ಅಫ಼್ಘಾನ್ :
ಅಫ್ಘಾನಿಸ್ತಾನದ ಪಶ್ಚಿಮ ಘೋರ್ ಪ್ರಾಂತ್ಯದ ರಾಜಧಾನಿ ಫಿರೋಜ್ ಕೊವಾದಲ್ಲಿನ ಪ್ರಾಂತೀಯ ಪೊಲೀಸ್ ಕಚೇರಿಯ ಹೊರಗೆ ಪ್ರಬಲ ಸ್ಫೋಟ ಸಂಭವಿಸಿದ ಪರಿಣಾಮ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ ಮತ್ತು 90 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ಅವಶೇಷಗಳ ಅಡಿಯಲ್ಲಿ ಇನ್ನಷ್ಟು ಜನ ಸಿಲುಕಿ ಹಾಕಿಕೊಂಡಿರುವ ಸಾಧ್ಯತೆ ಇದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸಾವುನೋವುಗಳ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಪ್ರಾಂತೀಯ ಆರೋಗ್ಯ ನಿರ್ದೇಶನಾಲಯದ ಅಬ್ದುಲ್ ಲತೀಫ್ ರಹೀಮಿ ಕ್ಸಿನ್ಹುವಾಕ್ಕೆ ತಿಳಿಸಿದರು. ಗಾಯಗೊಂಡ ಅನೇಕರ ಸ್ಥಿತಿ ಗಂಭೀರವಾಗಿದೆ ಎಂದು ಅವರು ಹೇಳಿದರು.
ಪ್ರಾಂತೀಯ ಪೊಲೀಸ್ ಇಲಾಖೆ ಮತ್ತು ಇತರ ಹಲವಾರು ಸರ್ಕಾರಿ ಕಚೇರಿಗಳು ಇರುವ ಪ್ರದೇಶದಲ್ಲಿ ರಸ್ತೆಯಲ್ಲಿ ಸ್ಫೋಟಕ ತುಂಬಿದ ಮಿನಿ ಬಸ್ ಬೆಳಿಗ್ಗೆ 11: 15 ಕ್ಕೆ ಸ್ಫೋಟ ಗೊಂಡಿದೆ ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ .ಸದ್ಯ ಮುನ್ನೆಚ್ಚರಿಕೆ ಕ್ರಮಗಳಿಗಾಗಿ ಭದ್ರತಾ ಪಡೆಗಳು ಈ ಪ್ರದೇಶವನ್ನು ಸುತ್ತುವರೆದಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ