ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕಲ್ಲು –ಕ್ರಷರ್ ಗಣಿಗಾರಿಕೆ

ತುಮಕೂರು:

  ನಿಯಮಗಳು ಲೆಕ್ಕಕ್ಕಿಲ್ಲ, ಅಕ್ರಮಗಳ ಜಾಡಿನಲ್ಲಿ ಅಧಿಕಾರಿಗಳ ಜಾಣ ಕುರುಡು

    ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ವಿರುದ್ಧ ಪ್ರತಿಭಟನೆಗಳು ಹೆಚ್ಚುತ್ತಿವೆ. ಸರಣಿಯೋಪಾದಿಯಲಿ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಸತತ ಹೋರಾಟದ ಹಿನ್ನೆಲೆಯಲ್ಲಿ ತುರುವೇಕೆರೆ ತಾಲ್ಲೂಕಿನ ಕೋಳಘಟ್ಟದ ಕಲ್ಲುಗಣಿಗಾರಿಕೆ ಸ್ಥಗಿತಗೊಂಡಿದೆ.

ನಮ್ಮ ಹೋರಾಟಕ್ಕೆ ಸಂದ ಜಯ ಇದು ಎಂದು ಅಲ್ಲಿನ ಸಂಘ ಸಂಸ್ಥೆಗಳ ಮುಖಂಡರು ಮತ್ತು ಜನತೆ ಪ್ರತಿಕ್ರಿಯಿಸಿದ್ದಾರೆ.

ಕೋಳಘಟ್ಟದ ಗಣಿಗಾರಿಕೆ ವಿರುದ್ಧ ಪ್ರತಿಭಟ£ ಹೆಚ್ಚುತ್ತಿದ್ದಂತೆಯೇ ಕೊರಟಗೆರೆ ತಾಲ್ಲೂಕಿನಲ್ಲಿಯೂ ಗಣಿಗಾರಿಕೆಯ ವಿರುದ್ಧದ ಹೋರಾಟ ಆರಂಭವಾಯಿತು.

ಕೋಳಾಲ ಹೋಬಳಿ ತಂಗನಹಳ್ಳಿ ಗ್ರಾಮದ ಸುತ್ತಮುತ್ತ ಕಲ್ಲು ಗಣಿಗಾರಿಕೆ ಮಾಡಲು ಸರ್ಕಾರ ಅನುಮತಿ ನೀಡಿರುವುದನ್ನು ಖಂಡಿಸಿ ಆ ಭಾಗದ ಜನತೆ ಜಿಲ್ಲಾಧಿಕಾರಿಗಳ ಕಛೇರಿಯವರೆಗೂ ಆಗಮಿಸಿ ಮನವಿ ಪತ್ರ ಸಲ್ಲಿಸಿದರು. ಯಾವುದೇ ಕಾರಣಕ್ಕೂ ಅಲ್ಲಿ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಕೂಡದು ಎಂದು ಒತ್ತಾಯಿಸಿದ್ದಾರೆ.

ದೇವರಾಯನದುರ್ಗ ಹಾಗೂ ನಾಮದ ಚಿಲುಮೆಗೆ ಸುಮಾರು 3 ಕಿ.ಮೀ. ದೂರದಲ್ಲಿರುವ ತಂಗನಹಳ್ಳಿ ಭಾಗ ಕೃಷಿಗೆ ಹೇಳಿ ಮಾಡಿಸಿದಂತಿದೆ. ಫಲವತ್ತಾದ ಭೂಮಿ ಇದಾಗಿದೆ.

ಸುತ್ತಮುತ್ತ ಅರಣ್ಯ ಪ್ರದೇಶವೂ ಇರುವುದರಿಂದ ವನ್ಯ ಜೀವಿಗಳು ಇಲ್ಲಿ ವಾಸಿಸುತ್ತಿವೆ. ಇಂತಹ ಕಡೆ ಗಣಿಗಾರಿಕೆ ಆರಂಭವಾದರೆ ಕೃಷಿಗೆ ಪೆಟ್ಟು ಬೀಳುವುದು ಒಂದು ಕಡೆಯಾದರೆ ಮುಂದಿನ ದಿನಗಳಲ್ಲಿ ಕೃಷಿಯ ವಾತಾವರಣವೆ ನಶಿಸಿ ಹೋಗಲಿದೆ, ಪ್ರಾಕೃತಿಕ ಸಂಪತ್ತಿನ ಅಸಮತೋಲನವಾಗಲಿದೆ ಎಂಬುದು ಅಲ್ಲಿನ ಜನತೆಯ ಅಭಿಪ್ರಾಯ. ಹೀಗಾಗಿ ಅಲ್ಲಿ ಕಲ್ಲು ಗಣಿಗಾರಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಇದೇ ರೀತಿ ಕೋಳಾಲ ಹೋಬಳಿಗೆ ಸೇರಿದ ಕಾವಲಗುಟ್ಟೆಯ ಅಳಾಲಸಂದ್ರ, ಹೊಸಕೋಟೆ, ಎಲೆರಾಂಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎಂ.ಸ್ಯಾಂಡ್ ಕ್ರಷರ್ ಸ್ಥಾಪನೆಗೆ ಅನುಮತಿ ನೀಡುವುದನ್ನು ವಿರೋಧಿಸಿ ಪ್ರತಿಭಟಿಸಲಾಗಿದೆ.

ವಡ್ಡರಹಳ್ಳಿ, ಬೈಚೇನಹಳ್ಳಿ, ಹೊಸಪಾಳ್ಯ, ನಾಗೇನಹಳ್ಳಿ, ತಿಮ್ಮನಹಳ್ಳಿ, ಹನುಮಂತಪುರ, ಸಂಕೇನಹಳ್ಳಿ, ನೀಲಗೊಂಡನಹಳ್ಳಿ, ಇರಕಸಂದ್ರ ಕಾಲೋನಿ ಈ ಭಾಗದ ಕೆಲವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಎಂ.ಸ್ಯಾಂಡ್ ಕ್ರಷರ್‍ನಿಂದ ಆಗುವ ಅನಾಹುತಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ತಿಂಗಳು ಕುಣಿಗಲ್ ತಾಲ್ಲೂಕಿನಲ್ಲಿಯೂ ಇದೇ ರೀತಿಯ ಪ್ರತಿಭಟನೆಗಳು ನಡೆದವು. ಒಂದಲ್ಲಾ ಒಂದು ಭಾಗದಲ್ಲಿ ಕಲ್ಲು ಗಣಿಗಾರಿಕೆ, ಕ್ರಷರ್ ಇತ್ಯಾದಿಗಳ ವಿರುದ್ಧ ಜನರ ಪ್ರತಿಭಟನೆಗಳು ನಡೆಯುತ್ತಲೇ ಇವೆ.

ಪ್ರತಿಭಟನೆಯ ಸದ್ದು ಜೋರಾಗುತ್ತಲೇ ಕೆಲ ಕಾಲ ಸ್ಥಗಿತಗೊಳ್ಳುತ್ತವೆ. ಮತ್ತೆ ಇಲ್ಲಿಯೂ ರಾಜಕಾರಣ ಪ್ರವೇಶಿಸಿ ಸದ್ದಿಲ್ಲದಂತೆ ಕಲ್ಲು ಗಣಿಗಾರಿಕೆ ಮುಂದುವರೆಯುತ್ತದೆ.

ಜಿಲ್ಲೆಯ ಚಿಕ್ಕನಾಯಕನಹಳ್ಳಿ ಮತ್ತು ಗುಬ್ಬಿ ತಾಲ್ಲೂಕುಗಳಲ್ಲಿ ದಶಕಗಳಿಂದ ಗಣಿಗಾರಿಕೆ ಹೆಸರಿನಲ್ಲಿ ಮಣ್ಣನ್ನು ಹೆಕ್ಕಿ ತೆಗೆಯಲಾಯಿತು. ಹೇರಳ ಸಂಪತ್ತು ಬರಿದಾಗುತ್ತಿದ್ದಂತೆಯೇ ಪರಿಸರ ವಾದಿಗಳು ಎಚ್ಚೆತ್ತುಕೊಂಡರು.

ಸುಪ್ರೀಂಕೋರ್ಟ್ ಕದ ತಟ್ಟುತ್ತಲೇ ಅಕ್ರಮ ಗಣಿಗಾರಿಕೆಗೆ ಕಡಿವಾಣ ಬಿದ್ದಿತು. ಇದಾದ ನಂತರ ಯಾವುದೇ ಗಣಿಗಾರಿಕೆ ಆರಂಭಿಸುವ ಮುನ್ನ ಕೆಲವು ನೀತಿ ನಿಯಮಗಳನ್ನು ಪಾಲನೆ ಮಾಡುವುದು ಕಡ್ಡಾಯ ಮಾಡಲಾಗಿದೆ. ಇದಕ್ಕಾಗಿಯೇ ಕೆಲವು ನೀತಿ ನಿಬಂಧನೆಗಳನ್ನು ನಿರೂಪಿಸಲಾಗಿದೆ.

2014 ರಲ್ಲಿ ಕಲ್ಲು ಗಣಿಗಾರಿಕೆ ಜಾರಿಗೆ ತರಲಾಗಿದೆ. ಈ ಕಾಯ್ದೆಯ ಪ್ರಕಾರ ಮೀಸಲು ಅರಣ್ಯ ಪ್ರದೇಶದಲ್ಲಿ ಕ್ವಾರಿಗಳಿಗೆ ಅನುಮತಿ ಕೊಡುವಂತಿಲ್ಲ. ಆದರೆ ಕಲ್ಲು ಗಣಿಗಾರಿಕೆಗೆ ಪರವಾನಿಗೆ ನವೀಕರಣದ ಸಂದರ್ಭದಲ್ಲಿ ಕಾಯ್ದೆಯ ನೀತಿ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬರುತ್ತದೆ.

ಇಲ್ಲಿ ಅಧಿಕಾರಿಗಳು ಮತ್ತು ರಾಜಕಾರಣಿಗಳ ನಡುವಿನ ಒಳ ಒಪ್ಪಂದಗಳು ರಹಸ್ಯವಾಗಿ ನಡೆಯುತ್ತಿದ್ದು, ಇಂತಹ ಗಣಿಗಾರಿಕೆಯಿಂದಲೇ ಹಲವರು ತಮ್ಮ ಸಂಪತ್ತನ್ನು ದುಪ್ಪಟ್ಟು ಮಾಡಿಕೊಂಡಿದ್ದಾರೆ.

ಕಲ್ಲುಗಣಿಗಾರಿಕೆ, ಕ್ರಷರ್ ಪರವಾನಿಗೆ ಪಡೆಯುವಾಗ ಕಂದಾಯ ಇಲಾಖೆ, ಪರಿಸರ ಮಾಲೀನ್ಯ ನಿಯಂತ್ರಣ ಮಂಡಳಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿದ್ದರೆ ಆ ಇಲಾಖೆಯ ಎನ್‍ಓಸಿ ಕಡ್ಡಾಯ. ಹೀಗಾಗಿ ಯಾವ್ಯಾವ ಇಲಾಖೆಗಳು ಇದರ ವ್ಯಾಪ್ತಿಯಲ್ಲಿ ಬರಲಿವೆಯೋ ಆ ಎಲ್ಲ ಇಲಾಖೆಗಳ ಅಧಿಕಾರಿಗಳು ಕಪ್ಪಕಾಣಿಕೆ ಸ್ವೀಕರಿಸಿ ಭೂ ಸಂಪತ್ತನ್ನು ದೋಚಲು ರಹದಾರಿ ಮಾಡಿಕೊಡುತ್ತಿದ್ದಾರೆ.

ರಾಜಕಾರಣದ ಬೆಂಬಲವೂ ಇರುವುದರಿಂದ ಹಾಗೂ ಬಹುತೇಕ ಇಂತಹ ಗಣಿಗಾರಿಕೆಗಳು ರಾಜಕಾರಣಿಗಳ ಕೃಪಕಟಾಕ್ಷದಲ್ಲಿಯೇ ನಡೆಯುವುದರಿಂದ ಪ್ರತಿಭಟನೆಗಳು ಒಂದೆರಡು ದಿನ ನಡೆದು ನಂತರ ಅವುಗಳನ್ನು ತಣ್ಣಗಾಗಿಸುವ ಪ್ರಯತ್ನಗಳು ನಡೆಯುತ್ತಲೇ ಬಂದಿವೆ.
2020 ರ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 140 ಕಲ್ಲು ಕ್ವಾರಿಗಳಿಗೆ ಅನುಮತಿ ನೀಡಲಾಗಿದೆ.

ಈ ಪೈಕಿ 50 ಜಲ್ಲಿ ಕ್ರಷರ್ ಘಟಕಗಳು ಚಾಲ್ತಿಯಲ್ಲಿವೆ. ಇತ್ತೀಚೆಗೆ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಜಿಲ್ಲೆಯಲ್ಲಿ 64 ಕ್ವಾರೆಗಳಿಗೆ ಪರವಾನಿಗೆ ಪಡೆಯಲಾಗಿದೆ. ಪರವಾನಗಿ ಇಲ್ಲದೆ ನಡೆಯುತ್ತಿರುವ ಕ್ವಾರೆಗಳೂ ಸಹ ಇವೆ. 2019-20ರ ಅವಧಿಯಲ್ಲಿ ತುಮಕೂರು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಈ ವಿಷಯವಾಗಿಯೇ ಒಂದು ವಿಶೇಷ ಸಭೆ ನಡೆದಿತ್ತು.

ಅಂದಿನ ಗಣಿ ಮತ್ತು ಭೂ ವಿಜ್ಞಾನ ಇಲಾಖಾ ಸಚಿವ ರಾಜಶೇಖರಪಾಟೀಲ್ ಅಧಿಕಾರಿಗಳಿಗೆ ತಾಕೀತು ಮಾಡಿ ಅಕ್ರಮವಾಗಿ ನಡೆಯುತ್ತಿರುವ ಕಲ್ಲುಗಣಿಗಾರಿಕೆ ಮತ್ತು ಕ್ವಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಆದೇಶಿಸಿದ್ದರು. ಆದರೆ ಕೈಗೊಂಡ ಕ್ರಮಗಳೇನು ಎಂಬುದು ಈವರೆಗೂ ಬಹಿರಂಗವಾಗಲೇ ಇಲ್ಲ.

ಜಿಲ್ಲೆಯ ಹಲವು ತಾಲ್ಲೂಕುಗಳಲ್ಲಿ ಕಲ್ಲು ಗಣಿಗಾರಿಕೆ, ಎಂ.ಸ್ಯಾಂಡ್ ಕ್ರಷರ್‍ಗಳು ಕಾರ್ಯನಿರ್ವಹಿಸುತ್ತಿವೆ. ಕುಣಿಗಲ್ ತಾಲ್ಲೂಕು, ತಿಪಟೂರು ಮತ್ತಿತರ ಕಡೆಗಳು ಸೇರಿದಂತೆ ಜಿಲ್ಲೆಯ ವಿವಿಧೆಡೆ 80ಕ್ಕೂ ಹೆಚ್ಚು ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಪ್ರದೇಶಗಳಿವೆ.

ಇಲ್ಲಿ ಸ್ಫೋಟಕಗಳನ್ನು ನಿಯಮಾವಳಿ ಪ್ರಕಾರ ಬಳಸಿಕೊಳ್ಳಲಾಗುತ್ತಿದೆಯೇ ಎಂಬುದರ ಪರಿಶೀಲನೆ ನಡೆಯಬೇಕು. ತಿಪಟೂರು ತಾಲ್ಲೂಕಿನ ಪ್ರದೇಶವೊಂದರಲ್ಲಿ ಈ ರೀತಿಯ ಕಲ್ಲು ಗಣಿಗಾರಿಕೆಯಿಂದಾಗಿ ಸುತ್ತಮುತ್ತಲ ಗ್ರಾಮಗಳ ಕೆಲವು ಮನೆಗಳು ಬಿರುಕು ಬಿಟ್ಟಿರುವ ಬಗ್ಗೆ ಕಳೆದ ವರ್ಷ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲಿನ ಜನತೆ ಪ್ರತಿಭಟನೆಗೂ ಮುಂದಾಗಿದ್ದರು.

ಜಿಲೆಟಿನ್ ಕಡ್ಡಿಗಳು ಹಾಗೂ ಸ್ಫೋಟಕಗಳನ್ನು ಸಂಗ್ರಹಿಸಿಡುವ ಕೊಠಡಿಗಳನ್ನು ನಿಯಮಾನುಸಾರ ಪಾಲನೆ ಮಾಡಬೇಕು. ಕುಣಿಗಲ್ ತಾಲ್ಲೂಕಿನ ಸ್ಟೋನ್ ಕ್ರಷರ್ ಘಟಕವೊಂದರ ಮೇಲೆ ಕಳೆದ ವರ್ಷ ವಿಶೇಷ ಪೊಲೀಸ್ ತಂಡ ದಾಳಿ ನಡೆಸಿದ ಸಂದರ್ಭದಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ 25 ಡಿಟೋನೇಟರ್, 55 ಜಿಲಿಟಿನ್ ಕಡ್ಡಿಗಳು, ಎಲೆಕ್ಟ್ರಿಕ್ ಡೈನಾಮೈಟ್‍ಗಳು ಪತ್ತೆಯಾಗಿದ್ದವು. ಈ ಸಂಬಂಧ ಪ್ರಕರಣವೂ ದಾಖಲಾಗಿತ್ತು.

ತುಮಕೂರು ತಾಲ್ಲೂಕು ಹೆಬ್ಬೂರು ಸಮೀಪ ಸ್ಫೋಟಕಗಳನ್ನು ಸಂಗ್ರಹಿಸಿಟ್ಟಿದ್ದ ಕೊಠಡಿ ಸ್ಫೋಟಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿಯೂ ಪ್ರಕರಣ ದಾಖಲಾಗಿತ್ತು. 2021ರ ಫೆಬ್ರವರಿ 1 ರಂದು ಮಸ್ಕಲ್ ಗ್ರಾಮದ ಬಳಿ ಈ ದುರಂತ ನಡೆದಿತ್ತು. ಲಕ್ಷ್ಮೀಕಾಂತ್ ಎಂಬುವರ ಮನೆ ಧ್ವಂಸವಾಗಿತ್ತು. ಮೇಲ್ಚಾವಣಿಯ ಶೀಟುಗಳು ಹಾರಿ ಹೋಗಿದ್ದವು.

ಈಗ್ಗೆ ಸುಮಾರು 20 ವರ್ಷಗಳ ಸಮಯದಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ಅಂಕನಬಾವಿ ಪ್ರದೇಶದಲ್ಲಿ ಜಿಲಿಟಿನ್ ಸ್ಫೋಟಗೊಂಡು ಸ್ಥಳದಲ್ಲಿಯೇ ಕಾರ್ಮಿಕರು ಅಸುನೀಗಿದ್ದರು. ಗಣಿಗಾರಿಕೆಯಿಂದ ಆಗಿರುವ ಅನಾಹುತಗಳು ಬಹಳಷ್ಟಿವೆ. ಇವುಗಳ ಬಗ್ಗೆ ಮುನ್ನೆಚ್ಚರಿಕೆ ಅತ್ಯಗತ್ಯ.

ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಕಟ್ಟಡ ನಿರ್ಮಾಣ ಸೇರಿದಂತೆ ಇತರೆ ನಿರ್ಮಾಣಗಳು ಹೆಚ್ಚುತ್ತಿವೆ. ಸರ್ಕಾರಿ ವಲಯ ಮತ್ತು ಖಾಸಗಿ ವಲಯದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಗಳಿಗೆ ಅಗತ್ಯ ಸರಕು ಪೂರೈಕೆಯಾಗಬೇಕು.

ಅದಕ್ಕೆ ತಕ್ಕಂತೆ ಬೇಡಿಕೆಯೂ ಇದೆ. ಈ ಹಿನ್ನೆಲೆಯಲ್ಲಿ ಪೂರೈಕೆ ಅನಿವಾರ್ಯವಾಗಿರುವುದರಿಂದ ಹಾಗೂ ಕೆಲವರು ಇಂತಹ ಗಣಿಗಾರಿಕೆಯನ್ನೇ ಒಂದು ಬೃಹತ್ ಉದ್ಯಮವನ್ನಾಗಿಸಿಕೊಳ್ಳುತ್ತಿರುವುದರಿಂದ ಸಹಜವಾಗಿಯೇ ಮತ್ತಷ್ಟು ಬೇಡಿಕೆ ಸೃಷ್ಟಿಯಾಗಿದೆ.

ಎಲ್ಲೆಲ್ಲಿ ಇಂತಹ ಗಣಿಗಾರಿಕೆಗಳು ಆರಂಭವಾಗುತ್ತಿವೆಯೋ ಅಲ್ಲೆಲ್ಲಾ ರಾಜಕಾರಣಿಗಳ ಅಥವಾ ಅವರ ಕಡೆಯವರ ಉದ್ಯಮವೇ ಕಂಡುಬರುತ್ತಿದೆ. ಆದರೆ ಸುರಕ್ಷಿತ ವಲಯದಲ್ಲಿ ಗ್ರಾಮಗಳ ಜನತೆಗೆ ತೊಂದರೆಯಾಗುವ ರೀತಿಯಲ್ಲಿ ಯಾವುದೇ ಕಾರಣಕ್ಕೂ ಅವಕಾಶ ಇರಬಾರದು.

     –  ಸಾ.ಚಿ.ರಾಜಕುಮಾರ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link