ಭಾರತ ದೇಶ ಒಂದು ಸಮುದಾಯಕ್ಕೆ ಸೇರಿದ್ದಲ್ಲ : ಕೆ.ಕೆ. ಶೈಲಜಾ

ತುಮಕೂರು: 

    ಭಾರತ ದೇಶ ಒಂದು ಸಮುದಾಯಕ್ಕೆ ಸೇರಿದ್ದಲ್ಲ. ಸರ್ವ ಜನರನ್ನು ಒಳಗೊಂಡ ನಾಡು. ಆದರೆ, ಇಂದಿನ ಸರ್ಕಾರ ಜಾತ್ಯತೀತ, ಸಮಾಜವಾದ ನಿಲುವುಗಳಿಗೆ ವಿರುದ್ಧವಾಗಿ ಆಡಳಿತ ನಡೆಸುತ್ತಿದೆ ಎಂದು ಕೇರಳ ಶಾಸಕಿ ಕೆ.ಕೆ. ಶೈಲಜಾ   ಟೀಕಿಸಿದರು.

    ಧಾರ್ಮಿಕ ಮೂಲಭೂತವಾದ ಪ್ರಸ್ತುತ ಸಮಾಜದ ದೊಡ್ಡ ಶತ್ರು. ಬಿಲ್ಕಿಸ್ ಬಾನು ಅತ್ಯಾಚಾರ, ಕೊಲೆ ಪ್ರಕರಣದ ಆರೋಪ ಸಾಬೀತಾದರೂ, ಆರೋಪಿಗಳು ನಿರ್ಭೀತಿಯಿಂದ ಹೊರಗಡೆ ಬಂದು, ಓಡಾಡುತ್ತಿದ್ದಾರೆ. ಇದಕ್ಕೆ ಧಾರ್ಮಿಕ ಮೂಲಭೂತ ವಾದವೂ ಕಾರಣ ಎಂದು ಕಿಡಿಕಾರಿದರು.

    ಚಿಂತಕ ಕೆ.ದೊರೈರಾಜ್, ಎಐಎಂಎಸ್ಎಸ್ ಸಂಘಟನೆ ಉಪಾಧ್ಯಕ್ಷೆ ಸುಧಾ ಕಾಮತ್, ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಪದಾಧಿಕಾರಿಗಳಾದ ಬಾ.ಹ.ರಮಾಕುಮಾರಿ, ಮಲ್ಲಿಕಾ ಬಸವರಾಜು, ರಾಣಿ ಚಂದ್ರಶೇಖರ್, ಕಲ್ಯಾಣಿ, ಅಕೈ ಪದ್ಮಶಾಲಿ ಇತರರು ಭಾಗವಹಿಸಿದ್ದರು.

ನಾವು ದುರ್ಬಲರಲ್ಲ

    ‘ರಾಜಕೀಯದಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ. ಪಂಚಾಯಿತಿಯಲ್ಲಿ ಶೇ 33ರಷ್ಟು ಮೀಸಲಾತಿ ಇದೆ. ಆದರೆ, ಚುನಾವಣೆಯಲ್ಲಿ ಜಯಿಸಿದ ಮಹಿಳೆಯರ ಯಜಮಾನರು ಅಧಿಕಾರ ನಡೆಸುತ್ತಿದ್ದಾರೆ. ಮಹಿಳೆಯರನ್ನು ದುರ್ಬಲರಂತೆ ನೋಡುವುದನ್ನು ನಿಲ್ಲಸಬೇಕು’ ಎಂದು ತುಮಕೂರು ವಿಶ್ವವಿದ್ಯಾನಿಲಯ ಕುಲಸಚಿವೆ ನಹಿದಾ ಜಮ್ ಜಮ್ ಹೇಳಿದರು.

    ವಿಜಯಪುರ ಮಹಿಳಾ ವಿ.ವಿ ನಿವೃತ್ತ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ, ‘ಸಮಾಜ ಒಳಗಡೆ ತಲ್ಲಣ ಮೂಡಿಸಿದ ಕಾಲದಲ್ಲಿ ಒಕ್ಕೂಟ ರಚನೆ ಮಾಡಲಾಗಿತ್ತು. ನೀವು ಯಾರ ಜತೆ ಮಾತನಾಡಬೇಕು ಎಂಬುದನ್ನು ನಿಮಗೆ ಪರಿಚಯವೇ ಇಲ್ಲದ ಗುಂಪೊಂದು ನಿರ್ಧರಿಸುವ ಆತಂಕ ಕರಾವಳಿಯ ಭಾಗದಲ್ಲಿ ಸೃಷ್ಟಿಯಾಗಿತ್ತು. ಇದೇ ಸಮಯದಲ್ಲಿ ಒಕ್ಕೂಟ ರಚನೆಯಾಯಿತು’ ಎಂದು ತಿಳಿಸಿದರು.

ಗಮನ ಸೆಳೆದ ಹಕ್ಕೊತ್ತಾಯ ಜಾಥಾ

    ಸಮಾವೇಶದ ಪ್ರಯುಕ್ತ ಏರ್ಪಡಿಸಿದ್ದ ಹಕ್ಕೊತ್ತಾಯ ಜಾಥಾಕ್ಕೆ ಶಾಸಕಿ ಕೆ.ಕೆ.ಶೈಲಜಾ ಟೀಚರ್ ಚಾಲನೆ ನೀಡಿದರು. ನೂರಾರು ವಿದ್ಯಾರ್ಥಿಗಳು ಜಾಥಾದಲ್ಲಿ ಹೆಜ್ಜೆ ಹಾಕಿದರು.ನಗರದ ಬಿಜಿಎಸ್ ವೃತ್ತದಿಂದ ಬಿ.ಎಚ್.ರಸ್ತೆಯ ಮೂಲಕ ಸಾಗಿದ ಜಾಥಾವು ಎಂ.ಜಿ.ರಸ್ತೆ ಮುಖಾಂತರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಿಂದ ವೇದಿಕೆ ಕಾರ್ಯಕ್ರಮ ನಡೆಯುವ ಗಾಜಿನಮನೆ ತಲುಪಿತು.

    ಮಹಿಳೆಯರೆಲ್ಲಾ ಒಂದಾಗಿ ಹೋರಾಟಕ್ಕೆ ಮುಂದಾಗಿದ್ದು ‘ಸಮಾನತೆ ಕಡೆಗೆ ನಮ್ಮ ನಡಿಗೆ’ ಎಂಬ ಘೋಷಣೆಗಳನ್ನು ಕೂಗಿದರು. ಮಹಿಳಾ ಸ್ನೇಹಿ ಪ್ರಜಾಪ್ರಭುತ್ವ ಜಾರಿಗೆ ಬರಲಿ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯಿರಿ, ಮಹಿಳಾ ಏಕತೆ ಚಿರಾಯುವಾಗಲಿ, ಸಂವಿಧಾನವೇ ಉಸಿರು ಎಂಬ ನಾಮಫಲಕ ಹಿಡಿದು ಜಾಥಾದಲ್ಲಿ ಹೆಜ್ಜೆ ಹಾಕಿದರು. ಹೆಣ್ಣು ಮಕ್ಕಳ ಕೋಲಾಟ ಪ್ರದರ್ಶನ ಗಮನ ಸೆಳೆಯಿತು.

ಕುಣಿದು ಕುಪ್ಪಳಿಸಿದ ಮಹಿಳೆಯರು

    ತಮಟೆ ನರಸಮ್ಮ ಮತ್ತು ಸ್ಲಂ ಕಲಾ ತಂಡದ ತಮಟೆ ವಾದನಕ್ಕೆ ಮಹಿಳೆಯರು ಕುಣಿದು ಕುಪ್ಪಳಿಸಿದರು. ಕಾರ್ಯಕ್ರಮದ ಉದ್ಘಾಟನಾ ಸಮಯದಲ್ಲಿ ತಮಟೆಯ ಸದ್ದಿಗೆ ಹೆಜ್ಜೆ ಹಾಕಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ   

Recent Articles

spot_img

Related Stories

Share via
Copy link
Powered by Social Snap