಂದಷ್ಟು ವ್ಯಾಪಾರ, ವಹಿವಾಟಿನ ನಿರೀಕ್ಷೆ ಇತ್ತು. ಆದರೆ, ಮುಷ್ಕರದ ಪರಿಣಾಮ ವ್ಯಾಪಾರ, ವಹಿವಾಟಿಕ್ಕೆ ಏಟು ಬಿದ್ದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
