ಮಧುಗಿರಿ:
ಎತ್ತಿನಹೊಳೆ ಯೋಜನೆ ವಂಚಿತ ಕೆರೆಗಳಿಗೆ ಕುಮಾರಧಾರಾ ನೀರಾವರಿ ಯೋಜನೆಯ ಮೂಲಕ ನೀರು ಹರಿಸುವಂತೆ ರೈತರ ನಿಯೋಗವು ಕಾವೇರಿ ನೀರಾವರಿ ನಿಗಮದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಜಯಪ್ರಕಾಶ್ ರವರನ್ನು ಬೆಂಗಳೂರಿನ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
ಮಧುಗಿರಿ ತಾಲ್ಲೂಕು ಮಿಡಿಗೇಶಿ ಹೋಬಳಿ ನೇರಳೆಕೆರೆ ಮತ್ತು ವೀರಾಪುರದಿಂದ ತೆರಳಿದ ರೈತರ ನಿಯೋಗವು ಸರಕಾರವು ಈಗಾಗಲೇ ಎತ್ತಿನಹೊಳೆ ಯೋಜನೆಗೆ ಸುಮಾರು 30 ಸಾವಿರ ಕೋಟಿ ರೂ. ಖರ್ಚು ಮಾಡಿ ಬರಪೀಡಿತ 8 ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು ಜಿಲ್ಲೆಗಳಿಗೆ ಸುಮಾರು 24 ಟಿಎಂಸಿ ನೀರನ್ನು ಹಂಚಲಿದೆ.
ಆದರೆ ಈ ಭಾಗದಲ್ಲಿ 5 ಕಿಲೊಮೀಟರ್ ದೂರದಲ್ಲಿ ಪೈಪ್ ಲೈನ್ ಹೋಗಿದ್ದರೂ ನೀರಿನ ಹಂಚಿಕೆ ಪೂರ್ಣವಾಗಿರುವುದರಿಂದ ಪ್ರಸ್ತುತ ಎತ್ತಿನಹೊಳೆ ಯೋಜನೆಯಲ್ಲಿ ನೀರು ಲಭ್ಯತೆ ಇರುವುದಿಲ್ಲವಾದ್ದರಿಂದ ನೇತ್ರಾವತಿ ನದಿ ಪಾತ್ರದಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ನೀರಾವರಿ ತಜ್ಞ ವೇದಾನಂದ ಮೂರ್ತಿಯವರ ವರದಿಯ ಪ್ರಕಾರ ಸುಮಾರು 420 ಟಿಎಂಸಿ ನೀರು ಸಮುದ್ರಕ್ಕೆ ಹರಿದು ಹೋಗುತ್ತಿದೆ.
ಕೇಂದ್ರ ಸರಕಾರದ ಆದೇಶದಂತೆ ಪರಿಸರಕ್ಕೆ ಯಾವುದೆ ಹಾನಿಯಾಗದಂತೆ 30 ಪರ್ಸೆಂಟ್ ನೀರನ್ನು ನೀರಾವರಿ ಯೋಜನೆಗಳಿಗೆ ಬಳಸಲು ಅನುಮತಿಯಿದೆ ಎಂದು ಪತ್ರದಲ್ಲಿ ಉಲ್ಲೇಖಸಿದ್ದಾರೆ.
ಈಗಾಗಲೇ ರಾಜ್ಯ ಹಾಗೂ ಕೇಂದ್ರ ಸರಕಾರ ಮತ್ತು ಲೋಕಸಭಾ ಸದಸ್ಯ ಜಿ.ಎಸ್. ಬಸವರಾಜು ಹಾಗೂ ಕುಂದರನಹಳ್ಳಿ ರಮೇಶ್ ಯೋಜನೆ ಬಗ್ಗೆ ಸಮಗ್ರ ನೀರಾವರಿಗೆ ಮಾಸ್ಟರ್ ಪ್ಲಾನ್ ಮಾಡಿದ್ದು, ಇದರಲ್ಲಿ ಕುಮಾರಧಾರಾ ಯೋಜನೆಯನ್ನು ಪ್ರಥಮವಾಗಿ ತೆಗೆದುಕೊಳ್ಳಲು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಮನವಿ ಮಾಡಿರುತ್ತಾರೆ. ಆದುದರಿಂದ ಈ ವಿಸ್ತೃತ ವರದಿಯನ್ನು ಸಿದ್ಧಪಡಿಸಿ ಈ ಯೋಜನೆಯನ್ನು ಅನುಮೋದಿಸಬೇಕೆಂದು ಒತ್ತಾಯಿಸಿದರು.
ನಿಯೋಗದಲ್ಲಿ ಸಂಘಟನಾಕಾರ ಸಿದ್ದಗಂಗಪ್ಪ ಹಾಗೂ ರೈತರ ನಿಯೋಗದ ಕೆಂಚಪ್ಪ, ಸಿದ್ದರಾಮಯ್ಯ, ಲೋಕಮಾತಾ, ಇಂದ್ರಕುಮಾರ್, ಕರಿಯಣ್ಣ, ಶಿವಣ್ಣ, ತಿಪ್ಪೇಸ್ವಾಮಿ, ನಿಜಲಿಂಗಪ್ಪ, ಸಿದ್ದಪ್ಪ, ರಮೇಶ್ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ