ಪಾಟ್ನಾ:
ಇತ್ತೀಚೆಗಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಂ ಮತ್ತು ಯಾದವ ಸಮುದಾಯದ ಜನರು ನನಗೆ ಮತ ಹಾಕದ ಕಾರಣ ಅವರ ನೆರವಿನ ಮನವಿಯನ್ನು ಸ್ವೀಕರಿಸುವುದಿಲ್ಲ ಎಂದು ಜೆಡಿಯು ಸಂಸದ ದೇವೇಶ್ ಚಂದ್ರ ಠಾಕೂರ್ ಸೋಮವಾರ ಹೇಳುವ ಮೂಲಕ ದೊಡ್ಡ ವಿವಾದಕ್ಕೆ ಕಾರಣರಾಗಿದ್ದಾರೆ.
ಜೆಡಿಯು ನಾಯಕನಾಗಿ ಈ ಎರಡು ಸಮುದಾಯಗಳ ಜನರಿಗೆ ನೆರವು ಮಾಡಿದ್ದೇನೆ. ಆದರೆ, ಚುನಾವಣೆಯಲ್ಲಿ ಮತದಾನದ ವಿಷಯ ಬಂದಾಗ ಬಿಜೆಪಿ ಜೊತೆಗಿನ ಮೈತ್ರಿಯಿಂದಾಗಿ ಆ ಸಮುದಾಯಗಳ ಜನರು ನನಗೆ ಮತ ನೀಡಿಲ್ಲ ಸೀತಾಮರ್ಹಿ ಕ್ಷೇತ್ರದಲ್ಲಿ ಆರ್ ಜೆಡಿ ಅಭ್ಯರ್ಥಿ ಅರ್ಜುನ್ ರೇ ವಿರುದ್ಧ 51,000 ಅಂತರದಿಂದ ಗೆದ್ದಿರುವ ದೇವೇಶ್ ಚಂದ್ರ ಠಾಕೂರ್ ಹೇಳಿದ್ದಾರೆ.
ಈ ಸಮುದಾಯಗಳ ಜನರು ನನ್ನ ನೋಡಲು ಬರಬಹುದು. ಚಹಾ ಮತ್ತು ತಿಂಡಿಗಳನ್ನು ಸೇವಿಸಿ ನಂತರ ಹೋಗಬಹುದು, ಆದರೆ ಯಾವುದೇ ಸಹಾಯವನ್ನು ನಿರೀಕ್ಷಿಸಬೇಡಿ. ಜೆಡಿಯು ಚಿಹ್ನೆಯಲ್ಲಿ ಮೋದಿ ಚಿತ್ರವನ್ನು ನೋಡಿದಾಗ ನಿಮ್ಮ ಮುಖದಲ್ಲಿ ನಾನೇಕೆ ಆರ್ ಜೆಡಿ ಚಿಹ್ನೆ, ಲಾಲು ಪ್ರಸಾದ್ ಯಾದವ್ ಅವರ ಮುಖವನ್ನು ನೋಡಬಾರದು? ಎಂದು ಅವರು ಪ್ರಶ್ನಿಸಿದ್ದಾರೆ.
ಕ್ಷೇತ್ರದ ಜನರಿಗೆ ಧನ್ಯವಾದ ಹೇಳುವಾಗ ಹೀಗೆ ಹೇಳಿರುವ ಠಾಕೂರ್, ಸಮಾಜಕ್ಕೆ ಸಂಬಂಧಿಸಿದ ಯಾವುದೇ ಕೆಲಸಕ್ಕಾಗಿ, ಅವರಿಗೆ ಸ್ವಾಗತ. ಆದರೆ ಯಾವುದೇ ವೈಯಕ್ತಿಕ ಕೆಲಸಗಳಿಗೆ ಅಲ್ಲ ಎಂದಿದ್ದಾರೆ. ಸೀತಾಮರ್ಹಿ ಕ್ಷೇತ್ರದಲ್ಲಿ ತಮಗೆ ದೊರೆತ ಮತ ಹಂಚಿಕೆಯಲ್ಲಿ ಕುಸಿತದ ಬಗ್ಗೆ ನಿರಾಸೆಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.