ಬೆಂಗಳೂರು:
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಮಾಜಿ ಸಂಸದ ಡಿಕೆ ಸುರೇಶ್ ಅವರು ಸೋಮವಾರ ಹೇಳಿದ್ದಾರೆ.
ಕೆಪಿಸಿಸಿ ಮುಖ್ಯಸ್ಥ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ಸಹೋದರ ಸುರೇಶ್ ಅವರು ಬೆಂಗಳೂರು ಗ್ರಾಮಾಂತರದಿಂದ ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಅಳಿಯ ಎನ್‌ಡಿಎ ಅಭ್ಯರ್ಥಿ ಡಾ ಸಿಎನ್ ಮಂಜುನಾಥ್ ವಿರುದ್ಧ ಸ್ಪರ್ಧೆಗಿಳಿದು ಸೋಲು ಕಂಡಿದ್ದರು.
ಚನ್ನಪಟ್ಟಣ ಕ್ಷೇತ್ರದ ಹಾಲಿ ಶಾಸಕರಾಗಿರುವ ರಾಜ್ಯ ಜೆಡಿಎಸ್ ಮುಖ್ಯಸ್ಥ ಎಚ್‌ಡಿ ಕುಮಾರಸ್ವಾಮಿ ಅವರು ಮಂಡ್ಯದಿಂದ ಲೋಕಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಇದೀಗ ಮೋದಿ ಸಂಪುಟದಲ್ಲಿ ಸಚಿವರಾಗಿರುವ ಕುಮಾರಸ್ವಾಮಿ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಹೀಗಾಗಿ ಚನ್ನಪಟ್ಟಣದಲ್ಲಿ ಉಪಚುನಾವಣೆ ಎದುರಾಗಲಿದೆ.
ಈ ಹಿನ್ನೆಲೆಯಲ್ಲಿ ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಅವರು, ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಆದರೆ, ಕಾಂಗ್ರೆಸ್‌ನಿಂದ ಅಭ್ಯರ್ಥಿಯೊಬ್ಬರು ಕಣಕ್ಕಿಳಿಯಲಿದ್ದು, ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಲಿದ್ದಾರೆ. ನಾನೇ ನನಗೆ ದೊಡ್ಡ ಶತ್ರು. ಚುನಾವಣಾ ರಾಜಕೀಯದಿಂದ ಬ್ರೇಕ್ ಬೇಕೆಂದು ಬಯಸಿದ್ದೆ. ಈಗ ಅದು ಸಿಕ್ಕಿದೆ. ಜಾತಿ, ಧರ್ಮ, ಭಾವನಾತ್ಮಕ ವಿಚಾರಗಳು ಮತ್ತು ಅಸೂಯೆ ನನ್ನ ಸೋಲಿಗೆ ಕಾರಣವಾಗಿತ್ತು. ನಾನೀಗ ಸಾಮಾನ್ಯ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆಂದು ಹೇಳಿದರು.
ನನಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಇಷ್ಟವಿರಲಿಲ್ಲ. ಪಕ್ಷವು ಒತ್ತಾಯಿಸಿತ್ತು. ನನ್ನ ವಿರೋಧಿಗಳು ನನ್ನನ್ನು ಸೋಲಿಸಿದ್ದಾರೆಂದು ಭಾವಿಸಿದರೆ, ಅವರು ಭ್ರಮೆಯಲ್ಲಿ ಬದುಕುತ್ತಿದ್ದಾರೆ ಎಂದೇ ಅರ್ಥ. ನಾನು ನನ್ನ ಕಾರ್ಯಕರ್ತರೊಂದಿಗೆ ಇದ್ದೇನೆ. ನಾನು ವೈಯಕ್ತಿಕವಾಗಿ ಯಾರಿಗೂ ತೊಂದರೆ ಮಾಡಿಲ್ಲ. ನನ್ನ ಕ್ರಮದಿಂದ ಯಾರಿಗಾದರೂ ನೋವಾಗಿದ್ದರೆ, ನಾನು ಕ್ಷಮೆಯಾಚಿಸುತ್ತೇನೆಂದು ತಿಳಿಸಿದರು.