ಚನ್ನಪಟ್ಟಣ:
ನನಗೆ ರಾಜಕಾರಣದ ಮೇಲೆ ಒಲವಿಲ್ಲ. ಕಳೆದ ಬಾರಿಯೂ ನನಗೆ ಚುನಾವಣೆ ಎದುರಿಸುವ ಆಸಕ್ತಿ ಇರಲಿಲ್ಲ. ಆದರೆ, ಕಾರ್ಯಕರ್ತರ ಒತ್ತಾಸೆಯಿಂದ ರಾಜಕಾರಣದಲ್ಲಿದ್ದೇನೆ ಎಂದು ಮಾಜಿ ಸಿ ಎಂ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ರಾಷ್ಟ್ರ ರಾಜಕಾರಣದ ಸ್ಪರ್ಧೆ ಬಗ್ಗೆ ವಿಚಾರವಾಗಿ ಚನ್ನಪಟ್ಟಣದಲ್ಲಿ ಪ್ರತಿಕ್ರಿಯಿಸಿದ ಅವರು, ನನಗೆ ರಾಜಕಾರಣದ ಮೇಲೆ ಒಲವಿಲ್ಲ. ಕಳೆದ ಬಾರಿಯೂ ನನಗೆ ಚುನಾವಣೆ ಎದುರಿಸುವ ಆಸಕ್ತಿ ಇರಲಿಲ್ಲ. ಆದರೆ, ಕಾರ್ಯಕರ್ತರ ಒತ್ತಾಸೆಯಿಂದ ರಾಜಕಾರಣದಲ್ಲಿದ್ದೇನೆ. ನನ್ನದು ಬಿಡಿ ಹಾಲಿ ಸಂಸದರ ಕಥೆ ಕೇಳಿ. ಭ್ರಷ್ಟಾಚಾರದ ಮಧ್ಯೆ ಚುನಾವಣೆ ಬೇಡ ಅಂತಿದ್ದಾರೆ. ಅಂತವರೇ ಚುನಾವಣೆ ಬೇಡ ಅಂತ ಹೇಳುತ್ತಿರುವಾಗ ನಮ್ದೆಲ್ಲಾ ಯಾವ ಲೆಕ್ಕ ಎಂದು ಹೇಳಿದರು. ಈ ಮೂಲಕ ರಾಜಕಾರಣ ಸಾಕಾಗಿದೆ ಎಂದಿದ್ದ ಸಂಸದ ಡಿಕೆ ಸುರೇಶ್‌ಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಲೋಕಸಭಾ ಚುನಾವಣಾ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಚರ್ಚೆ ವಿಚಾರದ ಬಗ್ಗೆ ಮಾತನಾಡಿ, ರಾಜಕಾರಣದಲ್ಲಿ ಊಹಾಪೋಹ ಮಾಮೂಲಿ. ಇದೆಲ್ಲಾ ಗಾಳಿ ಸುದ್ದಿ, ಆ ರೀತಿಯ ಯಾವುದೇ ಚರ್ಚೆ ಆಗಿಲ್ಲ. ಈ ವಿಚಾರವನ್ನು ನನ್ನ ಮುಂದೆ ಯಾರೂ ಪ್ರಸ್ತಾಪ ಮಾಡಿಲ್ಲ. ಲೋಕಸಭಾ ಚುನಾವಣೆ ಬಗ್ಗೆ ನಾನು ಜಿಲ್ಲಾವಾರು ಸಭೆ ಮಾಡಿದ್ದೇನೆ. ಗೆದ್ದವರು, ಸೋತವರ ಜೊತೆ ಮಾತನಾಡಿದ್ದೇನೆ. ಯಾವ ರೀತಿ ಚುನಾವಣೆ ಎದುರಿಸಬೇಕು ಎಂಬುದರ ಕುರಿತು ರೂಪುರೇಷೆ ಸಿದ್ಧ ಮಾಡ್ತಿದ್ದೇವೆ ಎಂದು ತಿಳಿಸಿದರು.
40% ಕಮಿಷನ್ ಬಗ್ಗೆ ಆರೋಪಿಸಿದ್ರಲ್ಲ ಯಾಕೆ ಲೋಕಾಯುಕ್ತಕ್ಕೆ ದೂರು ಕೊಡಲಿಲ್ಲ. ಈಗ ಅಧಿಕಾರದಲ್ಲಿದ್ದೀರಲ್ಲಾ ಅದರ ಬಗ್ಗೆ ತನಿಖೆ ಮಾಡಿಸಿ ಎಂದರು. ಅಕ್ರಮದ ಬಗ್ಗೆ ತನಿಖೆ ಮಾಡ್ತೀವಿ ಅಂತ ಹೇಳ್ತಿದ್ದಾರೆ. ಎಷ್ಟರಮಟ್ಟಿಗೆ ತನಿಖೆ ಮಾಡ್ತಾರೋ ನೋಡೊಣ. ಅವರೇ ಅಧಿಕಾರದಲ್ಲಿದ್ದಾರೆ. ತನಿಖೆ ಮಾಡಲಿ ಯಾರು ಬೇಡ ಅಂತಾರೆ ಎಂದು ಕಿಡಿಕಾರಿದರು.
