ಹುಳಿಯಾರು:
ಲಾಕ್‍ಡೌನ್ ಸಡಿಲಗೊಂಡ ಹಿನ್ನೆಲೆಯಲ್ಲಿ ಹುಳಿಯಾರು ಪಟ್ಟಣದಲ್ಲಿ ಬೆಳಗ್ಗೆ ವಾಹನ ಸಂಚಾರ ಹೆಚ್ಚಾದರೆ ಮಧ್ಯಾಹ್ನ ಎಂದಿನಂತೆ ಮಾರುಕಟ್ಟೆ ಖಾಲಿಖಾಲಿಯಾಗಿರುತ್ತದೆ.
ಈ ಹಿಂದೆ ಮಾರ್ನಿಂಗ್ ಮಾರ್ಕೆಟ್, ಹಾಲು, ಹಣ್ಣು, ದಿನಸಿ ಅಂಗಡಿ, ಹೋಟೆಲ್, ಮೆಡಿಕಲ್ ಸ್ಟೋರ್, ಬೇಕರಿಗಳು ಮಾತ್ರ ತೆರೆದು ವ್ಯಾಪಾರ ವಹಿವಾಟು ನಡೆಸುತ್ತಿದ್ದವು. ಈಗ ಲಾಕ್‍ಡೌನ್ ಸಡಿಲಗೊಳಿಸಿದ ಆದೇಶದಂತೆ ಕೆಲವು ಸ್ಟೇಷನರಿ, ಸ್ಟೀಲ್, ಬಳೆ, ಬುಕ್ಸ್ ಸ್ಟಾಲ್, ಟೈಲರ್, ಹೇರ್ ಕಟಿಂಗ್, ಫರ್ನಿಚರ್, ಕೋಳಿ, ಎಲೆಕ್ಟ್ರಿಕ್, ಹಾರ್ಡ್‍ವೇರ್ ಬಟ್ಟೆ, ಜ್ಯೂಯಲರಿ ಸೇರಿದಂತೆ ಮತ್ತಿತರ ಅಗತ್ಯ ವಸ್ತುಗಳ ಅಂಗಡಿಗಳು ತೆರೆಯುತ್ತಿವೆ.
ಆದರೆ ಬಸ್ ಸಂಚಾರ ಇಲ್ಲದಿರುವುದರಿಂದಲೂ, ಆಟೊ, ಮಿನಿ ವಾಹನಗಳು ರಸ್ತೆಗೆ ಇಳಿಯದಿದ್ದರಿಂದಲೂ ಸಡಿಲಿಕೆಯಿಂದ ಹೆಚ್ಚು ಜನ ಸಂಚರಿಸುವ ನಿರೀಕ್ಷೆ ಹುಸಿಯಾಯಿತು. ಗ್ರಾಮೀಣ ಭಾಗದ ಜನರ ಓಡಾಟವೂ ಇಲ್ಲದೇ ಲಾಕ್‍ಡೌನ್ ಮಾಮೂಲಿನಂತಿದ್ದು ಮಧ್ಯಾಹ್ನ 1 ಗಂಟೆ ಹೊತ್ತಿಗೆ ಮಾರುಕಟ್ಟೆ ಬಿಕೋ ಎನ್ನುತ್ತಿದೆ.
ಬೆಳಗ್ಗೆ ಕಾರು ಹಾಗೂ ದ್ವಿಚಕ್ರ ವಾಹನಗಳ ಸಂಚಾರ ಹಾಗೂ ಜನರ ಓಡಾಟ ಸಾಮಾನ್ಯವಾಗಿರುತ್ತದೆ. ಆದರೆ ಮಧ್ಯಾಹ್ನ ಬಿಸಿಲಿನ ಝಳ ಮತ್ತು ಬಹುತೇಕ ಅಂಗಡಿಗಳು ಮುಚ್ಚಿರುವುದರಿಂದ ಜನರ ಓಡಾಟ ಇಲ್ಲದೆ ಪಟ್ಟಣ ಸ್ಥಬ್ಧವಾಗುತ್ತದೆ. ರಸಗೊಬ್ಬರ–ಬೀಜ, ಪಶು ಆಹಾರ, ಔಷಧಿ ಅಂಗಡಿಗಳು ಸೇರಿದಂತೆ ಕೆಲ ಅಂಗಡಿಗಳು ಮಾತ್ರ ಸಂಜೆ 7 ರ ವರೆವಿಗೆ ತೆರೆದು ವ್ಯಾಪಾರ ಮಾಡುತ್ತಿದ್ದರೂ, ಕೆಲ ಗ್ರಾಹಕರು ಮಾತ್ರ ಬಂದು ಹೋಗುವ ದೃಶ್ಯ ಸಾಮಾನ್ಯವಾಗಿದೆ.
ಒಟ್ಟಾರೆ ಲಾಕ್‍ಡೌನ್ ಸಡಿಲಿಕೆಯಿಂದ ಕೆಲವು ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿದ್ದರಿಂದ ಪಟ್ಟಣದ ಹಲವು ವರ್ತಕರು ನಿಟ್ಟುಸಿರು ಬಿಟ್ಟರಾದರೂ, ಮಧ್ಯಾಹ್ನದ ನಂತರ ಜನರ ಓಡಾಟ ಇಲ್ಲದೆ ವ್ಯಾಪಾರವಾಗದೆ ಅಂಗಡಿ ಮಾಲೀಕರಲ್ಲಿ ನಿರಾಸೆ ಮೂಡಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
