ನ್ಯಾಯ ಸಿಗುವವರೆಗೂ ನಾನು ಹೋರಾಟ ನಿಲ್ಲಿಸಲ್ಲ : ರೇಣುಕಸ್ವಾಮಿ ಹೆಂಡತಿ

ಚಿತ್ರದುರ್ಗ:

     ಕನ್ನಡದ ಖ್ಯಾತ ನಟ ದರ್ಶನ್‌ ಅಂಡ್ ಗ್ಯಾಂಗ್ ನಿಂದ ಹತ್ಯೆಗೀಡಾಗಿದ್ದಾರೆ ಎಂದು ಹೇಳಲಾಗುತ್ತಿರುವ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪತ್ನಿ ಸಹನಾ ತಮ್ಮ ಪತಿಯ ಸಾವಿಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ.

    ನನ್ನ ಪತಿಯ ಸಾವಿಗೆ ನ್ಯಾಯ ಸಿಗುವವರೆಗೂ ಹೋರಾಟ ನಡೆಸುತ್ತೇನೆ ಎಂದು ನಿನ್ನೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುವ ವೇಳೆ ಹೇಳಿದ್ದಾರೆ. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಪತ್ರಿಕೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಪತಿಯ ಸಾವು ನನಗೆ ಆಘಾತವನ್ನುಂಟು ಮಾಡಿದೆ. ನಾನು ಈಗ 5 ತಿಂಗಳ ಗರ್ಭಿಣಿ, ನನಗೆ ಹುಟ್ಟುವ ಮಗುವನ್ನು ಯಾರು ನೋಡಿಕೊಳ್ಳುತ್ತಾರೆ, ನನಗೆ ಹುಟ್ಟಿದ ಮಗುವಿಗೆ ತಂದೆ ಯಾರು ಎಂದು ಕೇಳಿದರೆ ಯಾರನ್ನು ನಾನು ತೋರಿಸಬೇಕು ಎಂದು ಅಳುತ್ತಿದ್ದಾರೆ. 

    ರೇಣುಕಾಸ್ವಾಮಿ ವೀರಶೈವ ಲಿಂಗಾಯತ ಕುಟುಂಬಕ್ಕೆ ಸೇರಿದವರಾಗಿದ್ದು, ವೀರಶೈವ ಲಿಂಗಾಯತರು ಚಿತ್ರದುರ್ಗದಲ್ಲಿ ಸಮಾನ ಮನಸ್ಕರು ಮತ್ತು ಸಂಘಟನೆಗಳೊಂದಿಗೆ ಪ್ರತಿಭಟನೆ ನಡೆಸಿ ರೇಣುಕಾಸ್ವಾಮಿ ಹತ್ಯೆಯಲ್ಲಿ ಭಾಗಿಯಾದ ನಟ ದರ್ಶನ್ ಹಾಗೂ ಇತರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

     ರೇಣುಕಾಸ್ವಾಮಿ ಹತ್ಯೆ ಅವಮಾನಕರ ಹೇಯ ಕೃತ್ಯ ಎಂದು ಮಹಿಳಾ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳು ಸೇರಿ ಚಿತ್ರದುರ್ಗ ನಗರದ ನೀಲಕಂಠೇಶ್ವರ ದೇವಸ್ಥಾನದಿಂದ ಡಿಸಿ ಕಚೇರಿವರೆಗೆ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್ ಸೇರಿದಂತೆ ಲಿಂಗಾಯತ ಮುಖಂಡರು ಭಾಗವಹಿಸಿದ್ದರು.

      ರೇಣುಕಾಸ್ವಾಮಿ ಹತ್ಯೆ ಮಾಡಿದ ಆರೋಪಿಗೆ ಕಠಿಣ ಶಿಕ್ಷೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಹೇಳಿದ್ದಾರೆ.

     ರೇಣುಕಾಸ್ವಾಮಿ ಕುಟುಂಬ ದುಃಖದಲ್ಲಿ ಮುಳುಗಿದೆ. ರೇಣುಕಾಸ್ವಾಮಿಗೆ ಕಳೆದ ವರ್ಷವಷ್ಟೇ ಮದುವೆಯಾಗಿ ಆತನ ಪತ್ನಿ ಗರ್ಭಿಣಿಯಾಗಿದ್ದಾಳೆ. ಇನ್ನು ಕೆಲವೇ ತಿಂಗಳಲ್ಲಿ ನಮ್ಮ ಕುಟುಂಬಕ್ಕೆ ಮಗುವಿನ ಆಗಮನವಾಗಿ ಖುಷಿಯಲ್ಲಿದ್ದ ನಮಗೆ ಆಘಾತವಾಗಿದೆ. ನಮಗಾದ ನಷ್ಟ, ಸಂಕಟವನ್ನು ಯಾರಲ್ಲಿ ಹೇಳಿಕೊಳ್ಳಲಿ ಎಂದರು.

    ಕಳೆದ ಶನಿವಾರ ಚಿತ್ರದುರ್ಗದಿಂದ 33 ವರ್ಷದ ಮೆಡಿಕಲ್ ಸ್ಟೋರ್ ನಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾಸ್ವಾಮಿಯನ್ನು ನಟ ದರ್ಶನ್ ಗ್ಯಾಂಗ್ ನವರು ಅಪಹರಿಸಿ ಬೆಂಗಳೂರಿಗೆ ಕರೆತಂದಿದ್ದರು. ನಂತರ ರೇಣುಕಾಸ್ವಾಮಿಯನ್ನು ಆರ್‌ಆರ್‌ ನಗರದ ಪಟ್ಟಣಗೆರೆ ಗ್ರಾಮದ ಶೆಡ್‌ನಲ್ಲಿ ಕೊಲೆ ಮಾಡಿ ದೇಹವನ್ನು ಸುಮನಹಳ್ಳಿ ಸೇತುವೆ ಬಳಿಯ ಮಳೆನೀರು ಚರಂಡಿಗೆ ಎಸೆದು ಹೋಗಿದ್ದಾರೆ.

    ಭಾನುವಾರ ಮೃತದೇಹ ನೀರಿನಲ್ಲಿ ತೇಲಾಡುತ್ತಿದ್ದು, ಅದನ್ನು ಬೀದಿನಾಯಿಗಳು ಕಚ್ಚಿ ಎಳೆದು ತಂದು ಸೇತುವೆ ಪಕ್ಕ ರಸ್ತೆ ಬದಿ ಬಿಟ್ಟು ಹೋಗಿದ್ದು ಅದನ್ನು ಅನ್ನಪೂರ್ಣೇಶ್ವರಿ ನಗರದ ಸತ್ವ ಅಪಾರ್ಟ್ ಮೆಂಟ್ ಗೆ ಡೆಲಿವರಿ ಕೊಡಲು ಬಂದಿದ್ದ ಡೆಲಿವರಿ ಬಾಯ್ ನೋಡಿ ವಿಷಯ ತಿಳಿಸಿದಾಗಲೇ ಪ್ರಕರಣ ಬೆಳಕಿಗೆ ಬಂದಿದ್ದು.

   ನಟ ದರ್ಶನ್ ಮತ್ತು ಅವರ ಗೆಳತಿ ಪವಿತ್ರಾ ಗೌಡ ಸೇರಿದಂತೆ 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ರೇಣುಕಾಸ್ವಾಮಿ ಸಾಮಾಜಿಕ ಜಾಲತಾಣಗಳಲ್ಲಿ ಪವಿತ್ರಾ ಗೌಡ ಅವರಿಗೆ ಅವಹೇಳನಕಾರಿ ಮತ್ತು ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದರು, ಇದು ಭೀಕರ ಹತ್ಯೆಯ ಹಿಂದಿನ ಉದ್ದೇಶ ಎಂದು ನಂಬಲಾಗಿದೆ. ಪೊಲೀಸರ ಪ್ರಕಾರ, ರೇಣುಕಾ ಸ್ವಾಮಿ ದರ್ಶನ್‌ನ ಕಟ್ಟಾ ಅಭಿಮಾನಿಯಾಗಿದ್ದು, 47 ವರ್ಷದ ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ನಡುವಿನ ಸಂಬಂಧವನ್ನು ಪವಿತ್ರಾ ಗೌಡ ಹಾಳು ಮಾಡುತ್ತಿದ್ದಾರೆ ಎಂದು ಕಾಳಜಿಯಿಂದ ಅಶ್ಲೀಲ ಸಂದೇಶ ಕಳುಹಿಸಿದ್ದರು ಎಂದು ಪೊಲೀಸರ ವಿಚಾರಣೆಯಿಂದ ತಿಳಿದುಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap