ಬೆಂಗಳೂರು:
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿ ಆಗಿರುವ ನಟ ದರ್ಶನ್ ಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. 6 ತಿಂಗಳ ಬಳಿಕ ಕೊಲೆ ಪ್ರಕರಣದ ಎಲ್ಲಾ 7 ಆರೋಪಿಗಳಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದ್ದು ದರ್ಶನ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.
ದರ್ಶನ್ ಜಾಮೀನು ಕುರಿತು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ ಪ್ರಕಾಶ್ ರಾಜ್, ನಾನು ಇಲ್ಲಿಗೆ ಮಕ್ಕಳ ಬಗ್ಗೆ ಮಾತನಾಡಲು ಬಂದಿದ್ದೇನೆ. ನಾನು ಮಕ್ಕಳ ಬಗ್ಗೆ ಮಾತನಾಡುತ್ತೇನೆ ಹೊರತು ಕಳ್ಳನನ್ನ ಮಕ್ಕಳ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದರು.
ಮೈಸೂರಿನಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ಪ್ರಕಾಶ್ ರಾಜ್, ನಾನು ಖಾಸಗಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಚೆನ್ನೈನಿಂದ ಮೈಸೂರಿಗೆ ಬಂದಿದ್ದೇನೆ. ನಾನು ಸಿನಿಮಾ ಹಾಗೂ ರಾಜಕೀಯದ ಬಗ್ಗೆ ಮಾತನಾಡಲ್ಲ ನಾನು ನನ್ನ ಮಕ್ಕಳ ಬಗ್ಗೆ ಮಾತನಾಡಲು ಬಂದಿದ್ದೇನೆ ಎಂದರು.
ಘಟನೆ ನಡೆದ 6 ತಿಂಗಳ ಬಳಿಕ ದರ್ಶನ್ ಗೆ ಜಾಮೀನು ಮಂಜೂರಾಗಿದೆ. ಇತ್ತೀಚೆಗೆ ದರ್ಶನ್ ಗೆ ಬೆನ್ನುನೋವು ಇದ್ದ ಕಾರಣ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ಕಾರಣಗಳಿಗಾಗಿ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿತ್ತು.
ಶಸ್ತ್ರಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ಪಡೆದು ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದ ನಟ ದರ್ಶನ್ ಗೆ ಈಗ ಜಾಮೀನು ದೊರೆತಿರುವ ಹಿನ್ನೆಲೆಯಲ್ಲಿ, ಅವರು ಶಸ್ತ್ರಚಿಕಿತ್ಸೆಗೆ ಒಳಗಾಗುವುದು ಅನುಮಾನ, ಫಿಸಿಯೋಥೆರೆಪಿ ಚಿಕಿತ್ಸೆಯನ್ನೇ ಮುಂದುವರೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.
