ಪಾಕಿಸ್ತಾನದ ಜನಪ್ರಿಯ ನಟಿ ಹುಮೈರಾ ಅಸ್ಗರ್‌ ಅಲಿ ಮೃತದೇಹ ಪತ್ತೆ

ಇಸ್ಲಾಮಾಬಾದ್‌:

    32 ವರ್ಷದ ಪಾಕಿಸ್ತಾನದ ಜನಪ್ರಿಯ ನಟಿ, ಮಾಡೆಲ್‌ ಹುಮೈರಾ ಅಸ್ಗರ್‌ ಅಲಿ  ನಿಗೂಢವಾಗಿ ಮೃತಪಟ್ಟಿದ್ದಾರೆ. ಅವರ ಮೃತದೇಹ ಜು. 8ರಂದು ಕರಾಚಿಯ ಡಿಫೆನ್ಸ್‌ ಹೌಸಿಂಗ್‌ ಅಥಾರಟಿಯ ಫೇಸ್‌ VIರ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿದೆ. ಕೊಳೆತ ಸ್ಥಿತಿಯಲ್ಲಿದ್ದ ಅವರ ಮೃತದೇಹವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ʼʼಹುಮೈರಾ ಸುಮಾರು 2 ವಾರಗಳ ಹಿಂದೆ ಮೃತಪಟ್ಟಿರುವ ಸಾಧ್ಯತೆ ಇದೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹುಮೈರಾ ಹಲವು ಸಮಯಗಳಿಂದ ಬಾಡಿಗೆ ಪಾವತಿಸದ ಹಿನ್ನೆಲೆಯಲ್ಲಿ ಮನೆ ಖಾಲಿ ಮಾಡುವಂತೆ ಮಾಲಕ ಕೋರ್ಟ್‌ ಸಂಪರ್ಕಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಪರಿಶೀಲಿಸಲು ಮುಂದಾದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

   ಹುಮೈರಾ ಕರಾಚಿಯ ಇತ್ತೆಹಾದ್ ಕಮರ್ಶಿಯಲ್‌ನ ಅಪಾರ್ಟ್‌ಮೆಂಟ್‌ ಒಂದರಲ್ಲಿ ವಾಸವಾಗಿದ್ದರು. ಅವರ ಅಕಾಲಿಕ ಮರಣ ಮನರಂಜನ ಕ್ಷೇತ್ರಕ್ಕೆ ಬಹುದೊಡ್ಡ ಆಘಾತ ತಂದಿತ್ತಿದೆ. ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಹುಮೈರಾ ಹಲವು ಸಮಯಗಳಿಂದ ಬಾಡಿಗೆ ಪಾವತಿಸಿರಲಿಲ್ಲ. ಇದರಿಂದ ಬೇಸತ್ತು ಮಾಲಕ ಫ್ಲ್ಯಾಟ್‌ ಖಾಲಿ ಮಾಡಿಸುಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ಹೀಗಾಗಿ ನ್ಯಾಯಾಲಯವು ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡುವಂತೆ ಗಿಜ್ರಿ ಪೊಲೀಸರಿಗೆ ಸೂಚಿಸಿತು. ಅಧಿಕಾರಿಗಳು ಜು. 8ರ ಅಪರಾಹ್ನ 3:15ರ ಸುಮಾರಿಗೆ ಫ್ಲ್ಯಾಟ್‌ಗೆ ಆಗಮಿಸಿದ್ದರು. ಈ ವೇಳೆ ಫ್ಲ್ಯಾಟ್‌ಗೆ ಬೀಗ ಹಾಕಲಾಗಿತ್ತು. ಫ್ಲ್ಯಾಟ್‌ ಒಳಗಿನಿಂದ ಕೆಟ್ಟ ವಾಸನೆ ಬರುತ್ತಿದ್ದ ಕಾರಣ ಪೊಲೀಸರು ಬೀಗ ಒಡೆದು ಒಳ ಪ್ರವೇಶಿಸಿದರು. ಈ ವೇಳೆ ಮೃತದೇಹ ಪತ್ತೆಯಾಗಿದೆ. ಸ್ಥಳದಲ್ಲಿ ಯಾವುದೇ ದುಷ್ಕೃತ್ಯ ನಡೆದ ಲಕ್ಷಣಗಳು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

   ಸದ್ಯ ಫೊರೆನ್ಸಿಕ್‌ ತಜ್ಞರು ಸ್ಥಳಕ್ಕೆ ಧಾವಿಸಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ. ಹುಮೈರಾ ಅವರ ದೇಹವನ್ನು ಹೆಚ್ಚಿನ ಪರೀಕ್ಷೆಗಾಗಿ ಜಿನ್ನಾ ಸ್ನಾತಕೋತ್ತರ ವೈದ್ಯಕೀಯ ಕೇಂದ್ರಕ್ಕೆ  ಕೊಂಡೊಯ್ಯಲಾಗಿದೆ. ʼʼಸಾವಿಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಇದಕ್ಕಾಗಿ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆʼʼ ಎಂದು ಮೂಲಗಳು ತಿಳಿಸಿವೆ. 

   ಹುಮೈರಾ ಅಸ್ಗರ್‌ ಅಲಿ ನಟಿ, ಮಾಡೆಲ್‌ ಮತ್ತು ರಿಯಾಲಿಟಿ ಶೋ ಕಲಾವಿದೆ. ಲಾಹೋರ್‌ನಲ್ಲಿ ಜನಿಸಿದ ಇವರು ಮಾಡೆಲ್‌ ಆಗಿ 2013ರಲ್ಲಿ ಬಣ್ಣದ ಲೋಕ್ಕೆ ಕಾಲಿಟ್ಟರು. ಬಳಿಕ ಕಿರುತೆರೆ ಪ್ರವೇಸಿಸಿದರು. ʼಲಾಲಿʼ, ʼಬೆನಾಮ್‌ʼ, ʼಚಲ್‌ ದಿಲ್‌ ಮೇರೆʼ ಮತ್ತು ʼಸಿರಾತ್-ಎ-ಮುಸ್ತಕೀಮ್ʼ ಮುಂತಾದ ಶೋ ಮೂಲಕ ಜನಪ್ರಿಯರಾದರು.

   2015ರಲ್ಲಿ ತೆರೆಕಂಡ ʼಜಲೈಬೀʼ ಚಿತ್ರದ ಮೂಲಕ ಹಿರಿತೆರೆ ಪ್ರವೇಶಿಸಿದರು. 2021ರಲ್ಲಿ ರಿಲೀಸ್‌ ಆದ ʼಲವ್‌ ವಾಕ್ಸಿನ್‌ʼ ಸಿನಿಮಾದ ಬಳಿಕ ಅವರು ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. 2022ರ ಪಾಕಿಸ್ತಾನಿ ರಿಯಾಲಿಟಿ ಶೋ ʼತಮಾಷಾ ಘರ್‌ʼ ಅವರಿಗೆ ಸಾಕಷ್ಟು ಪ್ರಸಿದ್ಧಿ ತಂದುಕೊಟ್ಟಿದೆ. 2023ರಲ್ಲಿ ಅವರಿಗೆ ರಾಷ್ಟ್ರೀಯ ಮಹಿಳಾ ನಾಯಕತ್ವ ಪ್ರಶಸ್ತಿಯನ್ನು ನೀಡಲಾಗಿದೆ. ಸದ್ಯ ಅವರ ಸಾವು ನಿಗೂಢವಾಗಿದ್ದು, ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ.

Recent Articles

spot_img

Related Stories

Share via
Copy link