ಸಿಡ್ನಿ:
ಏಕದಿನ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿಯೂ ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಮಿಚೆಲ್ ಮಾರ್ಷ್ ಬ್ಯಾಟಿಂಗ್ ಆಯ್ದುಕೊಂಡರು. ಹ್ಯಾಟ್ರಿಕ್ ಟಾಸ್ ಸೋಲು ಕಂಡ ಭಾರತ ಬೌಲಿಂಗ್ ಆಹ್ವಾನ ಪಡೆಯಿತು. ಭಾರತ ಸತತ 18ನೇ ಬಾರಿಗೆ ಟಾಸ್ ಸೋತ ಕೆಟ್ಟ ದಾಖಲೆ ತನ್ನ ಹೆಸರಿಗೆ ಸೇರಿಸಿಕೊಂಡಿದೆ.
ಏಕದಿನ ಕ್ರಿಕೆಟ್‌ನಲ್ಲಿ ಭಾರತ ಹಿಂದೆಂದೂ ಆಸೀಸ್‌ಗೆ ಕ್ಲೀನ್‌ಸ್ವೀಪ್ ಸಾಧಿಸಲು ಅವಕಾಶ ನೀಡಿಲ್ಲ. ಹೀಗಾಗಿ ಚೊಚ್ಚಲ ಬಾರಿಗೆ ದ್ವಿಪಕ್ಷೀಯ ಸರಣಿಯಲ್ಲಿ ಭಾರತ ಎದುರು ಕ್ಲೀನ್‌ಸ್ವೀಪ್ ಸಾಧಿಸಲು ಆಸೀಸ್ ಹೋರಾಡಲಿದೆ. ಸರಣಿ ವೈಟ್‌ವಾಷ್‌ನಿಂದ ಪಾರಾಗುವ ಕಠಿಣ ಪರೀಕ್ಷೆಯೊಂದಿಗೆ ಭಾರತ ಕಣಕ್ಕಿಳಿದಿದೆ.
ಆಸ್ಟ್ರೇಲಿಯಾದಲ್ಲಿ ಮುಂದಿನ ಎರಡು ವರ್ಷ ಭಾರತ ಯಾವುದೇ ಏಕದಿನ ಸರಣಿ ಆಡದಿರುವುದರಿಂದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಪಾಲಿಗೆ ಇದು ಆಸೀಸ್‌ನಲ್ಲಿ ಬಹುತೇಕ ಕೊನೇ ಪಂದ್ಯ ಎನಿಸಿದೆ.
ಭಾರತ ಕೊನೆಗೂ ಈ ಪಂದ್ಯದಲ್ಲಿ ಎರಡು ಬದಲಾವಣೆ ಮಾಡಿತು. ಕುಲ್‌ದೀಪ್ ಯಾದವ್ ಮತ್ತು ಕನ್ನಡಿಗ ಪ್ರಸಿದ್ಧ್ ಕೃಷ್ಣ ಆಡುವ ಬಳಗದಲ್ಲಿ ಅವಕಾಶ ಪಡೆದರು. ಇವರಿಗಾಗಿ ಅರ್ಶ್‌ದೀಪ್ ಸಿಂಗ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಜಾಗ ಬಿಟ್ಟರು. ಆಸ್ಟ್ರೇಲಿಯಾ ಒಂದು ಬದಲಾವಣೆ ಮಾಡಿತು. ಜೇವಿಯರ್ ಬಾರ್ಟ್ಲೆಟ್ ಬದಲು ನಥಾನ್ ಎಲ್ಲಿಸ್ ಆಡಲಿಳಿದರು.








