ರಾಯ್ಪುರ
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿಯೂ ಟಾಸ್ ಸೋತ ಭಾರತ, ಸತತ 20 ಪಂದ್ಯಗಳಲ್ಲಿ ಟಾಸ್ ಸೋಲು ಕಂಡಿತು. 2023ರ ವಿಶ್ವಕಪ್ ಫೈನಲ್ ಪಂದ್ಯದಿಂದ ಆರಂಭವಾದ ಭಾರತದ ಟಾಸ್ ಸೋಲಿನ ಸರದಿ ಇದುವರೆಗೂ ನಿಂತಿಲ್ಲ. ರಾಯ್ಪುರ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಜತೆಗೆ ಆಡುವ ಬಳಗದಲ್ಲಿ ಮೂರು ಬದಲಾವಣೆ ಕೂಡ ಮಾಡಿದೆ.
ಟೆಂಬ ಬವುಮಾ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಮತ್ತೆ ನಾಯಕತ್ವ ವಹಿಸಿಕೊಂಡರು. ಕೇಶವ್ ಮಹಾರಾಜ್ ಮತ್ತು ಲುಂಗಿ ಎನ್‌ಗಿಡಿ ಕೂಡ ತಂಡಕ್ಕೆ ಮರಳಿದರು. ಭಾರತ ಪರ ಯಾವುದೇ ಬದಲಾವಣೆ ಮಾಡಿಲ್ಲ.
ಶಹೀದ್ ವೀರನಾರಾಯಣ ಸಿಂಗ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಕೇವಲ ಎರಡನೇ ಏಕದಿನ ಪಂದ್ಯ ಇದಾಗಿದೆ. ಮೊದಲ ಪಂದ್ಯವನ್ನು 2023ರಲ್ಲಿ ಆಡಲಾಗಿತ್ತು. ಎದುರಾಳಿ ನ್ಯೂಜಿಲ್ಯಾಂಡ್. ಪಂದ್ಯವನ್ನು ಭಾರತ 8 ವಿಕೆಟ್ ಅಂತರದಿಂದ ಗೆದ್ದಿತ್ತು. ಎರಡು ವರ್ಷಗಳ ಬಳಿಕ ಇಲ್ಲಿ ಪಂದ್ಯ ನಡೆಯುತ್ತಿರುವ ಕಾರಣ ಪಿಚ್ ವರ್ತನೆ ಹೇಗಿರಲಿದೆ ಎಂದು ಸ್ಪಷ್ಟವಾಗಿ ಹೇಳುವುದು ಕಷ್ಟಕರ.
ದಕ್ಷಿಣ ಆಫ್ರಿಕಾ ಮತ್ತು ಭಾರತ ತಂಡಗಳು ಇದುವರೆಗೆ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 95 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ದಕ್ಷಿಣ ಆಫ್ರಿಕಾ 51 ಬಾರಿ ಜಯಗಳಿಸಿದೆ. ಭಾರತ 41 ಪಂದ್ಯಗಳಲ್ಲಿ ಗೆದ್ದಿದೆ. ಇದರಲ್ಲೊಂದು ಗೆಲುವು ಈ ಸರಣಿಯಲ್ಲಿ ಒಲಿದಿತ್ತು. 3 ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿವೆ.







