ಅವೈಜ್ಞಾನಿಕ ಕಾಮಗಾರಿಯಿಂದಾಗಿ ತೋಟಕ್ಕೆ ಬಂದ ಮಣ್ಣು

ಹುಳಿಯಾರು: 

      ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆಯಡಿ ನಿರ್ಮಿಸಲಾದ ರಸ್ತೆ ಬದಿಯ ಮಣ್ಣು, ಸುರಿದ ಭಾರಿ ಮಳೆಗೆ ತೋಟಕ್ಕೆ ನುಗ್ಗುತ್ತಿದ್ದು ಗುಣಮಟ್ಟದ ಕಾಮಗಾರಿ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

      ತಿಮ್ಲಾಪುರ ಗೇಟ್‍ನಿಂದ ಹೊಸಹಳ್ಳಿ, ಹೊಸಹಳ್ಳಿಪಾಳ್ಯದ ಮೂಲಕ ಬಾಣಾವರ-ಹುಳಿಯಾರಿನ ರಾಷ್ಟ್ರೀಯ ಹೆದ್ದಾರಿಗೆ ಸೇರುವ ರಸ್ತೆ ಬಹಳ ವರ್ಷಗಳಿಂದ ಗುಂಡಿಗಳು ಬಿದ್ದು ಓಡಾಡಲು ತೀವ್ರ ತೊಂದರೆಯಾಗಿತ್ತು. ಈ ರಸ್ತೆಯ ಅವ್ಯವಸ್ಥೆ ಅರಿತು ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ ರಸ್ತೆಯನ್ನು ಸೇರಿಸಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿದ್ದರು.

      ಕಳೆದ ಐದಾರು ತಿಂಗಳಿಂದ ನಡೆಯುತ್ತಿದ್ದ ರಸ್ತೆ ಕಾಮಗಾರಿ ಈಗ ಸ್ಥಗಿತಗೊಂಡಿದೆ. ಆದರೆ ಈ ಹಿಂದೆ ರಸ್ತೆ ಬದಿಯಲ್ಲಿ ಮಣ್ಣು ಹಾಕುವ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಸಮಸ್ಯೆ ಸೃಷ್ಠಿಗೆ ಕಾರಣ ಎನ್ನಲಾಗಿದೆ. ಹೊಸಹಳ್ಳಿಯಿಂದ ರಾಷ್ಟ್ರೀಯ ಹೆದ್ದಾರಿಗೆ ಸೇರುವ 1 ಕಿ.ಮೀ. ರಸ್ತೆಯ ಎರಡೂ ಭಾಗದ ಪಕ್ಕದಲ್ಲಿ ಮಣ್ಣು ಹಾಕಿದ್ದು, ಈ ಮಣ್ಣು ಬಿದ್ದ ಒಂದೇ ಒಂದು ಮಳೆಗೆ ಏಳೆಂಟು ಕಡೆ ಕುಸಿದು ಪಕ್ಕದ ತೋಟಕ್ಕೆ ನುಗ್ಗಿದೆ.

      ಹೀಗೆ ಮಳೆ ಬಂದರೆ ರಸ್ತೆಯುದ್ದಕ್ಕೂ ಕೊರಕಲು ಬಿದ್ದು ಮುಂದೆ ಮಾಡುವ ಡಾಂಬಾರು ರಸ್ತೆಗೆ ಹಾನಿಯಾಗುತ್ತದೆ. ಅಲ್ಲದೆ ತೋಟಕ್ಕೆ ಅನವಶ್ಯಕ ಮಣ್ಣು ಹರಿದು ಬೆಳೆದ ಬೆಳೆಗಳಿಗೆ ತೊಂದರೆಯಾಗುತ್ತದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಅರಿತು ಗುಣಮಟ್ಟದ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸುವಂತೆ ಮನವಿ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link