ಈ ಹಿಂದೆ 2019ರಲ್ಲಿ ಪುಲ್ವಾಮಾ ದಾಳಿ ನಡೆದಾಗ ಭಾರತ ಸರ್ಜಿಕಲ್ ದಾಳಿಯ ಮೂಲಕ ಪಾಕಿಸ್ತಾನದ ವಿರುದ್ಧ ಸೇಡು ತೀರಿಸಿಕೊಂಡಿತ್ತು. ಈ ಬಾರಿ 5 ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಮೋದಿ ಸರ್ಕಾರ ರಾಜತಾಂತ್ರಿಕವಾಗಿ ಪಾಕಿಸ್ತಾನಕ್ಕೆ ಭಾರತ ತಿರುಗೇಟು ನೀಡಿದೆ. ಅದರಲ್ಲಿ ಬಹಳ ಮುಖ್ಯವಾದುದು ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಿದ್ದು. ಪಾಕಿಸ್ತಾನದೊಂದಿಗಿನ ದಶಕಗಳಷ್ಟು ಹಳೆಯದಾದ ಸಿಂಧೂ ನದಿ ನೀರು ಒಪ್ಪಂದವನ್ನು ಅನಿರ್ದಿಷ್ಟವಾಗಿ ಸ್ಥಗಿತಗೊಳಿಸುವುದು ಮೋದಿ ಸರ್ಕಾರದ ಅತ್ಯಂತ ದಿಟ್ಟ ಕ್ರಮವಾಗಿದೆ. ಇದರೊಂದಿಗೆ, ಸಿಂಧೂ ನದಿ ಮತ್ತು ಅದರ ಉಪನದಿಗಳಾದ ಝೀಲಂ, ಚೆನಾಬ್, ರಾವಿ, ಬಿಯಾಸ್ ಮತ್ತು ಸಟ್ಲಜ್ಗಳಿಂದ ಪಾಕಿಸ್ತಾನಕ್ಕೆ ನೀರು ಸರಬರಾಜು ಸ್ಥಗಿತಗೊಳ್ಳುತ್ತದೆ. ಈ ನದಿಗಳು ಪಾಕಿಸ್ತಾನಕ್ಕೆ ನೀರು ಸರಬರಾಜು ಮಾಡುತ್ತಿದ್ದು, ಭಾರತ ಸರ್ಕಾರದ ಈ ನಿರ್ಧಾರದಿಂದ ಪಾಕಿಸ್ತಾನದ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತದೆ.
ಸಿಂಧೂ ನದಿ ಮತ್ತು ಅದರ ಉಪನದಿಗಳಲ್ಲಿ ಲಭ್ಯವಿರುವ ನೀರನ್ನು ಬಳಸಲು ಸಿಂಧೂ ಜಲ ಒಪ್ಪಂದವು (ಐಡಬ್ಲ್ಯೂಟಿ) ಭಾರತ ಮತ್ತು ಪಾಕಿಸ್ತಾನದ ನಡುವಿನ ನೀರಿನ ವಿತರಣಾ ಒಪ್ಪಂದವಾಗಿದೆ. 1960ರಲ್ಲಿ ಕರಾಚಿಯಲ್ಲಿ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಆಗಿನ ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಪಾಕಿಸ್ತಾನಿ ಅಧ್ಯಕ್ಷ ಅಯೂಬ್ ಖಾನ್ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದ್ದರು. ಸಿಂಧೂ ನದಿ ನೀರು ಒಪ್ಪಂದಕ್ಕೆ ಸೆಪ್ಟೆಂಬರ್ 19, 1960ರಂದು ಸಹಿ ಹಾಕಲಾಯಿತು. ಭಾರತ ಮತ್ತು ಪಾಕಿಸ್ತಾನದ ನಡುವೆ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಈ ಒಪ್ಪಂದದಂತೆ ಪೂರ್ವದಿಂದ ಭಾರತದೊಳಕ್ಕೆ ಹರಿಯುವ ಮೂರು ನದಿಗಳಾದ ಬಿಯಾಸ್, ರಾವಿ ಮತ್ತು ಸಟ್ಲೆಜ್, ಪಾಕಿಸ್ತಾನದೊಳಕ್ಕೆ ಹರಿಯುವ 3 ಪಶ್ಚಿಮದ ನದಿಗಳಾದ ಸಿಂಧು, ಚೆನಾಬ್ ಮತ್ತು ಝೀಲಂ ನದಿಗಳ ಮೇಲೆ ನಿಯಂತ್ರಣವನ್ನು ಸಾಧಿಸುವುದಾಗಿದೆ. ಸಿಂಧೂ ಜಲ ಒಪ್ಪಂದವು ಸಿಂಧು ನದಿಯ ನೀರಿನ ಗರಿಷ್ಠ ಬಳಕೆಯಲ್ಲಿ ಎರಡೂ ದೇಶಗಳ ಹಕ್ಕಿದೆ. ಭಾರತವು ಪಶ್ಚಿಮ ನದಿ ನೀರನ್ನು ಸೀಮಿತ ನೀರಾವರಿ ಬಳಕೆಗೆ, ವಿದ್ಯುತ್ ಉತ್ಪಾದನೆ, ನ್ಯಾವಿಗೇಷನ್, ಮೀನುಗಾರಿಕೆಗೆ ಬಳಸಲು ಅನುಮತಿಸುತ್ತದೆ. ಈ ಒಪ್ಪಂದದ ಪ್ರಕಾರ, ಶಾಶ್ವತ ಸಿಂಧು ಆಯೋಗವನ್ನು ಸ್ಥಾಪಿಸಲಾಗಿದೆ. ಪ್ರತಿ ದೇಶದಿಂದ ಆಯುಕ್ತರನ್ನು ಹೊಂದಿರುವ ಈ ಆಯೋಗವು ಪರಸ್ಪರ ಸಹಕಾರ ಕಾರ್ಯವಿಧಾನವನ್ನು ಮೇಲ್ವಿಚಾರಣೆ ಮಾಡುತ್ತದೆ. ಸೃಷ್ಟಿಯಾಗುವ ಸಮಸ್ಯೆಗಳನ್ನು ಚರ್ಚಿಸಲು ಎರಡು ದೇಶಗಳು ವಾರ್ಷಿಕವಾಗಿ ಸಭೆ ನಡೆಸುತ್ತವೆ.
ಸಿಂಧೂ ಜಲ ಒಪ್ಪಂದವು ಪಶ್ಚಿಮ ನದಿಗಳನ್ನು (ಸಿಂಧೂ, ಝೀಲಂ, ಚೆನಾಬ್) ಪಾಕಿಸ್ತಾನಕ್ಕೆ ಮತ್ತು ಪೂರ್ವ ನದಿಗಳನ್ನು (ರವಿ, ಬಿಯಾಸ್, ಸಟ್ಲೆಜ್) ಭಾರತಕ್ಕೆ ಹಂಚಿಕೆ ಮಾಡುವ ಮೂಲಕ ಭಾರತ ಮತ್ತು ಪಾಕಿಸ್ತಾನದ ನಡುವೆ ಸುಸ್ಥಿರ ನೀರಿನ ವಿಭಜನೆಯನ್ನು ಮಾಡಿತ್ತು.
6 ದಶಕಗಳಿಗೂ ಹೆಚ್ಚು ಕಾಲ ರಾಜಕೀಯ ಮತ್ತು ಮಿಲಿಟರಿ ಉದ್ವಿಗ್ನತೆ ಹೆಚ್ಚಾದಾಗಲೂ ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿಯುತ ನೀರು ಹಂಚಿಕೆಗೆ ಅನುಕೂಲವಾಗುವಂತೆ ಸಿಂಧೂ ಜಲ ಒಪ್ಪಂದ (IWT) ನಿರ್ಣಾಯಕ ಪಾತ್ರ ವಹಿಸಿತ್ತು. ಇದೀಗ ಈ ಒಪ್ಪಂದ ರದ್ದುಗೊಂಡಿದೆ. ಇನ್ನೂ ಮುಖ್ಯವಾದ ವಿಷಯವೆಂದರೆ ಈ ಸಿಂಧೂ ಜಲ ಒಪ್ಪಂದ ಏಷ್ಯಾದ 2 ರಾಷ್ಟ್ರಗಳ ನಡುವಿನ ಏಕೈಕ ಗಡಿಯಾಚೆಗಿನ ನೀರು ಹಂಚಿಕೆ ಒಪ್ಪಂದವಾಗಿದೆ. ಈ ಒಪ್ಪಂದವು ಕೆಳ ಭಾಗದಲ್ಲಿರುವ ದೇಶವಾದ ಪಾಕಿಸ್ತಾನಕ್ಕೆ ಅನುಕೂಲಕರವಾಗಿದೆ. ಇದು ಸಿಂಧೂ ನದಿ ವ್ಯವಸ್ಥೆಯ ಸರಿಸುಮಾರು 80% ನೀರಿನ ಪ್ರವೇಶವನ್ನು ನೀಡುತ್ತದೆ.
2001ರ ಭಾರತೀಯ ಸಂಸತ್ತಿನ ದಾಳಿ ಮತ್ತು 2019ರ ಪುಲ್ವಾಮಾ ದಾಳಿ ಸೇರಿದಂತೆ ಹಲವಾರು ಭಯೋತ್ಪಾದಕ ದಾಳಿಗಳು ನಡೆದಾಗಲೂ ಭಾರತ ಸಿಂಧೂ ಜಲ ಒಪ್ಪಂದದಿಂದ ಹಿಂದೆ ಸರಿದಿರಲಿಲ್ಲ. ಆದರೆ, ಈ ಬಾರಿ ಮೋದಿ ಸರ್ಕಾರ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಮೂಲಕ ಪಾಕಿಸ್ತಾನಕ್ಕೆ ತಿರುಗೇಟು ನೀಡಿದೆ.