ಚಳ್ಳಕೆರೆ
ಕಳೆದ ಹಲವಾರು ದಶಕಗಳಿಂದ ಗ್ರಾಮೀಣ ಪ್ರದೇಶದ ದೇವರ ಎತ್ತುಗಳು ಸೇರಿದಂತೆ ಎಲ್ಲಾ ಜಾನುವಾರುಗಳಿಗೆ ಮೇವು, ಹಿಂಡಿ ಹಾಗೂ ಬೂಸವನ್ನು ವಿತರಿಸುವ ಮೂಲಕ ಇವುಗಳು ಉತ್ತಮವಾಗಿ ಬದುಕಲು ನೆರವಾಗುತ್ತಿದ್ದು, ನಮ್ಮ ಈ ಕಾರ್ಯಕ್ಕೆ ಬೆಂಗಳೂರಿನ ಇನ್ಪೋಸಿಸ್ ಅಧ್ಯಕ್ಷರು ಸಹಕಾರ ನೀಡುತ್ತಿದ್ಧಾರೆಂದು ಪಾವಗಡ ಶ್ರೀರಾಮಕೃಷ್ಣ ಸೇವಾಶ್ರಮದ ಶ್ರೀಮತ್ ಸ್ವಾಮಿ ಜಪಾನಂದಜೀ ಮಹಾರಾಜ್ ತಿಳಿಸಿದರು.
ಅವರು, ಮಂಗಳವಾರ ಇಲ್ಲಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮದೇವರಹಟ್ಟಿಯ ದೇವರ ಎತ್ತುಗಳು ಮೇವು ಪೂರೈಕೆ ಹಾಗೂ ಅವುಗಳ ಆರೋಗ್ಯ ಕುರಿತಂತೆ ತಾಲ್ಲೂಕು ಆಡಳಿತದೊಂದಿಗೆ ಚರ್ಚಿಸಿದರಲ್ಲದೆ ಯಾವುದೇ ಕಾರಣಕ್ಕೂ ದೇವರ ಎತ್ತುಗಳ ಮೇವು ಪೂರೈಕೆ ಸ್ಥಗಿತಗೊಳಿಸದಂತೆ ಮನವಿ ಮಾಡಿದರು.
ಜಾನುವಾರುಗಳ ಮೇವು ಪೂರೈಕೆಗೆ ತಗಲುವ ವೆಚ್ಚವನ್ನು ಆಶ್ರಮವತಿಯಿಂದ ನೀಡಲಾಗುವುದು. ಅವಶ್ಯವಿದ್ದಲ್ಲಿ ಜಿಲ್ಲಾಧಿಕಾರಿಗಳೊಂದಿಗೂ ಸಹ ಚರ್ಚಿಸಿ ಯಾವುದೇ ಕಾರಣಕ್ಕೂ ಈ ಕ್ಷೇತ್ರ ವ್ಯಾಪ್ತಿಯ ದೇವರ ಎತ್ತುಗಳು ಸೇರಿದಂತೆ ಯಾವುದೇ ಜಾನುವಾರುಗಳು ಮೇವಿಲ್ಲದೆ ಸಾಯುವ ಸ್ಥಿತಿ ಉಂಟಾಗದಂತೆ ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.
ಈಗಾಗಲೇ ಪಾವಗಡ, ಮೊಳಕಾಲ್ಮೂರು ಮತ್ತು ಚಳ್ಳಕೆರೆ ತಾಲ್ಲೂಕಿನ ಸುಮಾರು 20ಕ್ಕೂ ಹೆಚ್ಚು ಗ್ರಾಮಗಳಿಗೆ ಅಂದಾಜು 350ಕ್ಕೂ ಹೆಚ್ಚು ಟನ್ ಮೇವು ವಿತರಿಸಲಾಗಿದೆ. ಅಲ್ಲದೆ ಹಿಂಡಿ ಮತ್ತು ಬೂಸವನ್ನು ಸಹ ವಿತರಣೆ ಮಾಡಲಾಗುತ್ತಿದೆ. ಪಾವಗಡ ತಾಲ್ಲೂಕಿನ ಸುಮಾರು 5 ಗ್ರಾಮಗಳಲ್ಲಿ ಚಳ್ಳಕೆರೆ ತಾಲ್ಲೂಕಿನ 8 ಗ್ರಾಮಗಳಲ್ಲಿ, ಮೊಳಕಾಲ್ಮೂರು ತಾಲ್ಲೂಕಿನ 6 ಗ್ರಾಮಗಳಲ್ಲಿ ಈಗಾಗಲೇ ಉಚಿತವಾಗಿ ಮೇವು, ಹಿಂಡಿ, ಬೂಸವನ್ನು ನೀಡಲಾಗುತ್ತಿದೆ ಎಂದರು.
ಎರಡೂ ತಾಲ್ಲೂಕುಗಳ ಯಾವುದೇ ಗ್ರಾಮಗಳಲ್ಲಾಗಿ ದೇವರ ಎತ್ತುಗಳಿಗೆ ಮೇವಿಲ್ಲದೆ ಪರಿತಪಿಸುವ ಸ್ಥಿತಿ ಇದ್ದಲ್ಲಿ ಕೂಡಲೇ ತಮ್ಮನ್ನು ಸಂಪರ್ಕಿಸಿದರೆ ಉಚಿತವಾಗಿ ಮೇವನ್ನು ವಿತರಣೆ ಮಾಡಲಾಗುವುದು ಎಂದರು. ದೇವರ ಎತ್ತುಗಳಿಗೆ ಕೇವಲ ಮೇವು ಹಿಂಡಿ ನೀಡುವುದಷ್ಟೇಯಲ್ಲದೆ ಅವುಗಳ ಆರೋಗ್ಯದ ಕಡೆಗೂ ಸಹ ಗಮನ ನೀಡಬೇಕಿದೆ. ದೇವರ ಎತ್ತುಗಳು ವಾಸಿಸುವ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದ್ದು ಕಡೇ ಪಕ್ಷ ಜಾನುವಾರುಗಳು ನೆರಳಿನಲ್ಲಾದರೂ ಬದುಕುವಂತಾಗಬೇಕು, ಈ ನಿಟ್ಟಿನಲ್ಲಿ ಜಿಲ್ಲಾಡಳಿತ ನಮಗೆ ಹೆಚ್ಚಿನ ಸಹಕಾರ ನೀಡುವುದು ಎಂಬ ಆಶಾಭಾವನೆ ನಮಗೆ ಇದೆ ಎಂದರು.
ತಹಶೀಲ್ದಾರ್ ತುಷಾರ್ ಬಿ.ಹೊಸೂರ್ ಮಾತನಾಡಿ, ನನ್ನಿವಾಳ ದೇವರ ಎತ್ತುಗಳು ಸೇರಿದಂತೆ ತಾಲ್ಲೂಕಿನ ವಿವಿಧೆಡೆಗಳಲ್ಲಿ ಮೇವಿನ ಅಭಾವದಿಂದ ಯಾವುದೇ ಜಾನುವಾರುಗಳು ಸಾವನಪ್ಪದಂತೆ ಎಚ್ಚರಿಕೆ ವಹಿಸಲಾಗುವುದು. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಉಪವಿಭಾಗಾಧಿಕಾರಿಗಳ ಮಾರ್ಗದರ್ಶನದಲ್ಲಿ ಕೆಲವೊಂದು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ದೇವರ ಎತ್ತುಗಳ ಕಿಲಾರಿಗಳು ನಿಶಕ್ತವಾದ ಹಸುಗಳನ್ನು ಹೊರಗೆ ಸಂರಕ್ಷಣೆಗೆ ಬಿಡುವುದಿಲ್ಲ.
ಹಾಗಾಗಿ ಆಶ್ರಮದಲ್ಲಿಯೇ ಚಿಕಿತ್ಸೆ ನೀಡುವ ಅನಿವಾರ್ಯತೆ ಉಂಟಾಗಿದೆ. ಪಶುವೈದ್ಯ ಇಲಾಖೆಯ ಡಾ.ಬಿ.ಹನುಮಪ್ಪ ಮತ್ತು ಅವರ ಸಿಬ್ಬಂದಿ ಅಲ್ಲಿರುವ ಎಲ್ಲಾ ಜಾನುವಾರುಗಳ ಆರೋಗ್ಯ ತಪಾಸಣೆಯನ್ನು ಪೂರೈಸಿದ್ದಾರೆ. ಯಾವುದೇ ತೊಂದರೆ ಎದುರಾದಲ್ಲಿ ಕೂಡಲೇ ತಾಲ್ಲೂಕು ಕಚೇರಿಯನ್ನು ಸಂಪರ್ಕಿಸುವಂತೆ ಅವರು ಮನವಿ ಮಾಡಿದರು.
ಪಶುವೈದ್ಯಾಧಿಕಾರಿ ಡಾ.ಹನುಮಪ್ಪ ಮಾತನಾಡಿ, ಅಲ್ಲಿನ ಕಿಲಾರಿಗಳು ದೇವರ ಎತ್ತುಗಳನ್ನು ಹೊರಗೆ ಕಳುಹಿಸಲು ಹಿಂದೇಟು ಹಾಕುತ್ತಾರೆ. ಅಲ್ಲಿರುವ ಕೆಲವು ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆಯ ಅವಶ್ಯಕತೆ ಇದ್ದು, ಇದಕ್ಕೆ ಅವಕಾಶ ಮಾಡಿಕೊಡಲಾಗುತ್ತಿಲ್ಲ. ಆದ್ದರಿಂದ ಅನಿವಾರ್ಯವಾಗಿ ಜಾನುವಾರುಗಳು ನಿತ್ರಾಣದ ಸ್ಥಿತಿಯಲ್ಲಿ ಸಾವು ಬದುಕಿನ ಹೋರಾಟ ನಡೆಸುತ್ತಿದ್ದು, ಈ ಬಗ್ಗೆ ಅವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಾರ್ಗದರ್ಶನ ನೀಡಿದ ನಂತರ ಜಾನುವಾರುಗಳ ಚಿಕಿತ್ಸೆಗೆ ಕಿಲಾರಿಗಳು ಒಪ್ಪಿಗೆ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಅಲ್ಲಿ ಸಾವನಪ್ಪಲಿದ್ದ ಎರಡು ಜಾನುವಾರುಗಳನ್ನು ಸಂರಕ್ಷಿಸಿದ್ದು, ಯಾವುದೇ ರೀತಿಯ ರೋಗಗಳು ಅಲ್ಲಿನ ಜಾನುವಾರುಗಳಲ್ಲಿ ಕಾಣಿಸಿಕೊಂಡಲ್ಲಿ ತಕ್ಷಣವೇ ಮಾಹಿತಿ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮೇವು ಸರಬರಾಜು ವ್ಯವಸ್ಥಾಪಕ ವರುಣ್, ಸಿ.ಪಿ.ಮಹೇಶ್‍ಕುಮಾರ್, ಸಿದ್ದೇಶ್, ರಾಜಣ್ಣ, ತಿಪ್ಪೇಸ್ವಾಮಿ, ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
