ಬೆಂಗಳೂರು:
ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ಕೊಡಲು ನಾನು ಸಿದ್ದ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿರುವ ಅವರು ಕೋರ್ಟ್ ಆದೇಶ ಬಂದ ಮೇಲೆ ಸಿಎಂ ಸೈಟ್ ವಾಪಸ್ ಮಾಡಿದ್ದಾರೆ. ಭಯದಿಂದ ಮುಡಾ ಸೈಟ್ ವಾಪಸ್ ಕೊಟ್ಟಿದ್ದಾರೆ, ಕಾಂಗ್ರೆಸ್ನವರು ನೈತಿಕತೆ ಇದ್ಯಾ ಅಂತಾ ನನಗೆ ಪ್ರಶ್ನೆ ಮಾಡಿದ್ದಾರೆ. ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ಕೊಡಲು ನಾನು ರೆಡಿ ಇದ್ದೇನೆ.
ಸಿದ್ದರಾಮಯ್ಯ ರಾಜೀನಾಮೆ ಕೊಡಲು ರೆಡಿ ಇದ್ದಾರಾ. ಕಾಂಗ್ರೆಸ್ ಸರ್ಕಾರದ ನಾಲ್ವರು ಸಚಿವರು ನನ್ನ ಬಗ್ಗೆ ಕಳಂಕ ಸೃಷ್ಟಿಸಲು ಹಳೆಯ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ಇದರಲ್ಲಿ ನೈತಿಕತೆಯ ಪ್ರಶ್ನೆ ಎತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಡಾ ಹಗರಣದಲ್ಲಿ ಅರಿಶಿನ-ಕುಂಕುಮದ ಮೂಲಕ ಭೂಮಿ ಬಂದಿದೆ. ಆದರೆ ನಾನು ಹಣ ಕೊಟ್ಟು ಭೂಮಿ ಖರೀದಿ ಮಾಡಿದ್ದೇನೆ ಎಂದರು. ನಾನು 24 ಗಂಟೆ ಗಡುವು ನೀಡುತ್ತೇನೆ.
ನೈತಿಕತೆಯ ಆಧಾರದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ. ಸಚಿವ ಸಂಪುಟದ ಎಲ್ಲ ಸಚಿವರು ಮುಖ್ಯಮಂತ್ರಿಗಾಗಿ ಪ್ರಾಣಕ್ಕೆ ಪ್ರಾಣ ಕೊಡುತ್ತೇವೆ, ಬಂಡೆಯಂತೆ ನಿಂತಿದ್ದೇವೆ ಎಂದು ಹೇಳಿದ್ದಾರೆ. ಆಂಜನೇಯ ಎದೆ ಬಗೆದು ಶ್ರೀರಾಮನನ್ನು ತೋರಿಸಿದಂತೆ ನಮ್ಮ ಎದೆಯಲ್ಲೂ ಸಿದ್ದರಾಮಯ್ಯ ಇದ್ದಾರೆ ಎಂಬಂತೆ ಈ ಸಚಿವರು ಹೇಳಿದ್ದಾರೆ. ಈಗ ಎಲ್ಲ ಸಚಿವರಿಗೆ ರಾಜೀನಾಮೆ ಕೊಡುವ ಅವಕಾಶವಿದೆ. ಮೊದಲು ಈ ನಾಲ್ಕು ಸಚಿವರು ಸಿದ್ದರಾಮಯ್ಯನವರಿಗಾಗಿ ರಾಜೀನಾಮೆ ನೀಡಲಿ. ಈ ಮೂಲಕ ಅವರ ಎದೆಯಲ್ಲಿ ಸಿದ್ದರಾಮಯ್ಯ ಇದ್ದಾರೆಯೇ? ಡಿ.ಕೆ.ಶಿವಕುಮಾರ್ ಅಥವಾ ಮಲ್ಲಿಕಾರ್ಜುನ ಖರ್ಗೆ ಇದ್ದಾರೆಯೇ ಎಂದು ಗೊತ್ತಾಗಲಿ. ಅವರೆಲ್ಲರೂ ರಾಜೀನಾಮೆ ನೀಡುವುದಾದರೆ ನಾನು ಕೂಡ ರಾಜೀನಾಮೆ ನೀಡುತ್ತೇನೆ ಎಂದರು.