ಧೂಳಿನಿಂದ ಆರೋಗ್ಯ ಸಮಸ್ಯೆ : ಮಾಸ್ಕ್ ಧರಿಸಲು ವೈದ್ಯಾಧಿಕಾರಿಗಳ ಸಲಹೆ

ತುಮಕೂರು

     ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಕಾಮಗಾರಿಗಳು ಆರಂಭವಾದಾಗಿನಿಂದ ನಗರದಲ್ಲಿ ವ್ಯಾಪಕಗೊಳ್ಳುತ್ತಿರುವ ಧೂಳು ಜನರ ಉಸಿರುಕಟ್ಟಿಸಿದೆ. ಬೇಸಿಗೆಯಲ್ಲಿ ಧೂಳಿನ ಪ್ರಮಾಣ ಹೆಚ್ಚಾಗುವುದರಿಂದ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಜನರನ್ನು ಬಾಧಿಸುತ್ತವೆ. ರಕ್ಷಣೆಗಾರಿ ನಾಗರೀಕರು ಮಾಸ್ಕ್ ಧರಿಸಿಕೊಳ್ಳುವ ಅಗತ್ಯವಿದೆ ಎಂದು ವೈದ್ಯಾಧಿಕಾರಿಗಳು ಸಲಹೆ ಮಾಡಿದ್ದಾರೆ.

    ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ, ಎಂ.ಜಿ. ಕ್ರೀಡಾಂಗಣ ನಿರ್ಮಾಣದಂತಹ ದೊಡ್ಡ ಪ್ರಮಾಣದ ಕಾಮಗಾರಿಗಳ ಜೊತೆಗೆ, ಬಸ್ ನಿಲ್ದಾಣ ಸುತ್ತಮುತ್ತಲ ರಸ್ತೆಗಳಲ್ಲಿ ನಡೆದಿರುವ ಕಾಮಗಾರಿ, ಸಾಲದಕ್ಕೆ, ಬಡಾವಣೆ ರಸ್ತೆಗಳಲ್ಲಿ ಮುಂದುವರೆಗಿದಿರುವ ರಸ್ತೆ ಅಗೆಯುವ ಕೆಲಸಗಳಿಂದ ನಗರದಲ್ಲಿ ಧೂಳು ದಿನದಿನಕ್ಕೂ ದಟ್ಟವಾಗುತ್ತಿದೆ. ಎಂ.ಜಿ.ರಸ್ತೆ, ಅಶೋಕ ರಸ್ತೆ, ಜನರಲ್ ಕಾರ್ಯಪ್ಪ ರಸ್ತೆ, ಬಿ.ಹೆಚ್.ರಸ್ತೆ ಮುಂತಾದ ವಾಹನ ಸಂಚಾರ ಸಾಂದ್ರತೆ ಹೆಚ್ಚಾಗಿದ್ದು, ಚಲಿಸುವ ವಾಹನಗಳಿಂದಾಗಿ ರಸ್ತೆ ಮೇಲಿನ ಧೂಳು ಮೇಲೇರಿ ಗಾಳಿ ಸೇರುತ್ತದೆ.

    ಮುಂದಿನ ದಿನಗಳಲ್ಲಿ ಈ ಸಮಸ್ಯೆ ಹೆಚ್ಚಾಗಲಿದ್ದು ನಾಗರೀಕರು ಎಚ್ಚರಿಕೆ ಕ್ರಮ ಅನುಸರಿಸಬೇಕಾಗಿದೆ. ಜೊತೆಗೆ ಕಾಮಗಾರಿ ನಿರ್ವಹಿಸುವವರೂ ಧೂಳು ನಿಯಂತ್ರಣಾ ಕ್ರಮ ಕೈಗೊಳ್ಳದಿದ್ದರೆ ತುಮಕೂರು ನಗರ ರೋಗಿಗಳ ಊರಾಗುತ್ತದೆ ಎಂದು ಸದಾಶಿವ ನಗರದ ಲೋಕೇಶ್ ಆತಂಕ ವ್ಯಕ್ತಪಡಿಸಿದ್ದಾರೆ.

    ಬೇಸಿಗೆ ಬಿಸಿಲಿನಿಂದ ಸಹಜವಾಗಿ ಉಂಟಾಗುವ ಆರೋಗ್ಯ ಸಮಸ್ಯೆಗಳ ಜೊತೆಗೆ ತುಮಕೂರು ನಗರದ ನಾಗರೀಕರಿಗೆ ಈ ಬಾರಿ ಧೂಳಿನಿಂದಲೂ ಹೆಚ್ಚು ತೊಂದರೆಯಾಗುತ್ತದೆ. ಧೂಳಿನಿಂದ ಉಸಿರಾಟದ ತೊಂದರೆ, ಉಬ್ಬಸ, ಅಸ್ತಮ, ಅಲರ್ಜಿ, ಕಿವಿ, ಮೂಗು, ಗಂಟಲು ಸಂಬಂಧಿ ಕಾಯಿಲೆಗಳು ಹರಡುತ್ತವೆ. ತುರಿಕೆ, ಚರ್ಮರೋಗ ಕಾಣಿಸುತ್ತವೆ. ಬ್ಯಾಕ್ಟೀರಿಯಾಗಳು ಧೂಳಿನ ಕಾರಣದಿಂದ ಒಬ್ಬರಿಂದ ಒಬ್ಬರಿಗೆ ಬೇಗ ಹರಡುವ ಕಾಯಿಲೆ ತರುವ ಅಪಾಯವಿದೆ. ಹೊರಗೆ ಓಡಾಡುವವರು ಮಿಉಖಕ್ಕೆ ಮಾಸ್ಕ್ ಧರಿಸುವುದು ಉತ್ತಮ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಿಕಾ ಸಲಹೆ ಮಾಡಿದ್ದಾರೆ.

    ಧೂಳಿನಿಂದ ಬ್ಯಾಕ್ಟೀರಿಯಾ ಬೇಗ ಹರಡುತ್ತವೆ. ಧೂಳು ಸೇವನೆ ನಿಯಂತ್ರಣಕ್ಕೆ ಮೂಗಿಗೆ ಮಾಸ್ಕ್ ಧರಿಸಬೇಕು. ಕೈಗಳನ್ನು ಡಿಟರ್ಜೆಂಟಿನಿಂದ ತೊಳೆದುಕೊಳ್ಳಬೇಕು, ಕಾಯ್ದು ಆರಿದ ಅಥವಾ ಫಿಲ್ಟರ್ ನೀರು ಕುಡಿಯಬೇಕು. ತೆರೆದಿಟ್ಟ ಹಣ್ಣು, ಆಹಾರ ಪದಾರ್ಥವನ್ನು ತೊಳೆಯದೆ ತಿನ್ನಬಾರದು. ರಸ್ತೆ ಬದಿಯ ಅಂಗಡಿಗಳಲ್ಲಿ ಧೂಳು ತುಂಬಿರುವ ಆಹಾರ ಪದಾರ್ಥ, ಹಣ್ಣು ತಿನ್ನದಂತೆ ಪೋಷಕರು ಮಕ್ಕಳಿಗೆ ತಿಳುವಳಿಕೆ ನೀಡಬೇಕು ಎಂದು ಹೇಳಿದ್ದಾರೆ.

     ಮನೆ ಹೊರಗೆ ಮಾತ್ರವಲ್ಲದೆ, ಒಳಗೂ ಧೂಳು ನುಗ್ಗಿ ಕಿರಿಕಿರಿ ಉಂಟು ಮಾಡುತ್ತದೆ. ಈ ಧೂಳು ಶ್ವಾಶಕೋಶ ಸೇರಿ ಗಂಭೀರ ಆರೋಗ್ಯ ಸಮಸ್ಯೆ ಉಂಟು ಮಾಡಬಹುದು. ಬೇಸಿಗೆ ಆರಂಭಗೊಂಡಿತೆಂದರೆ ಮಕ್ಕಳಿಂದ ಮುದುಕರವರೆಗೆ ಬಾಧಿಸುವ ಸಾಂಕ್ರಾಮಿಕ ರೋಗಗಳು ಪ್ರತ್ಯಕ್ಷವಾಗಿಬಿಡುತ್ತವೆ. ಇಡೀ ವಾತಾವರಣ ಶುಷ್ಕತೆಯಿಂದ ಕೂಡಿರುವ ಕಾರಣ ಬ್ಯಾಕ್ಟೀರಿಯಾ, ವೈರಸ್ ಹರಡುವ ಕಾಲ. ಬೇಸಿಗೆಯಲ್ಲಿ ರೋಗಾಣುಗಳು ಕ್ರಿಯಾಶೀಲವಾಗಿರುವುದರಿಂದ ಒಬ್ಬರಿಂದ ಒಬ್ಬರಿಗೆ ಬೇಗ ಹರಡುತ್ತವೆ. ಕಾಲರಾ, ಟೈಫಾಯ್ಡ್‍ನಂತಹ ಜ್ವರಗಳು ಹರಡುತ್ತವೆ.

    ಬೇಸಿಗೆಯಲ್ಲಿ ಉಷ್ಣಾಂಶ ಹೆಚ್ಚಾಗಿರುವುದರಿಂದ ಸನ್‍ಸ್ಟ್ರೋಕ್ ಸಾಧ್ಯತೆ ಜಾಸ್ತಿ. ತಲೆ ಸುತ್ತುವುದು, ಮೂಗಿನಲ್ಲಿ ರಕ್ತ ಸೋರುವುದು, ಅತಿಯಾದ ಸೂರ್ಯ ಕಿರಣಗಳಿಂದ ಚಮ್ ರೋಗ ಸಮಸ್ಯೆ ಹೆಚ್ಚು ಎಂದು ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ. ಮೋಹನ್ ದಾಸ್ ಹೇಳಿದರು.

   ಆರೋಗ್ಯ ಸಮಸ್ಯೆ ಕಾಣಿಸಿಕೊಂಡಾಗ ಸಾರ್ವಜನಿಕರು ಆಸ್ಪತ್ರೆಗೆ ಬಂದು ಅಗತ್ಯ ಚಿಕಿತ್ಸೆ, ವೈದ್ಯಕೀಯ ಸಲಹೆ ಪಡೆಯಬೇಕು. ತಮ್ಮ ಮನೆ ಸುತ್ತಮುತ್ತ ಧೂಳು ನಿಯಂತ್ರಣಕ್ಕೆ ನಾಗರೀಕರೂ ಪ್ರಯತ್ನ ಮಾಡಬೇಕು. ಹಸಿರು ಗಿಡ-ಮರಗಳಿರುವ ಉದ್ಯಾನವನಗಳೆಡೆ ನಿತ್ಯಾ ತಿರುಗಾಡಿ ಶುದ್ಧಗಾಳಿ ಕುಡಿಯುವ ಅಭ್ಯಾಸ ಬೆಳೆಸಿಕೊಂಡರೆ ಧೂಳಿನಿಂದಾಗುವ ಆರೋಗ್ಯ ಸಮಸ್ಯೆ ನಿಯಂತ್ರಿಸಬಹುದು ಎಂದು ವೈದ್ಯರು ಸಲಹೆ ಮಾಡಿದ್ದಾರೆ.

   ಬೀದಿ ಬದಿಯ ವ್ಯಾಪಾರಿಗಳು ಆಹಾರ ಪದಾರ್ಥಗಳನ್ನು ಧೂಳಿನಿಂದ ರಕ್ಷಿಸಬೇಕು. ತೆರೆದ ಸ್ಥಿತಿಯಲ್ಲಿ ಪದಾರ್ಥ ಇಡದೆ, ಮುಚ್ಚಿ ಇಟ್ಟು ವ್ಯಾಪಾರ ಮಾಡಬೇಕು. ವ್ಯಾಪಾರಿಗಳು ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಈ ಬಗ್ಗೆ ನಗರ ಪಾಲಿಕೆ ಆಡಳಿತ ವರ್ಗ ಬೀದಿಬದಿ ವ್ಯಾಪಾರಿಗಳಿಗೆ ಕಠಿಣ ಸೂಚನೆ ನೀಡಬೇಕು.ಆಗಿಂದಾಗ್ಯೆ ಇಂತಹ ಅಂಗಡಿಗಳ ಬಳಿ ಭೇಟಿ ನೀಡಿ ಸೂಚನೆ ಪಾಲಿಸುತ್ತಿರುವ ಬಗ್ಗೆ ಪರಿಶೀಲಿಸಬೇಕು, ತಪ್ಪಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಪ್ರಗತಿಯಲ್ಲಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಡಾಂಬರೀಕರಣಗೊಳಿಸಬೇಕು. ವಾಹನ ನಿಬಿಡ ರಸ್ತೆಗಳಿಗೆ ನಿಯಮಿತವಾಗಿ ನೀರು ಹಾಕಿ ಧೂಳು ತಡೆಯಬೇಕು. ಸಾಧ್ಯವಾದರೆ, ಕಾಮಗಾರಿ ನಡೆಯುವ ರಸ್ತೆಗಳಲ್ಲಿ ವಾಹನ ಸಂಚಾರ ಬಂದ್ ಮಾಡಿ ಧೂಳು ನಿಯಂತ್ರಿಸುವ ಪ್ರಯತ್ನ ಮಾಡಬೇಕು ಎಂದು ಮಾರುತಿನಗರದ ಚಂದ್ರಶೇಖರ್ ಅಧಿಕಾರ ವರ್ಗಕ್ಕೆ ಸಲಹೆ ಮಾಡಿದ್ದಾರೆ.ತುಮಕೂರು ನಗರದ ವಾತಾವರಣದಲ್ಲಿ ಧೂಳು ಅಪಾಯಕಾರಿ ಪ್ರಮಾಣದಲ್ಲಿದೆ. ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಜೊತೆಗೆ ಸಂಬಂಧಿಸಿದ ಇಲಾಖೆಗಳೂ ಧೂಳು ನಿಯಂತ್ರಣಕಣಕ್ಕೆ ತುರ್ತಾಗಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ