ನೀರಾವರಿಗೆ ಶ್ರಮ ವಹಿಸಿದ್ದೇನೆ : ಸಚಿವ ಜೆ.ಸಿ.ಮಾಧುಸ್ವಾಮಿ

ಚಿಕ್ಕನಾಯಕನಹಳ್ಳಿ:

                     ನುಡಿದಂತೆ ನಡೆದು ನನ್ನ ಮಾತನ್ನು ಉಳಿಸಿಕೊಂಡಿದ್ದೇನೆ, ಕ್ಷೇತ್ರದ ನೀರಾವರಿ ಯೋಜನೆಗಳಿಗೆ ಶ್ರಮ ವಹಿಸಿ ಕೆಲಸ ಮಾಡಿದ್ದೇನೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ತಾಲ್ಲೂಕಿನ ಜೆ.ಸಿ.ಪುರದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ 250 ಕೋಟಿ ರೂ. ವೆಚ್ಚದಲ್ಲಿ ತಾಲ್ಲೂಕಿನ 121 ಕೆರೆಗಳಿಗೆ ಎತ್ತಿನಹೊಳೆ ಯೋಜನೆ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಗಟ್ಟಿಗ ಮಾಧುಸ್ವಾಮಿ ಕಣ್ಣೀರು :

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸುವ ಎತ್ತಿನಹೊಳೆ ಯೋಜನೆ ಕನಸು ಸಾಕಾರಗೊಂಡ ಹಿನ್ನೆಲೆಯಲ್ಲಿ ಸಚಿವ ಮಾಧುಸ್ವಾಮಿ ಧನ್ಯತಾಭಾವದಿಂದ ಕಣ್ಣೀರುಹಾಕಿ ಗದ್ಗದಿತರಾದರು. ಸ್ವಗ್ರಾಮ ಜೆ.ಸಿ.ಪುರದಲ್ಲಿ 121 ಕೆರೆಗಳಿಗೆ ನೀರುಹರಿಸುವ 250 ಕೋಟಿ ರೂ. ಕಾಮಗಾರಿಗೆ ಚಾಲನೆ ಕೊಟ್ಟು ಮಾತನಾಡುತ್ತಾ, ಮೊನ್ನೆ ದಿನ ದಾರಿಯಲ್ಲಿ ಒಂದು ಅಜ್ಜಿ ಸಿಕ್ಕಿ “ಏನಪ್ಪಾ ನಿನ್ನ ಬಾಯಲ್ಲಿ ಎಲ್ಲಾ ಕೆರೆ ತುಂಬಿಸ್ತಿನಿ ಅಂತಾ ಮಾತು ಬಂದಿತ್ತು. ಮಳೆನೇ ಬಂದು ಎಲ್ಲಾ ಕೆರೆನೆ ತುಂಬಿ ಹೋಯ್ತು” ಅಂದಳು. ಆ ಮಹಾತಾಯಿ ಹಾರೈಕೆ ಕಂಡು ನನ್ನ ಮನಸ್ಸು ತುಂಬಿ ಬಂತು.

ನಾನು ಕ್ಷೇತ್ರದ ಜನತೆಗೆ ಕೊಟ್ಟ ಮಾತನ್ನು ನೆರವೇರಿಸಿ ನಾಲಿಗೆ ಉಳಿಸಿಕೊಳ್ಳಬೇಕು ಎಂದರೆ ಎತ್ತಿನಹೊಳೆಯಿಂದ ಕೆರೆಗಳಿಗೆ ನೀರನ್ನು ಹರಿಸಬೇಕು ತಾಯಿ ಎಂದಿದ್ದೆ. ಆ ಕನಸು ಇಂದು ನೆರವೇರಿಸಿದೆ ಎಂದು ನೆನಪಿಸಿಕೊಂಡು ಮಾಧುಸ್ವಾಮಿ ಭಾವುಕರಾದರು. ಎತ್ತಿನಹೊಳೆ ಯೋಜನೆಯಿಂದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 131 ಕೆರೆಗಳಿಗೆ 0.98 ಟಿಎಮ್‍ಸಿ ನೀರನ್ನು ಹರಿಸಲಾಗುವುದು. ಮುಂದಿನ ಒಂದು ವರ್ಷದಲ್ಲಿ ಈ ಯೋಜನೆ ಪೂರ್ಣಗೊಂಡು ನೀರು ಹರಿಸವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಸಚಿವರು.

ನನ್ನ ಮಾತು ಉಳಿಸಿಕೊಂಡಿದ್ದೇನೆ :

ಚುನಾವಣೆಯಲ್ಲಿ ನಾನು ಮಾತು ಕೊಟ್ಟಂತೆ, ತಾಲ್ಲೂಕನ್ನು ನೀರಾವರಿಯನ್ನಾಗಿ ಮಾಡುವುದಾಗಿ ಹೇಳಿದ್ದೆ, 12 ವರ್ಷ ನೆನೆಗುದಿಗೆ ಬಿದ್ದಿದ್ದ ಹೇಮಾವತಿ ನೀರಾವರಿ ಯೋಜನೆಯನ್ನು ಮೊದಲ ಹಂತದಲ್ಲಿ ಸಾಸಲು ಕೆರೆಗೆ ಹರಿಸಲಾಗಿದೆ. ಎರಡನೇ ಹಂತದಲ್ಲಿ ದಬ್ಬೆಘಟ್ಟ ಹಾಗೂ ಚಿಕ್ಕನಾಯಕನಹಳ್ಳಿ ಕೆರೆಗೆ ಮುಂದಿನ ಆರು ತಿಂಗಳಲ್ಲಿ ನಾಲೆ ತೆಗೆಯುವ ಕಾರ್ಯವನ್ನು ಪೂರೈಸಿ ನೀರನ್ನು ಹರಿಸಲಾಗುವುದು, ನಂತರ ಹಾಲ್ಕುರಿಕೆ ಭಾಗಕ್ಕೂ ಕಾಮಗಾರಿಯನ್ನು ಪೂರೈಸಲಾಗುವುದು ಎಂದು ಮಾಧುಸ್ವಾಮಿ ತಿಳಿಸಿದರು.

250 ಕೋಟಿ ರೂ. ಯೋಜನೆ :

ಸಣ್ಣ ನೀರಾವರಿ ಇಲಾಖೆಯಿಂದ 250 ಕೋಟಿ ರೂ. ಯೋಜನೆಯಲ್ಲಿ ಜೆ.ಸಿ.ಪುರದಿಂದ ತಾಲ್ಲೂಕಿನ ಗಡಿ ಕಾಮಲಾಪುರದವರೆಗೂ 72 ಕೆರೆಗಳಿಗೆ ಪೈಪ್‍ಲೈನ್ ಮುಖಾಂತರ ನೀರನ್ನು ಹರಿಸಲಾಗುವುದು. ಸಿಂಗದಹಳ್ಳಿ ಕೆರೆಯ ಮುಖಾಂತರ ಹಾಗೂ ನಾಗತಿಕೆರೆ, ಕಂದಿಕೆರೆ ಹೋಬಳಿ ಹಾಗೂ ಹಂದನಕೆರೆ ಹೋಬಳಿಯ ಕೆರೆಗಳಿಗೆ ನೀರನ್ನು ಹರಿಸಲು ಪೈಪ್‍ಲೈನ್ ಮಾಡಲಾಗುವುದು ಎಂದರು.

ಚುರುಕಾದ ಭದ್ರಾಮೇಲ್ದಂಡೆ ಕಾಮಗಾರಿ :

ಭದ್ರಾಮೇಲ್ದಂಡೆ ಯೋಜನೆಯ ಕಾಮಗಾರಿ ಚುರುಕಾಗಿ ನಡೆಯುತ್ತಿದ್ದು, ಹುಳಿಯಾರು, ಬೋರನಕಣಿವೆ, ಬುಕ್ಕಾಪಟ್ಟಣದ ಸುತ್ತಮುತ್ತಲಿನ ಪ್ರದೇಶಗಳ ಕೆರೆಗಳನ್ನು ತುಂಬಿಸುವ ಕಾರ್ಯ ಮಾಡಲಿದ್ದು ಶಿರಾ ಹಾಗೂ ಮದಲೂರಿನ ಕೆರೆಗೂ ನೀರನ್ನು ಹರಿಸಲಾಗುವುದು ಹಾಗೂ ಎತ್ತಿನಹೊಳೆ ಯೋಜನೆಯಲ್ಲಿ ಸಿಂಗದಹಳ್ಳಿ ಕೆರೆಯಿಂದ ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಭಾಗಕ್ಕೂ ಏತ ನೀರಾವರಿ ಯೋಜನೆ ಅಡಿಯಲ್ಲಿ ಹರಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಇಲಾಖೆಯ ಸೂಪರಿಟೆಂಡೆಂಟ್ ಇಂಜನಿಯರ್ ನಾಗರಾಜು, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಶಂಕರಲಿಂಗಪ್ಪ, ಹುಳಿಯಾರು ಪಪಂ ಅಧ್ಯಕ್ಷ ಕಿರಣ್‍ಕುಮಾರ್, ತಾ.ಪಂ.ಮಾಜಿ ಸದಸ್ಯರಾದ ನಿರಂಜನ್‍ಮೂರ್ತಿ, ಕೇಶವಮೂರ್ತಿ, ಮುಖಂಡ ಸಾಸಲು ದಿನೇಶ್, ಕೆಂಕೆರೆ ನವೀನ್, ಬರಗೂರು ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.

ಬಿ.ಎಸ್.ಯಡಿಯೂರಪ್ಪನವರು ನನಗೆ ವೈದ್ಯಕೀಯ ಖಾತೆಯನ್ನು ನೀಡಲು ಮುಂದಾದರು, ನನಗೆ ವೈದ್ಯಕೀಯ ಖಾತೆಗಿಂತ ಸಣ್ಣ ನೀರಾವರಿ ಖಾತೆಯೇ ಬೇಕೆಂದು ಹಠಮಾಡಿ ಪಡೆದು ನನ್ನನ್ನು ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಿದ ನನ್ನ ಕ್ಷೇತ್ರದ ಜನತೆಯ ಋಣ ತೀರಿಸಲು ಶ್ರಮಿಸುತ್ತಿದ್ದೇನೆ.

-ಜೆ.ಸಿ.ಮಾಧುಸ್ವಾಮಿ, ಸಚಿವರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link